ಚಿತ್ರದುರ್ಗ: ನಾಯಕನಹಟ್ಟಿ ಗುರುತಿಪ್ಪೇರುದ್ರಸ್ವಾಮಿ ದೊಡ್ಡ ರಥೋತ್ಸವ ಮಾ.26ರಂದು ನಡೆಯಲಿದ್ದು, ರಥ ಸಾಗಲು ಯಾವುದೇ ಅಡಚಣೆಯಾಗದಂತೆ ಕ್ರಮವಹಿಸಬೇಕು. ಈ ಹಿನ್ನಲೆಯಲ್ಲಿ ತೇರು ಬೀದಿಗಳಲ್ಲಿ ರಥೋತ್ಸವ ಜರುಗುವವರೆಗೆ ಯಾವುದೇ ಅಂಗಡಿಗಳನ್ನು ಹಾಕಿಕೊಳ್ಳಲು ಅವಕಾಶ ನೀಡಬಾರದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್ ಮಾತನಾಡಿ, ನಾಯಕನಹಟ್ಟಿ ಜಾತ್ರೆಗೆ ಆಗಮಿಸವ ಭಕ್ತಾದಿಗಳಿಗೆ ಸಮರ್ಪಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಸ್ವಚ್ಛತೆಗೆ ಅಗತ್ಯಕ್ರಮವಹಿಸಲಾಗಿದೆ. ಜಾತ್ರೆ ಅಂಗವಾಗಿ ಪೌರಕಾರ್ಮಿಕರನ್ನು ಹಾಗೂ ಮೇಲ್ವಿಚಾರಕರನ್ನೂ ನಿಯೋಜನೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಚಳ್ಳಕೆರೆ ತಾಲೂಕು ಆರೋಗ್ಯಾಧಿಕಾರಿ ಡಾ.ಕಾಶಿ ಮಾತನಾಡಿ, ಜಾತ್ರೆಯಲ್ಲಿ ತಾತ್ಕಾಲಿಕವಾಗಿ ನಾಲ್ಕು ಕಡೆ ಪ್ರಥಮ ಚಿಕಿತ್ಸೆ ಕೇಂದ್ರಗಳನ್ನು ತೆರೆಯಲಾಗುವುದು. ತುರ್ತು ಚಿಕಿತ್ಸೆಗಾಗಿ ನಾಲ್ಕು ಅಂಬುಲೆನ್ಸ್ ನಿಯೋಜನೆ ಮಾಡಿಕೊಳ್ಳಲಾಗುವುದು. 20 ಮಂದಿ ವೈದ್ಯಾಧಿಕಾರಿಗಳು ಸೇರಿದಂತೆ 160 ಮಂದಿ ಆರೋಗ್ಯ ಸಿಬ್ಬಂದಿ ನಿಯೋಜಿಸಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಅಗತ್ಯ ಔಷಧೋಪಚಾರಗಳ ವ್ಯವಸ್ಥೆ ಮಾಡಿಕೊಳ್ಳಬೇಕು. ಕುಡಿಯುವ ನೀರಿನ ಪರೀಕ್ಷೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದರು.ಲೋಕಸಭಾ ಚುನಾವಣೆ ಪ್ರಯುಕ್ತ ಈಗಾಗಲೇ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಜಾತ್ರೆ ಸಿದ್ಧತೆಯನ್ನು ಬಹಳ ಎಚ್ಚರಿಕೆಯಿಂದ ನಿರ್ವಹಿಸಬೇಕು. ಚುನಾವಣಾ ಪ್ರಚಾರದ ಯಾವುದೇ ರೀತಿಯ ಕಾರ್ಯಚಟುವಟಿಕೆಗಳು ನಡೆಸಬಾರದು. ಈ ಕುರಿತು ಹೆಚ್ಚಿನ ಗಮನಹರಿಸಬೇಕು. ನೀತಿ ಸಂಹಿತೆ ಉಲ್ಲಂಘನೆಯಾದರೆ ತಕ್ಷಣವೇ ಪ್ರಕರಣ ದಾಖಲು ಮಾಡಬೇಕು ಎಂದು ತಾಕೀತು ಮಾಡಿದರು.
ಜಾತ್ರೆಗೆ ವಿವಿಧ ಮಾರ್ಗಗಳಿಂದ ಬರುವ ಮಾರ್ಗಗಳಲ್ಲಿ 7 ಕಡೆ ಚೆಕ್‍ಪೋಸ್ಟ್ ನಿರ್ಮಿಸಿ ಪ್ರಾಣಿಬಲಿ ನಿಷೇಧ ಕಡ್ಡಾಯವಾಗಿ ಜಾರಿಗೊಳಿಸಲು ಜಿಲ್ಲಾಧಿಕಾರಿ ವೆಂಕಟೇಶ್ ನಿರ್ದೇಶನ ನೀಡಿದರು. ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಜಾತ್ರೆ ಅಂಗವಾಗಿ ಹಾಗೂ ಬೇಸಿಗೆ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅಗತ್ಯ ಇರುವ ಅಗ್ನಿಶಾಮಕ ವಾಹನಗಳ ಸೌಲಭ್ಯ ಹಾಗೂ ಅಗ್ನಿ ಅವಘಡಗಳನ್ನು ತಡೆಯಲು ನುರಿತ ಸಿಬ್ಬಂದಿ ನಿಯೋಜಿಸಿಕೊಳ್ಳುವಂತೆ ಅಗ್ನಿಶಾಮಕ ಠಾಣಾಧಿಕಾರಿಗೆ ಸೂಚನೆ ನೀಡಿದರು.