ಪದ್ಮಶ್ರೀ ಪುರಸ್ಕೃತ ಮಹಾಲಿಂಗ ನಾಯ್ಕರ ಪತ್ನಿಯ ಆಸ್ಪತ್ರೆ ವೆಚ್ಚ ಭರಿಸಿದ ದಾನಿಗಳು!

KannadaprabhaNewsNetwork |  
Published : Feb 12, 2025, 12:34 AM IST
ಮಹಾಲಿಂಗ ನಾಯ್ಕ | Kannada Prabha

ಸಾರಾಂಶ

ಅಮೈ ಮಹಾಲಿಂಗ ನಾಯ್ಕ ಅವರ ಪತ್ನಿ ಈಗ ಚೇತರಿಸಿಕೊಂಡು ಆಸ್ಪತ್ರೆಯಿಂದ ಸೋಮವಾರ ಡಿಸ್ಚಾರ್ಜ್‌ ಆಗಿದ್ದಾರೆ. ಆಸ್ಪತ್ರೆಯ ಚಿಕಿತ್ಸಾ ವೆಚ್ಚ ಭರಿಸಲು ಪಡಿಪಾಟಿಲು ಅನುಭವಿಸಿದ ಅಮೈ ಮಹಾಲಿಂಗ ನಾಯ್ಕರ ನೆರವಿಗೆ ಸಹೃದಯ ಜನತೆ ಮಿಡಿದಿದ್ದು, 5.30 ಲಕ್ಷ ರು.ಗಳಷ್ಟು ನೆರವಿನ ಮೊತ್ತ ಸಂಗ್ರಹವಾಗಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ತಲೆಯ ಭಾಗದ ನರದ ತೊಂದರೆಯಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಪದ್ಮಶ್ರೀ ಹಾಗೂ ಕನ್ನಡಪ್ರಭ ವರ್ಷದ ವ್ಯಕ್ತಿ ಪ್ರಶಸ್ತಿ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ ಅವರ ಪತ್ನಿ ಈಗ ಚೇತರಿಸಿಕೊಂಡು ಆಸ್ಪತ್ರೆಯಿಂದ ಸೋಮವಾರ ಡಿಸ್ಚಾರ್ಜ್‌ ಆಗಿದ್ದಾರೆ. ಆಸ್ಪತ್ರೆಯ ಚಿಕಿತ್ಸಾ ವೆಚ್ಚ ಭರಿಸಲು ಪಡಿಪಾಟಿಲು ಅನುಭವಿಸಿದ ಅಮೈ ಮಹಾಲಿಂಗ ನಾಯ್ಕರ ನೆರವಿಗೆ ಸಹೃದಯ ಜನತೆ ಮಿಡಿದಿದ್ದು, 5.30 ಲಕ್ಷ ರು.ಗಳಷ್ಟು ನೆರವಿನ ಮೊತ್ತ ಸಂಗ್ರಹವಾಗಿದೆ.

ನರದ ತೊಂದರೆಯಿಂದ ಅಮೈ ಮಹಾಲಿಂಗ ನಾಯ್ಕರ ಪತ್ನಿ ಒಂದು ವಾರದ ಹಿಂದೆ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿಂದ ಎರಡೇ ದಿನದಲ್ಲಿ ಮಂಗಳೂರು ಹೊರವಲಯ ಅಡ್ಯಾರಿನ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಚಿಕಿತ್ಸೆಗೆ ಆರಂಭದಲ್ಲಿ 2.62 ಲಕ್ಷ ರು. ಮೊತ್ತವನ್ನು ಅವರಿವರಿಂದ ಸಾಲ ಪಡೆದು ಅಮೈ ಮಹಾಲಿಂಗ ನಾಯ್ಕರೇ ಭರಿಸಿದ್ದರು. ಬಳಿಕ ಮತ್ತೆ ಚಿಕಿತ್ಸೆಗೆ ಹಣಕಾಸಿನ ಅನಿವಾರ್ಯತೆ ಇತ್ತು. ಅದಕ್ಕಾಗಿ ಮಾಧ್ಯಮಗಳಲ್ಲಿ ನೆರವು ಕೋರಿ ವರದಿ ಪ್ರಕಟವಾಗಿತ್ತು.

ಅಮೈ ಮಹಾಲಿಂಗ ನಾಯ್ಕರ ಸಂಬಂಧಿಸಿಕರು 70 ಸಾವಿರ ರು. ಸೇರಿಸಿದ್ದರು. ಆಸ್ಪತ್ರೆ ಮೊತ್ತ ಒಟ್ಟು 5.30 ಲಕ್ಷ ರು. ಆಗಿತ್ತು. ಅದರಲ್ಲಿ 70 ಸಾವಿರ ರು. ಮೊತ್ತವನ್ನು ಜಿಲ್ಲಾ ಆರೋಗ್ಯಾಧಿಕಾರಿಗಳ ಮನವಿ ಮೇರೆಗೆ ವಿನಾಯ್ತಿ ನೀಡಿದ್ದರು. ಉಳಿದ ಮೊತ್ತವನ್ನು ಅಮೈ ಮಹಾಲಿಂಗ ನಾಯ್ಕರು ಪಾವತಿಸಿದ್ದಾರೆ. ಅವರ ಪತ್ನಿ ಈಗ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಔಷಧ ಮತ್ತಿತರ ಬೇರೆಯೇ ಖರ್ಚು ಆಗಿದೆ. ಸಮಾಜದಿಂದ ಉದಾರವಾಗಿ ಆರ್ಥಿಕ ನೆರವು ನೀಡಿರುವುದಕ್ಕೆ ಅಮೈ ಮಹಾಲಿಂಗ ನಾಯ್ಕರ ಕುಟುಂಬಸ್ಥರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. .............

ಅಡ್ಯಾರಿನ ಖಾಸಗಿ ಆಸ್ಪತ್ರೆ ಸರ್ಕಾರದ ಯಾವುದೇ ವೈದ್ಯಕೀಯ ಸ್ಕೀಮ್‌ಗಳನ್ನು ಹೊಂದಿಲ್ಲ, ಅಗತ್ಯವಾಗಿ ಸ್ಕೀಮ್‌ಗಳನ್ನು ಹೊಂದುವಂತೆ ಪತ್ರ ಬರೆಯಲಾಗಿದೆ. ಅಲ್ಲದೆ ಅಮೈ ಮಹಾಲಿಂಗ ನಾಯ್ಕರ ಪತ್ನಿಯ ಎಲ್ಲ ವೈದ್ಯಕೀಯ ವೆಚ್ಚವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಭರಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಬರೆದುಕೊಳ್ಳಲಾಗುವುದು.

ಡಾ.ತಿಮ್ಮಯ್ಯ, ಜಿಲ್ಲಾ ಆರೋಗ್ಯಾಧಿಕಾರಿ, ದ.ಕ.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ