ಕನ್ನಡಪ್ರಭ ವಾರ್ತೆ ಹಾನಗಲ್ಲ
ಒಂದೂವರೆ ಶತಮಾನ ದಾಟಿದ ಶಾಲೆಯ ಅಭಿವೃದ್ಧಿಗಾಗಿ ಪಾಲಕರೇ ಹೊಸ ಕ್ಯೂಆರ್ ಕೋಡ್ ಮೂಲಕ ದೇಣಿಗೆ ಸಂಗ್ರಹಿಸಿ ಪಾರದರ್ಶಕವಾಗಿ ಕೆಲಸ ಮಾಡುವ ಹೊಸ ಯೋಜನೆ ಮಾದರಿಯಾಗಿದೆ ಎಂದು ಹುಬ್ಬಳ್ಳಿಯ ಮೂರುಸಾವಿರಮಠದ ಡಾ. ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು ತಿಳಿಸಿದರು.ಬುಧವಾರ ಇಲ್ಲಿನ ಶಾಸಕರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ರಾಜ್ಯದಲ್ಲಿಯೇ ಪ್ರಪ್ರಥಮ ಎನ್ನುವಂತೆ ಕ್ಯೂಆರ್ ಕೋಡ್ ಮೂಲಕ ಶಾಲೆಗೆ ದೇಣಿಗೆ ಪಡೆದು ಶಾಲೆಯ ಅಭಿವೃದ್ಧಿಗೆ ಮುಂದಾಗುವ ಹೊಸ ಯೋಜನೆಯ ಕ್ಯೂಆರ್ ಕೋಡ್ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಶಿಕ್ಷಣವೇ ಶಕ್ತಿ. ಅದು ನಮ್ಮ ಬದುಕಿನ ಬಳವಣಿಗೆಗೆ ಅತ್ಯವಶ್ಯ. ಈ ಶಾಲೆಯ ಶಾಲಾಭಿವೃದ್ಧಿ ಸಮಿತಿ ವಿನೂತನವಾದ ರೀತಿಯಲ್ಲಿ ದೇಣಿಗೆ ಸಂಗ್ರಹಿಸುವ ಮತ್ತು ಪಾರಕದರ್ಶಕವಾಗಿ ಅಭಿವೃದ್ಧಿಗೆ ಬಳಸುವ ಸಂಕಲ್ಪ ಮಾಡಿರುವುದು ಮಾದರಿಯೇ ಆಗಿದೆ. ಇದು ಹೊಸ ಚಿಂತನೆಯಾದರೂ ಇದರಲ್ಲಿ ಶಾಲೆಯ ಕಳಕಳಿ ಅತ್ಯಂತ ಮುಖ್ಯವಾಗಿದೆ. ಶಿಕ್ಷಣದ ವಿಷಯದಲ್ಲಿ ಸರ್ಕಾರದ ಅನುದಾನಕ್ಕಿಂತ ಪಾಲಕರ ಅಭಿವೃದ್ಧಿ ಚಿಂತನೆ ಮೆಚ್ಚುವಂತಹದ್ದು. ಸರ್ಕಾರಿ ಖಾಸಗಿ ಶಾಲೆಗಳೆಂಬ ಭೇದಕ್ಕೆ ಅವಕಾಶವಿಲ್ಲದಂತೆ ಶಿಕ್ಷಣಕ್ಕೆ ಆದ್ಯತೆ ನೀಡುವ ಅಗತ್ಯವಿದೆಯಾದರೂ, ಅಧಿಕಾರಿಗಳು ಸೌಲಭ್ಯಗಳ ವಿಷಯದಲ್ಲಿ ಪರಾಮರ್ಶೆ ಮಾಡುವಾಗ ಶಾಲೆಗಳನ್ನು ನೋಡುವ ದೃಷ್ಟಿ ಬದಲಾಗಿರುತ್ತದೆ ಎಂದರು.
ಮೊದಲು ಕ್ಯೂರ್ ಕೋಡ್ ಬಳಸಿ ₹೨೫ ಸಾವಿರ ದೇಣಿಗೆ ನೀಡಿದ ಉದ್ಯಮಿ ಎಚ್.ಎಚ್. ರವಿಕುಮಾರ ಮಾತನಾಡಿ, ದೇವರು ಕೊಟ್ಟಾಗ ದಾನ ಮಾಡಬೇಕು. ಅದು ಸತ್ಪಾತ್ರಕ್ಕೆ ಸಲ್ಲಬೇಕು. ಶಾಲೆಗಳು ಬದುಕಿನ ಯಶಸ್ಸಿನ ಮಾರ್ಗದರ್ಶಕ ಕೇಂದ್ರಗಳು. ಹಿಂದೆ ಗುರುಗಳು ಅಗತ್ಯಬಿದ್ದಾಗ ಶಿಕ್ಷೆ ನೀಡಿಯಾದರೂ ಶಿಕ್ಷಣ ನೀಡುತ್ತಿದ್ದರು. ಆದರೆ ಈಗ ಶಿಕ್ಷಕರೂ ಕೂಡ ತೀರ ಕಾಳಜಿ ವಹಿಸುವುದು ಕಷ್ಟಕರವಾಗಿದೆ. ಪಾಲಕರು ಶಿಕ್ಷಕರನ್ನು ತಮ್ಮ ಮಕ್ಕಳ ಹಿತ ಚಿಂತಕರು ಎಂದು ತಿಳಿಯದೇ ಶಿಕ್ಷಕರನ್ನು ದೂರುವ ಸಂಗತಿ ಅವರ ಮಕ್ಕಳ ಶೈಕ್ಷಣಿಕ ಹಿನ್ನಡೆ ಎಂಬ ಅರಿವು ಮೂಡಿಸಿಕೊಳ್ಳಬೇಕು ಎಂದರು.ಆಶಯ ಮಾತುಗಳನ್ನಾಡಿದ ಪ್ರಶಾಂತ ಮುಚ್ಚಂಡಿ, ೧೫೦ ವರ್ಷ ಹಿಂದಿನ ಸರ್ಕಾರಿ ಶಾಲೆ ಇದಾಗಿದ್ದು, ಅಭಿವೃದ್ಧಿಯ ವಿಷಯದಲ್ಲಿ ಅಷ್ಟು ಮುಂದೆ ಸಾಗಿಲ್ಲ. ಸರ್ಕಾರದ ನಿಯಮಗಳಡಿ ಅನುದಾನ ಹಂಚಿಕೆಯೂ ಇತ್ತೀಚಿನ ದಿನಗಳಲ್ಲಿ ಕಷ್ಟಕರವಾಗಿದೆ. ಇದೆಲ್ಲ ಕಂಡ ಪಾಲಕರು ಸೇರಿ ಹೊಸ ಯೋಜನೆ ರೂಪಿಸಿದ್ದು, ಈ ಶಾಲೆಯನ್ನು ನಿಜವಾದ ಮಾದರಿ ಮಾಡುವ ಉದ್ಧೇಶವಿದೆ. ಈ ಬಗ್ಗೆ ಹೆಚ್ಚು ಮೆಚ್ಚುಕೆಯೂ ವ್ಯಕ್ತವಾಗಿದ್ದು, ನಮ್ಮ ಕೈಲಾದ ಮಟ್ಟಿಗೆ ಪಾರದರ್ಶಕವಾಗಿ ಅಭಿವೃದ್ಧಿಗೆ ಮುಂದಾಗುತ್ತೇವೆ ಎಂದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸತೀಶ ಭೋಸ್ಲೆ, ಮುಖ್ಯೋಪಾಧ್ಯಾಯ ಆರ್.ಬಿ. ರೆಡ್ಡಿ, ಗೀತಾ ಚಕ್ರಸಾಲಿ, ಭೀಮಪ್ಪ, ಹೇಮಾವತಿ ಹಂಜಗಿ, ಶ್ರೀನಿವಾಸ ದೀಕ್ಷಿತ ವೇದಿಕೆಯಲ್ಲಿದ್ದರು. ನಿಖಿತಾ ಮಾಳಗಿ, ರಿಷಿಕಾ ಹಂಚಿನಮನಿ ಪ್ರಾರ್ಥನೆ ಹಾಡಿದರು.