ಮುಂದಿನ ಪೀಳಿಗೆಗೆ ಭೂಮಿ ಕೊಡುಗೆ ನೀಡಿ: ಟಿ.ಡಿ.ರಾಜೇಗೌಡ

KannadaprabhaNewsNetwork |  
Published : Jan 13, 2025, 12:46 AM IST
೧೨ಬಿಹೆಚ್‌ಆರ್ ೨: ಬಾಳೆಹೊನ್ನೂರಿನ ಗ್ರೀನ್ ಬಯೋಟೆಕ್ ಸಂಸ್ಥೆಯು ನೂತನವಾಗಿ ಹೊರತಂದಿರುವ ಕೃಷಿ ಕ್ಷೇತ್ರದ ಜೈವಿಕ ಗೊಬ್ಬರಗಳನ್ನು ಶಾಸಕ ಟಿ.ಡಿ.ರಾಜೇಗೌಡ ಬಿಡುಗಡೆಗೊಳಿಸಿದರು. ಡಾ.ನವೀನ್ ಲಾಯ್ಡ್ ಮಿಸ್ಕಿತ್, ದಿನೇಶ್ ದೇವವೃಂದ, ಡಾ. ಎಂ.ತಿರುಮಲೇಶ್, ಚಂದ್ರಕುಮಾರ್, ಸುಜಿತ್ ಇದ್ದರು. | Kannada Prabha

ಸಾರಾಂಶ

ಬಾಳೆಹೊನ್ನೂರು, ಇಂದಿನ ಕೃಷಿಕರು, ಬೆಳೆಗಾರರು ಜೈವಿಕ, ಸಾವಯವ ಗೊಬ್ಬರಗಳನ್ನು ಬಳಕೆ ಮಾಡಿ ಮೂಲಕ ಭೂಮಿ ಫಲವತ್ತತೆ ಉಳಿಸಿ ಮುಂದಿನ ಪೀಳಿಗೆಗೆ ಭೂಮಿಯನ್ನು ಕೊಡುಗೆಯಾಗಿ ನೀಡಬೇಕಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಪಟ್ಟಣದ ಗ್ರೀನ್ ಬಯೋಟೆಕ್ ಸಂಸ್ಥೆಯ ಜೈವಿಕ ಗೊಬ್ಬರ ತಯಾರಿಕಾ ಘಟಕ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಇಂದಿನ ಕೃಷಿಕರು, ಬೆಳೆಗಾರರು ಜೈವಿಕ, ಸಾವಯವ ಗೊಬ್ಬರಗಳನ್ನು ಬಳಕೆ ಮಾಡಿ ಮೂಲಕ ಭೂಮಿ ಫಲವತ್ತತೆ ಉಳಿಸಿ ಮುಂದಿನ ಪೀಳಿಗೆಗೆ ಭೂಮಿಯನ್ನು ಕೊಡುಗೆಯಾಗಿ ನೀಡಬೇಕಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.ಪಟ್ಟಣದ ಗ್ರೀನ್ ಬಯೋಟೆಕ್ ಸಂಸ್ಥೆ ನೂತನವಾಗಿ ಆರಂಭಿಸಿರುವ ಜೈವಿಕ ಗೊಬ್ಬರ ತಯಾರಿಕಾ ಘಟಕ, ಪ್ರಯೋಗಾಲಯ ಹಾಗೂ ಜೈವಿಕ ಗೊಬ್ಬರವನ್ನು ಭಾನುವಾರ ಬಿಡುಗಡೆಗೊಳಿಸಿ ಮಾತನಾಡಿದರು. ಇಂದಿನ ದಿನಗಳಲ್ಲಿ ಅನಗತ್ಯವಾದ ರಸಗೊಬ್ಬರ ಬಳಕೆ ಪರಿಣಾಮ ಮಣ್ಣಿನ ಫಲವತ್ತತೆ ಕಡಿಮೆ ಆಗುತ್ತಿದೆ. ಕೃಷಿಯಲ್ಲಿ ಹಲವು ಸಮಸ್ಯೆಗಳನ್ನು ನಾವುಗಳೇ ತಂದು ಕೊಳ್ಳುತ್ತಿದ್ದೇವೆ. ಹಿಂದಿನ ಕಾಲದ ಪ್ರಕೃತಿ, ವಾತಾವರಣ ಎಲ್ಲರಿಗೂ ಪೂರಕವಾಗಿತ್ತು. ಆದರೆ ಇಂದು ಮನುಷ್ಯ ದುರಾಸೆ , ಅಧಿಕ ಬೆಳೆಯ ಆಸೆಯಿಂದ ವರ್ಷಕ್ಕೆ ಮೂರ‍್ನಾಲ್ಕು ಬಾರಿ ರಸಗೊಬ್ಬರವನ್ನು ಭೂಮಿಗೆ ನೀಡಿ ವಿಷಮಯ ಮಾಡುತ್ತಿದ್ದಾನೆ ಎಂದು ವಿಷಾಧಿಸಿದರು.

ಇದರಿಂದ ಮಣ್ಣು ತನ್ನ ನೈಜತೆ ಕಳೆದುಕೊಳ್ಳಲಿದೆ. ನಾನು ಸಹ ಸ್ವತಃ ಕೃಷಿಕನಾಗಿದ್ದು ಹೊಸದುರ್ಗದಲ್ಲಿ ೮೦ ಎಕರೆ ಭೂಮಿಯಲ್ಲಿ ಸಂಪೂರ್ಣ ಸಾವವಯ, ಜೈವಿಕ ಗೊಬ್ಬರ ಬಳಸಿ ಉತ್ತಮ ದಾಳಿಂಬೆ ಬೆಳೆ ಬೆಳೆದು ಮಾರುಕಟ್ಟೆಯಲ್ಲಿ ಒಳ್ಳೆಯ ದರವನ್ನು ಪಡೆದಿದ್ದೇನೆ. ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಗೆ ಬರುತ್ತಿರುವ ಹಲವು ನಕಲಿ ಗೊಬ್ಬರಗಳ ಬಗ್ಗೆ ಅಧಿಕಾರಿಗಳು ಗಮನಹರಿಸಿ ನೈಜ ಗೊಬ್ಬರವನ್ನು ರೈತರಿಗೆ ತಲುಪಿಸಿ ಎಂದರು.ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ ಮಾತನಾಡಿ, ಭವಿಷ್ಯದಲ್ಲಿ ಕಾಫಿಯನ್ನು 4 - 5ನೇ ಸ್ಥಾನಕ್ಕೆ ತರಬೇಕು ಎಂಬ ಚಿಂತನೆ ಕಾಫಿ ಮಂಡಳಿಯಲ್ಲಿದ್ದು, ಈ ಉದ್ದೇಶ ಈಡೇರಲು ಕಾಫಿ ಬೆಳೆ ಉತ್ಪಾದನೆ ಹೆಚ್ಚುಗೊಳಿಸಬೇಕಿದೆ. ಬೆಳೆಗಾರರು ಕೃಷಿಯಲ್ಲಿ ತಾಂತ್ರಿಕತೆ ಅಳವಡಿಸಿಕೊಳ್ಳಬೇಕಿದೆ. ಕಳೆದ ವರ್ಷ ಕಾಫಿ ಸಂಶೋಧನಾ ಕೇಂದ್ರದಿಂದ ಪರೀಕ್ಷೆ ಮಾಡಿದ 5 ಸಾವಿರ ಮಣ್ಣಿನ ಸ್ಯಾಂಪಲ್‌ಗಳಲ್ಲಿ ಹೆಚ್ಚಾಗಿ ಮಣ್ಣಿನ ಹುಳಿಸಾರ ಕಂಡುಬಂದಿದೆ. ಇದರ ನಿರ್ವಹಣೆಗೆ ಜೈವಿಕ ಗೊಬ್ಬರ ಬಳಸುವ ಅಗತ್ಯವಿದೆ.

ಭಾರತದಲ್ಲಿ ಸುಮಾರು 1.45 ಲಕ್ಷದಷ್ಟು ಬೆಳೆಗಾರರು ಕಾಫಿಯನ್ನು ಸಾವಯವ ಕೃಷಿಯಲ್ಲಿ ಬೆಳೆಯುತ್ತಿದ್ದು, ಇಂತಹ ಬೆಳೆಗೆ ಉತ್ತಮ ಬೆಲೆಯಿದೆ. ಕಾಫಿ ಬೆಳೆಗಾರರು ಕಾಫಿಗೆ ಇಂದು ಯಾವ ಬೆಲೆ ಇರುತ್ತದೋ ಆ ಬೆಲೆಗೆ ಮಾರಾಟ ಮಾಡಿ ಆನಂದ ಪಡೆಯಬೇಕು. ಹೆಚ್ಚು ಬೆಲೆಗೆ ಕಾಯುತ್ತ ಕುಳಿತರೆ ಇರುವ ಬೆಲೆಯನ್ನು ಕಳೆದುಕೊಳ್ಳವ ಸ್ಥಿತಿ ಬರಬಹುದು.ಪ್ರಸ್ತುತ ಕಾಫಿ ಮಂಡಳಿ ವರ್ಷ 100 ಪೂರೈಸುತ್ತಿರುವ ಹಿನ್ನೆಲೆಯಲ್ಲಿ ವಿಶೇಷ ಸಂಶೋಧನೆಗಳನ್ನು ನಡೆಸುತ್ತಿದ್ದು, ಆಸಕ್ತರಿಗೆ ಈಗಾಗಲೇ ಸಂಶೋಧನೆಗಾಗಿ ಬ್ಲಾಕ್‌ಗಳನ್ನು ವಿತರಿಸಲಾಗಿದೆ ಎಂದರು.

ಗ್ರೀನ್ ಬಯೋಟೆಕ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಡಾ.ನವೀನ್ ಲಾಯ್ಡ್ ಮಿಸ್ಕಿತ್ ಮಾತನಾಡಿ, ದೇಶದಲ್ಲಿ ಹಸಿರು ಕ್ರಾಂತಿ ಬಳಿಕ ರಸಗೊಬ್ಬರ ಬಳಕೆ ಹೆಚ್ಚಾಗಿ ಭೂಮಿಯಲ್ಲಿನ ಜೀವಾಣುಗಳ ಸಂಖ್ಯೆ ಶೇ.92ರಷ್ಟು ಕುಸಿತವಾಗಿದೆ. ಇದು ಆತಂಕಕಾರಿ ವಿಷಯ. ಹವಾಮಾನದಲ್ಲಿ ದಿನದಿಂದ ದಿನಕ್ಕೆ ಬದಲಾವಣೆಯಾಗುತ್ತಿದ್ದು, ಆಮ್ಲಜನಕ, ಇಂಗಾಲದ ಪ್ರಮಾಣ ಕುಸಿದರೆ, ಮುಂದೊಂದು ದಿನ ಮರುಭೂಮಿಯಂತಾಗುವ ಆತಂಕ ಇದೆ ಎಂದರು.

ಈ ಹಿನ್ನೆಲೆಯಲ್ಲಿ ಗ್ರೀನ್ ಬಯೋಟೆಕ್ ಸಂಸ್ಥೆ ರೈತರು ಸಂಪೂರ್ಣ ಜೈವಿಕ, ಸಾವಯವ ಕೃಷಿ ಅಳವಡಿಸಿಕೊಳ್ಳಬೇಕು ಹಾಗೂ ತಮ್ಮ ಕೃಷಿ ಭೂಮಿಗಳಲ್ಲಿ ಜೀವಾಣುಗಳನ್ನು ಕಾಪಾಡಿಕೊಳ್ಳಲಿ ಎಂಬ ಉದ್ದೇಶದಿಂದ ಜೈವಿಕ ಗೊಬ್ಬರವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ ಎಂದರು.

ಮುನಿರಾಬಾದ್‌ನ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಎಂ.ತಿರುಮಲೇಶ್, ಬಿ.ಕಣಬೂರು ಗ್ರಾಪಂ ಅಧ್ಯಕ್ಷ ರವಿಚಂದ್ರ, ಎಂಎಡಿಬಿ ಮಾಜಿ ಅಧ್ಯಕ್ಷೆ ಬಿ.ಸಿ.ಗೀತಾ, ಕಾಫಿ ಮಂಡಳಿ ಸದಸ್ಯ ಭಾಸ್ಕರ್ ವೆನಿಲ್ಲಾ, ಗ್ರೀನ್ ಬಯೋಟೆಕ್ ವ್ಯವಸ್ಥಾಪಕ ಚಂದ್ರಕುಮಾರ್, ಬಿ.ವಿ.ಸುಜಿತ್, ಪ್ರಮುಖರಾದ ಶ್ಯಾಮ್ ಸುಂದರ್, ವಿ.ಟಿ.ತೋಮಸ್, ಎಂ.ಎಸ್.ಜಯಪ್ರಕಾಶ್, ಎಂ.ಎಸ್.ಅರುಣೇಶ್, ಬಸವರಾಜ್ ಹೊನ್ನಾಳಿ ಮತ್ತಿತರರು ಹಾಜರಿದ್ದರು.೧೨ಬಿಹೆಚ್‌ಆರ್ ೨:

ಬಾಳೆಹೊನ್ನೂರಿನ ಗ್ರೀನ್ ಬಯೋಟೆಕ್ ಸಂಸ್ಥೆ ನೂತನವಾಗಿ ಹೊರತಂದಿರುವ ಕೃಷಿ ಕ್ಷೇತ್ರದ ಜೈವಿಕ ಗೊಬ್ಬರಗಳನ್ನು ಶಾಸಕ ಟಿ.ಡಿ.ರಾಜೇಗೌಡ ಬಿಡುಗಡೆಗೊಳಿಸಿದರು. ಡಾ.ನವೀನ್ ಲಾಯ್ಡ್ ಮಿಸ್ಕಿತ್, ದಿನೇಶ್ ದೇವವೃಂದ, ಡಾ. ಎಂ. ತಿರುಮಲೇಶ್, ಚಂದ್ರಕುಮಾರ್, ಸುಜಿತ್ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ