ಪ್ರವೀಣ್ ಘೋರ್ಪಡೆ
ಕನ್ನಡಪ್ರಭ ವಾರ್ತೆ ತಾಳಿಕೋಟೆತಾಲೂಕು ಸೇರಿದಂತೆ ವಿವಿಧೆಡೆ ಸುರಿಯುತ್ತಿರುವ ಭಾರೀ ಮಳೆಯಿಂದ ಡೋಣಿ ನದಿಯಲ್ಲಿ ಪ್ರವಾಹವು ಉಕ್ಕೇರುತ್ತಿದೆ. ಪರಿಣಾಮ ಇಲ್ಲಿನ ವಿಜಯಪುರ ರಸ್ತೆಯ ಕೆಳಮಟ್ಟದ ಸೇತುವೆಯು ಸಂಪೂರ್ಣ ಜಲಾವೃತಗೊಂಡಿದೆ.
ಗುರುವಾರ ಸಂಜೆಯಿಂದ ಪ್ರಾರಂಭಗೊಂಡಿರುವ ಮಳೆಯು ಶುಕ್ರವಾರ ಸಂಜೆಯವರೆಗೂ ಎಡಬಿಡದೇ ಸುರಿದಿದೆ. ಶುಕ್ರವಾರ ಬೆಳಗ್ಗೆಯಿಂದಲೇ ಡೋಣಿ ನದಿಯಲ್ಲಿ ಪ್ರವಾಹ ಹೆಚ್ಚಾಗಿದ್ದರ ಪರಿಣಾಮ ವಿಜಯಪುರ ರಸ್ತೆಯ ಕೆಳಮಟ್ಟದ ಸೇತುವೆಯ ಮೇಲೆ ನೀರಿನ ರಭಸವೂ ಜೋರಾಗಿದೆ.ಇದನ್ನು ಮನಗಂಡ ಪೊಲೀಸರು, ಅಪಾಯದ ಮುನ್ಸೂಚನೆ ಅರಿತು ರಸ್ತೆಗೆ ಬ್ಯಾರಿಕೇಡ್ ಅಳವಡಿಸಿ ವಾಹನ ಸಂಚಾರ ಸಂಪೂರ್ಣ ನಿಷೇಧಿಸಿ, ಸ್ಥಳದಲ್ಲಿ ಸಿಬ್ಬಂದಿ ನಿಯೋಜಿಸಿದ್ದಾರೆ. ಸದರಿ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗವಾಗಿ ಬಸ್ ನಿಲ್ದಾಣದ ಪಕ್ಕದ ಹಡಗಿನಾಳ ರಸ್ತೆ ಅನುಕೂಲ ಕಲ್ಪಿಸಲಾಗಿದೆ. ಇನ್ನೂ ಮಧ್ಯಾಹ್ನದ ವೇಳೆಗೆ ಮೂಕೀಹಾಳ ಹಳ್ಳವೂ ಉಕ್ಕೇರಿ ಬಂದಿದ್ದು ಸದರಿ ಮಾರ್ಗವನ್ನು ಸ್ಥಗಿತಗೊಳಿಸಲಾಗಿದೆ.ವಿಜಯಪುರ, ಮುದ್ದೇಬಿಹಾಳ, ಬಾಗಲಕೋಟೆ ಅಲ್ಲದೇ ಪ್ರಮುಖ ನಗರ ಪಟ್ಟಣಗಳಿಗೆ ತೆರಳುವ ಮುಖ್ಯ ಮಾರ್ಗಗಳೇ ಪ್ರವಾಹದಿಂದ ಬಂದ್ ಆಗಿವೆ. ವಿಜಯಪುರ ಕಡೆಯ ಸಂಚರಿಸುವವರಿಗೆ ಅನ್ಯ ಮಾರ್ಗವಿಲ್ಲದೇ ಪರದಾಡಿದ ಘಟನೆಯೂ ನಡೆದಿದೆ. ಕೆಲವರು ದೇವರ ಹಿಪ್ಪರಗಿ ಮಾರ್ಗದಿಂದ ವಿಜಯಪುರ ನಗರಕ್ಕೆ ತೆರಳಿದರು.
ನದಿಗೆ ಇಳಿಯದಂತೆ ತಹಸೀಲ್ದಾರ್ ಮನವಿ:ಡೋಣಿ ನದಿಯಲ್ಲಿ ಪ್ರವಾಹವು ವ್ಯಾಪಕವಾಗಿ ಬರುತ್ತಿರುವುದರಿಂದ ನದಿ ಪಾತ್ರದ ಜನರು ನದಿಯ ಹತ್ತಿರ ಜನ ಜಾನುವರುಗಳು ಸುಳಿಯದಂತೆ ನೋಡಿಕೊಳ್ಳಬೇಕು ಮತ್ತು ನದಿಯ ಹತ್ತಿರ ಯಾರೂ ಕೂಡಾ ಹೋಗಬಾರದೆಂದು ತಹಸೀಲ್ದಾರ್ ಡಾ.ವಿನಯಾ ಹೂಗಾರ ಮನವಿ ಮಾಡಿದ್ದಾರೆ.
ಜಿಲ್ಲೆಯಲ್ಲಿ ಅ.೩ ರವರೆಗೆ ಮಳೆ ಸುರಿಯುವ ಸಾಧ್ಯತೆ ಇದೆ. ಆದ್ದರಿಂದ ನದಿಪಾತ್ರದ ಜನರು ಎಚ್ಚರವಹಿಸಬೇಕು ಎಂದು ತಿಳಿಸಿದ್ದಾರೆ.ಶವ ಹುಡುಕಾಟಕ್ಕೆ ಮಳೆ ಅಡಚಣೆ:ಡೋಣಿ ನದಿಯ ಪ್ರವಾಹದಲ್ಲಿ ಬುಧವಾರ ಬೈಕ್ ಸಮೇತ ಕೊಚ್ಚಿಕೊಂಡು ಹೋಗಿರುವ ಸಂತೋಷ ಹಡಪದ ಪತ್ತೆ ಕಾರ್ಯವು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಆದರೆ ಎಡಬಿಡದೇ ಸುರಿಯುತ್ತಿರುವ ಮಳೆ ಹಾಗೂ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳದಿಂದ ಶವ ಹುಡುಕಾಟಕ್ಕೆ ಅಡಚಣೆ ಉಂಟಾಗಿದೆ. ಮಳೆಯನ್ನು ಲೆಕ್ಕಿಸದೇ ಮೀನುಗಾರರು ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಮೂಲಕ ತಾಲೂಕು ಆಡಳಿತ ಕಾರ್ಯಾಚರಣೆ ಮುಂದುವರಿಸಿದೆ.
ಡೋಣಿ ನದಿಯ ಪ್ರವಾಹದಿಂದ ವಿಜಯಪುರ ಮುಖ್ಯ ರಸ್ತೆಯ ಕೆಳಮಟ್ಟದ ಸೇತುವೆಯು ಸಂಪೂರ್ಣ ಜಲಾವೃತಗೊಂಡಿದೆ. ಹೀಗಾಗಿ ಈ ರಸ್ತೆಯ ಮೇಲಿನ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಅದರಂತೆ ಮೂಕೀಹಾಳ ಹತ್ತಿರ ಹಳ್ಳವೂ ಉಕ್ಕಿ ಬಂದಿದ್ದರಿಂದ ಈ ರಸ್ತೆಯನ್ನು ಸ್ಥಗಿತಗೊಳಿಸಲಾಗಿದೆ. ಈ ಸೇತುವೆ ಹತ್ತಿರ ರಾತ್ರಿ ವೇಳೆ ಸಿಬ್ಬಂದಿ ನಿಯೋಜಜಿಸಲಾಗಿದೆ. ಜ್ಯೋತಿ ಖೋತ್, ಪಿಎಸ್‌ಐ ತಾಳಿಕೋಟೆ