ಕತ್ತೆ ಮಾರಾಟ ಪ್ರಕರಣ: 145ಕ್ಕೂ ಅಧಿಕ ರೈತರಿಂದ ದೂರು

KannadaprabhaNewsNetwork |  
Published : Sep 21, 2024, 01:47 AM IST
20ಎಚ್‌ಪಿಟಿ1- ಹೊಸಪೇಟೆಯ ಪಟ್ಟಣ ಠಾಣೆ ಎದುರು ದೂರು ಸಲ್ಲಿಸಲು ಆಗಮಿಸಿರುವ ಅನ್ಯಾಯಕ್ಕೊಳಗಾದ ರೈತರು.  | Kannada Prabha

ಸಾರಾಂಶ

ತನಿಖೆಗೆ ಎಸ್ಪಿ ಬಿ.ಎಲ್‌. ಶ್ರೀಹರಿಬಾಬು ಮೂರು ವಿಶೇಷ ತಂಡ ರಚನೆ ಮಾಡಿದ್ದು, ಈ ತಂಡ ಹೊಸಪೇಟೆ, ಆಂಧ್ರಪ್ರದೇಶದಲ್ಲೂ ತನಿಖೆ ಕೈಗೊಂಡಿದೆ.

ಹೊಸಪೇಟೆ: ನಗರದಲ್ಲಿ ಕತ್ತೆ ಮಾರಾಟ ಮಾಡುತ್ತಿದ್ದ ಖಾಸಗಿ ಕಂಪನಿ ವಿರುದ್ಧ ಇಲ್ಲಿನ ಪಟ್ಟಣ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಈಗಾಗಲೇ 145ಕ್ಕೂ ಅಧಿಕ ಅನ್ಯಾಯಕ್ಕೊಳಗಾದ ರೈತರು ಠಾಣೆಗೆ ಆಗಮಿಸಿ ದೂರು ಸಲ್ಲಿಸಿದ್ದಾರೆ.

ತನಿಖೆಗೆ ಎಸ್ಪಿ ಬಿ.ಎಲ್‌. ಶ್ರೀಹರಿಬಾಬು ಮೂರು ವಿಶೇಷ ತಂಡ ರಚನೆ ಮಾಡಿದ್ದು, ಈ ತಂಡ ಹೊಸಪೇಟೆ, ಆಂಧ್ರಪ್ರದೇಶದಲ್ಲೂ ತನಿಖೆ ಕೈಗೊಂಡಿದೆ. ನಗರದ ಹಂಪಿ ರಸ್ತೆಯಲ್ಲಿ ಕಚೇರಿ ಹೊಂದಿರುವ ಜೆನ್ನಿ ಮಿಲ್ಕ್‌ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ನೂತಲಪತಿ ಮುರಳಿ ಮತ್ತು ಕಂಪನಿ ಮ್ಯಾನೇಜರ್‌ ಶಂಕರ್‌ ರೆಡ್ಡಿ ಮತ್ತು ಇತರರ ವಿರುದ್ಧ ಪಟ್ಟಣ ಪೊಲೀಸ್‌ ಠಾಣೆಯಲ್ಲಿ ನಗರದ ನಿವಾಸಿ ಮಲ್ಲೇಶಪ್ಪ ಎಂಬುವವರು ದೂರು ಸಲ್ಲಿಸಿದ್ದು, ಇದರನ್ವಯ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದ ವಿವರ:

ನಗರದ ಹಂಪಿ ರಸ್ತೆಯಲ್ಲಿ ಕಚೇರಿ ಹೊಂದಿರುವ ಜೆನ್ನಿ ಮಿಲ್ಕ್‌ ಕಂಪನಿ ಮೂರು ಕತ್ತೆ ಮತ್ತು ಮೂರು ಕತ್ತೆ ಮರಿಗಳನ್ನು ಖರೀದಿಸಿದರೆ ಒಂದು ಯುನಿಟ್‌ ಎಂದು ಪರಿಗಣಿಸಿ ₹3 ಲಕ್ಷ ಪಡೆಯುತ್ತಿತ್ತು. ಈ ಕತ್ತೆಗಳಿಂದ ಪ್ರತಿನಿತ್ಯ 2 ಲೀಟರ್‌ ಹಾಲು ಹಿಂಡಿ ಕಂಪನಿಯರು ಕೊಟ್ಟ ಡಿ-ಫ್ರಿಡ್ಜ್‌ನಲ್ಲಿ ಸಂಗ್ರಹಿಸಿಡುತ್ತಿದ್ದರು. ಪ್ರತಿ ಲೀಟರ್‌ಗೆ ಕಂಪನಿ ₹2,350 ನೀಡಿ ಖರೀದಿ ಮಾಡುತ್ತಿತ್ತು. 10 ದಿನಕ್ಕೊಮ್ಮೆ ವಿತರಕರು ಆಗಮಿಸಿ ಹಾಲು ಖರೀದಿ ಮಾಡುತ್ತಿದ್ದರು. ಜೊತೆಗೆ ಅಕೌಂಟ್‌ಗೆ ಹಣ ಹಾಕಲಾಗುತ್ತಿತ್ತು. ಆದರೆ, ಈಗ ಕಂಪನಿಯ ಎಂ.ಡಿ ಮತ್ತು ಮ್ಯಾನೇಜರ್‌ ಪರಾರಿಯಾಗಿದ್ದಾರೆ. ಹಾಗಾಗಿ ಮಲ್ಲೇಶಪ್ಪ ಎಂಬವರು ಪಟ್ಟಣ ಠಾಣೆಯಲ್ಲಿ ಮೋಸ ಮಾಡುವ ಉದ್ದೇಶದಿಂದ ಒಳಸಂಚು ರೂಪಿಸಿ, ಹಣ ಹೂಡಿಕೆ ಮಾಡಿಕೊಂಡು ಪರಾರಿಯಾಗಿದ್ದಾರೆ. ಹಾಲು ಹಿಂಡದ ಕಳಪೆ ಗುಣಮಟ್ಟದ ಕತ್ತೆಗಳನ್ನು ಕೂಡ ನೀಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ತಾನು ₹2.50 ಲಕ್ಷ ನೀಡಿ ಒಂದು ಯುನಿಟ್ ಕತ್ತೆಗಳನ್ನು ಖರೀದಿಸಿರುವೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈಗ ಎಫ್‌ಐಆರ್‌ ಮಾಡಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಠಾಣೆಗೆ ನೂರಾರು ರೈತರ ಆಗಮನ:

ನಗರದ ಜೆನ್ನಿ ಮಿಲ್ಕ್ ಕಂಪನಿ ವಿರುದ್ಧ ದೂರು ನೀಡಲು ನೂರಾರು ಸಂಖ್ಯೆಯಲ್ಲಿ ರೈತರು ಆಗಮಿಸಿದ್ದರು. ರಾಜ್ಯದ ವಿಜಯನಗರ, ಬಳ್ಳಾರಿ, ಕೊಪ್ಪಳ, ಮಂಡ್ಯ, ಮೈಸೂರು, ಹಾಸನ, ತುಮಕೂರು, ಕೋಲಾರ, ಕಲಬುರಗಿ, ಗದಗ, ರಾಯಚೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿ ರೈತರು ದೂರು ಸಲ್ಲಿಸಿದರು.

ಒಂದು ಯುನಿಟ್‌, ಮೂರು ಯುನಿಟ್‌, ಐದು ಯುನಿಟ್‌ ಮತ್ತು 10 ಯುನಿಟ್‌ ಕತ್ತೆ ಖರೀದಿಸಿ ಲಕ್ಷಗಟ್ಟಲೇ ಹಣ ಬಂಡವಾಳ ಹಾಕಿದ್ದೇವೆ. ಕತ್ತೆಗಳ ಖರೀದಿಗೆ ಚಿನ್ನ ಗಿರವಿ ಇಟ್ಟಿದ್ದೇವೆ, ಸಾಲ-ಶೂಲ ಮಾಡಿ ಕತ್ತೆಗಳನ್ನು ಖರೀದಿಸಿದ್ದೇವೆ. ಮಗಳ ಮದುವೆಗೆ ಕೂಡಿಟ್ಟ ಹಣದಲ್ಲೂ ಕತ್ತೆಗಳನ್ನು ಖರೀದಿ ಮಾಡಿದ್ದೇವೆ. ಈಗ ಕಂಪನಿ ಈ ರೀತಿ ವಂಚನೆ ಮಾಡುತ್ತದೆ ಎಂದುಕೊಂಡಿರಲಿಲ್ಲ. ನಮ್ಮ ಹಣವನ್ನು ಸರ್ಕಾರ ಹಿಂದಿರುಗಿಸಿಕೊಡಬೇಕು ಎಂದು ಅನ್ಯಾಯಕ್ಕೊಳಗಾದವರು ಅಳಲು ತೋಡಿಕೊಂಡರು.

ಕತ್ತೆಗಳ ಮಾರಾಟ ಮಾಡುತ್ತಿದ್ದ ಕಂಪನಿ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ. ಅನ್ಯಾಯಕ್ಕೊಳಗಾದವರು ದೂರು ನೀಡುತ್ತಿದ್ದಾರೆ. ಇನ್‌ಸ್ಪೆಕ್ಟರ್‌ ನೇತೃತ್ವದಲ್ಲಿ ಮೂರು ವಿಶೇಷ ತಂಡ ರಚಿಸಿ ತನಿಖೆ ಕೈಗೊಳ್ಳಲಾಗಿದೆ ಎನ್ನುತ್ತಾರೆ ಎಸ್ಪಿ ವಿಜಯನಗರ ಬಿ.ಎಲ್‌. ಶ್ರೀಹರಿಬಾಬು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟಿಬಿ ಗೇಟ್‌ ಬದಲಿಸಲು ಹಣ ಕೊಡಿ : ಬಿವೈವಿ
ರಾಯ್‌ ಸಾವಿಗೆ ಐ.ಟಿ. ಕಿರುಕುಳ ಕಾರಣ : ಬಾಬು