ಪ್ರತಿಫಲಾಪೇಕ್ಷೆ ಇಲ್ಲದೇ ದಾನ ಮಾಡಿ: ರಾಘವೇಶ್ವರ ಭಾರತೀ ಶ್ರೀಗಳು

KannadaprabhaNewsNetwork |  
Published : May 13, 2024, 12:00 AM ISTUpdated : May 13, 2024, 12:01 AM IST
ಭಾನ್ಕುಳಿ ಶ್ರೀ ರಾಮದೇವ ಮಠದಲ್ಲಿ ದಾನಮಾನ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ  ರಾಘವೇಶ್ವರಭಾರತೀ ಶ್ರೀಗಳು ಆಶೀರ್ವಚನ ನೀಡಿದರು. | Kannada Prabha

ಸಾರಾಂಶ

ನಾವು ಇಟ್ಟುಕೊಂಡಷ್ಟೂ ಭಾರ ಹೆಚ್ಚುತ್ತ ಹೋಗುತ್ತದೆ. ಅದೇ ದಾನ ನೀಡಿದಾಗ ಮನ ಹಗುರಾಗುತ್ತಾ ಹೋಗುತ್ತದೆ.

ಸಿದ್ದಾಪುರ: ಗಂಗೆ- ಯಮುನೆ ಬೆಸೆಯುವ ತ್ರಿವೇಣಿ ಸಂಗಮದಲ್ಲಿ ಅನೇಕ ಉಪನದಿಗಳ ಕೊಡುಗೆಯಿದೆ. ಆದರೆ ಅವುಗಳ ಹೆಸರುಗಳು ಎಲ್ಲೂ ಪ್ರಸ್ತಾಪವಾಗುವುದಿಲ್ಲ. ಅದೇ ರೀತಿ ಒಂದು ಸಂಸ್ಥೆ ಬೆಳೆಯುವಲ್ಲಿ ಅನೇಕರ ಸಹಭಾಗಿತ್ವ ಇರುತ್ತದೆ. ಆದರೆ ಅವರು ಎಲ್ಲೂ ಬಹಿರಂಗವಾಗಿ ಕಾಣಿಸಿಕೊಳ್ಳದೇ ಆದರ್ಶ ಮೆರೆಯುತ್ತಾರೆ. ಗೋ ಸೇವೆಯಂತಹ ಪವಿತ್ರ ಕಾರ್ಯದಲ್ಲಿ ಶ್ರಮ ವಹಿಸಿದರೆ, ಸಮಯ ನೀಡಿದರೆ ನಮ್ಮ ಆಯಸ್ಸಿನ ಒಂದು ಖಂಡವನ್ನು ನೀಡಿದಂತೆ ಎಂದು ರಾಘವೇಶ್ವರಭಾರತೀ ಶ್ರೀಗಳು ತಿಳಿಸಿದರು.

ತಾಲೂಕಿನ ಭಾನ್ಕುಳಿಯ ಶ್ರೀರಾಮ ದೇವಮಠದಲ್ಲಿ ಶಂಕರ ಪಂಚಮಿ ಉತ್ಸವದಲ್ಲಿ ಗೋಸ್ವರ್ಗದ ಗೋಸೇವೆಗೆ ಸ್ಪಂದಿಸಿದ ಶಿಷ್ಯ ಭಕ್ತರಿಗೆ ಆಶೀರ್ವಾದ ನೀಡಲು ಸಂಘಟಿಸಿದ್ದ ದಾನಮಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಫಲಮಂತ್ರಾಕ್ಷತೆ, ಸ್ಮರಣಿಕೆ ಅನುಗ್ರಹಿಸಿ ಅವರು ಆಶೀರ್ವಚನ ನೀಡಿದರು. ನಾವು ದಾನ ಮಾಡುವಾಗ ಮರಳಿ ಏನು ಬರುತ್ತದೆ ಎಂದು ನೋಡಿದರೆ ಅದು ದಾನವಾಗದೇ ವ್ಯವಹಾರವಾಗುತ್ತದೆ. ನೀವೆಲ್ಲರೂ ದಾನ ಮಾಡುವಾಗ ಪ್ರತಿಫಲ ನಿರೀಕ್ಷಿಸದೇ ದಾನ ಮಾಡಿದ್ದರಿಂದ ಈ ಸಂಸ್ಥೆಯ ಚೈತನ್ಯದಲ್ಲಿ ನಿಮ್ಮ ಉಸಿರೂ ಸೇರಿದಂತಾಗಿದೆ. ಎಲ್ಲ ದೇವತೆಗಳನ್ನೂ ತನ್ನ ದೇಹದೊಳಗಿಟ್ಟುಕೊಂಡು ವಿನಮೃತೆ, ಮುಗ್ಧತೆ, ಪ್ರೀತಿ ತೋರುವ ಜೀವ ಗೋವು. ಲೋಕವನ್ನು ನಾಕ ಮಾಡಲು ಹೊರಟಿರುವ ಗೋವುಗಳಿಗೆ ಹಿಂಸೆ ನೀಡಿದರೆ ನರಕ ಪ್ರಾಪ್ತಿಯಾಗುವಲ್ಲಿ ಸಂಶಯವಿಲ್ಲ.

ನಾವು ಇಟ್ಟುಕೊಂಡಷ್ಟೂ ಭಾರ ಹೆಚ್ಚುತ್ತ ಹೋಗುತ್ತದೆ. ಅದೇ ದಾನ ನೀಡಿದಾಗ ಮನ ಹಗುರಾಗುತ್ತಾ ಹೋಗುತ್ತದೆ. ದಾನ ನೀಡುತ್ತಾ ಬಂದರೆ ನಮ್ಮ ದೇಹ ಬಿದ್ದುಹೋದಾಗ ವೈತರಣಿ ದಾಟಲು ದೋಣಿ ಸಿದ್ಧವಾಗಿರುತ್ತದೆ ಎಂದ ಶ್ರೀಗಳು, ಗೋಸೇವೆ ಮಾಡುತ್ತಿರುವ ಸಕಲ ಶಿಷ್ಯಭಕ್ತರಿಗೂ ಒಳಿತಾಗಲೆಂದು ಹರಸಿದರು.

ಥಟ್ ಅಂತ ಹೇಳಿ ಖ್ಯಾತಿಯ ನಾ. ಸೋಮೇಶ್ವರ, ಮಹಾಮಂಡಲ ಅಧ್ಯಕ್ಷ ಮೋಹನ ಹೆಗಡೆ ಹೆರವಟ್ಟಾ, ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಗೌರವಾಧ್ಯಕ್ಷ ಆರ್.ಎಸ್. ಹೆಗಡೆ ಹರಗಿ, ಸಿದ್ದಾಪುರ ಮಂಡಲ ಅಧ್ಯಕ್ಷ ಮಹೇಶ ಚಟ್ನಳ್ಳಿ ಸೇರಿದಂತೆ ರಾಜ್ಯದ ನಾನಾ ಭಾಗಗಳ ಶಿಷ್ಯ ಭಕ್ತರು ಪಾಲ್ಗೊಂಡಿದ್ದರು. ಗೋಸ್ವರ್ಗ ಸಮಿತಿಯ ಎಂ.ಜಿ. ರಾಮಚಂದ್ರ ಮರ್ಡುಮನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ದಾನಮಾನ ಸ್ವೀಕರಿಸಿದವರ ಪರವಾಗಿ ಡಿ.ವಿ. ರವೀಂದ್ರನಾಥ ಸಾಗರ ಮಾತನಾಡಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ