ಗದಗ: ಸಾವಿನ ನಂತರ ದೇಹವು ಸುಟ್ಟು ಬೂದಿಯಾಗುತ್ತದೆ ಅಥವಾ ಮಣ್ಣಿನಲ್ಲಿ ಕೊಳೆಯುತ್ತದೆ. ದೇಹದಾನ ಮಾಡುವುದರಿಂದ ದೇಹವು ಅನೇಕ ವೈದ್ಯಕೀಯ ವಿದ್ಯಾರ್ಥಿಗಳ ಬದುಕಿನ ಜ್ಞಾನಕ್ಕೆ ಅಡಿಪಾಯವಾಗುತ್ತದೆ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಡಾ. ರಾಜೇಂದ್ರ ಎಸ್. ಗಡಾದ ತಿಳಿಸಿದರು.
ಪರೋಪಕಾರಂ ಇದಂ ಶರೀರಂ ದೇಹವು ಇತರರ ಸೇವೆಗಾಗಿ ಇದ್ದು, ಮನುಷ್ಯ ಸತ್ತ ಮೇಲೂ ಸಮಾಜದ ಉಪಕಾರ ಮಾಡುವ ಅವಕಾಶವಿರುವುದು ಹಾಗೂ ಮರಣದ ನಂತರ. ಸಮಾಜಕ್ಕೆ ನೀಡುವ ಕೊನೆಯ ಮಹತ್ವದ ಕೊಡುಗೆಯೆಂದರೆ ದೇಹದಾನ ಮತ್ತು ಅಂಗಾಂಗ ದಾನಗಳಾಗಿವೆ. ಅಂಗಾಂಗ ದಾನಗಳಿಂದ ಹಲವು ಜನರ ಬದುಕನ್ನು ಬೆಳಗಿಸಬಹುದು. ಜೀವ ಸಾರ್ಥಕತೆಗಾಗಿ ಹೆಸರು ನೋಂದಾಯಿಸಿ ಎಂದರು. ಅಂಗಾಂಗ ದಾನ ಮತ್ತು ದೇಹದಾನ ಕಾನೂನುಬದ್ಧವಾಗಿದ್ದು, ಒಬ್ಬ ದಾನಿಯು ಹೃದಯ, ಕಿಡ್ನಿ, ಲಿವರ್, ಕಣ್ಣು ಮೇದೋಜೀರಕ ಗ್ರಂಥಿ, ಸಣ್ಣ ಕರುಳು, ಶ್ವಾಸಕೋಶಗಳನ್ನು ದಾನ ಮಾಡುವ ಮೂಲಕ ಅನೇಕ ಜೀವಗಳನ್ನು ಉಳಿಸಬಹುದು. ಮೃತ ವ್ಯಕ್ತಿಯ ಚರ್ಮ ಎಲುಬುಗಳು, ಅಸ್ತಿಮಜ್ಜೆ, ಹೃದಯದ ಕವಾಟ ಮತ್ತು ಕಾರ್ನಿಯ ಮುಂತಾದ ಅಂಗಾಂಶ ದಾನ ಮಾಡುವ ಮೂಲಕ ಹಲವು ಜನರ ಜೀವವನ್ನು ಉಳಿಸಬಹುದು ಎಂದರು.
ಯಾವುದೇ ವಯಸ್ಸು ಮತ್ತು ಅಂಗ ಲಿಂಗಭೇದವಿಲ್ಲದೆ ಅಂಗಾಂಗ ಮತ್ತು ಅಂಗಾಂಶ ದಾನ ಮಾಡಬಹುದು. ಆಸಕ್ತರು ಜೀವಗಳನ್ನು ಉಳಿಸಲು ಅಂಗಾಂಗ ದಾನಕ್ಕೆ ಪ್ರತಿಜ್ಞೆ ಮಾಡಿ ಮತ್ತು ದೇಹದಾನ ಮಾಡಲು ನಿರ್ಧರಿಸಿ ಆ್ಯಪ್ ಮೂಲಕ ಹೆಸರು ನೋಂದಾಯಿಸಿ ಅಂಗಾಂಗ ದಾನಿಗಳಾಗಿ ಜೀವರಕ್ಷಕರಾಗಿ ಜೀವನವನ್ನು ಸಾರ್ಥಕ ಮಾಡಿಕೊಳ್ಳಿ ಎಂದರು. ನಿವೃತ್ತ ಶಿಕ್ಷಕ ಬಸವರಾಜ ಕೋಳೂರು ಮಾತನಾಡಿ, ದೇಹದಾನ ಮತ್ತು ಅಂಗಾಂಗ ದಾನಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಹಮ್ಮಿಕೊಂಡಿರುವುದು ತುಂಬಾ ಸುತ್ಯಾರ್ಹ. ನಾನು ದಂಪತಿ ಸಮೇತರಾಗಿ ಇಂದೇ ದೇಹ ದಾನವನ್ನು ಮಾಡಲು ನಿರ್ಧರಿಸಿದ್ದೇನೆ ಎಂದರು. ನಗರ ಯೋಜನಾ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯ ಬಿ.ಎಂ. ಯರನಾಳ ಮಾತನಾಡಿದರು. ಜಗದೀಶ್ ಚಂದ್ರನಾಡಗೌಡರ, ಡಾ. ಎಲ್.ವಿ. ಪಾಟೀಲ, ವೀರಣ್ಣ ಕೊಟಗಿ, ಶಿವಯ್ಯ ಕಂಬಿ, ಪ್ರೊ. ಎಂ.ಕೆ. ತುಪ್ಪದ, ತಿರ್ಲಾಪುರ್, ಎಸ್.ಎಚ್. ಪಾಟೀಲ, ಗಂಗಾಧರ ಮಲ್ಲಾಡದ, ದಾನಯ್ಯ ಗಣಾಚಾರಿ, ಸುರೇಶ್ ಗಣಾಚಾರಿ, ಎಚ್.ಎನ್. ಕುರಿ, ವಿನಾಯಕ ಪಾನಗಂಟಿ, ಲಕ್ಷ್ಮಣ ಬೈಂದೂರ, ಶಿವಾನಂದ ಹೊಳೆಯಣ್ಣನವರ, ನಿಂಗಪ್ಪ, ಎಂ.ಎನ್. ವಡವಟ್ಟಿ ಸೇರಿದಂತೆ ಮುಂತಾದವರು ಇದ್ದರು.