ಹಾನಗಲ್ಲ: ಭಕ್ತಿಗೆ ಬಡತನ ಸಿರಿತನವೆಂಬ ಭೇದವಿಲ್ಲ, ಪಾಪಕ್ಕೆ ಪ್ರೇರಣೆಯಾಗುವ ಕುಕೃತ್ಯಕ್ಕೆ ಕುಮ್ಮಕ್ಕು ನೀಡಿದಿರಿ, ಮಕ್ಕಳಿಗೆ ಸಂಸ್ಕಾರ ಕೊಡಿ, ಪರಕೀಯ ಸಂಸ್ಕೃತಿಯ ದಾಸರಾಗಬೇಡಿ ಎಂದು ಬಂಕಾಪುರ ಅರಳೆಲೆ ಹಿರೇಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಸಾಹಿತಿ ಪ್ರೊ. ಮಾರುತಿ ಶಿಡ್ಲಾಪುರ, ಧರ್ಮದ ನಡೆಯಿಂದ ನಮ್ಮ ಗ್ರಾಮೀಣ ಪರಿಸರ ವಿಮುಖವಾಗಬಾರದು. ಪ್ರೀತಿ-ವಿಶ್ವಾಸಗಳಿಂದ ನಡೆದುಕೊಳ್ಳುತ್ತಿರುವ ಹಳ್ಳಿಯ ಒಳ್ಳೆಯ ಸಂಬಂಧದ ಜೀವನ ವಿಧಾನ ಉಳಿಯುವ ಮೂಲಕ ಗ್ರಾಮೀಣ ಸಂಸ್ಕೃತಿ ಉಳಿಸುವ ಹೊಣೆ ನಮ್ಮದಾಗಬೇಕು. ಭವಿಷ್ಯದ ಪೀಳಿಗೆಗೆ ಗ್ರಾಮ ಭಾರತದ ಸಂತೋಷದ ಕ್ಷಣಗಳನ್ನು ಉಳಿಸಬೇಕಾಗಿದೆ. ಹಿರಿಯರ ಮಾರ್ಗದರ್ಶನ, ಅವರ ಜೀವನ ವಿಧಾನದಲ್ಲಿನ ಕೂಡಿ ಬಾಳುವಿಕೆಯ ಪರಿಚಯ ಪಾಲನೆಗೆ ಪ್ರೋತ್ಸಾಹಿಸಬೇಕಾಗಿದೆ. ಪಟ್ಟಣದ ಕಡೆ ಮುಖ ಮಾಡುತ್ತಿರುವ ಯುವಕರನ್ನು ನಮ್ಮ ಗ್ರಾಮೀಣ ಜೀವನಕ್ಕೆ ಒಗ್ಗಿಸಿ ಉಳಿಸುವ ದೊಡ್ಡ ಹೊಣೆ ಈಗಿನ ಹಿರಿಯರದಾಗಿದೆ. ಕೃಷಿಯಿಂದ ವಿಮುಖವಾಗುತ್ತಿರುವ ಹೊಸ ಪೀಳಿಗೆಗೆ ಕೃಷಿಯಲ್ಲಿನ ಸಂತೋಷ ಗಳಿಕೆಯ ನಿಜಾಂಶದ ಪರಿಚಯವೂ ಆಗಬೇಕಾಗಿದೆ ಎಂದರು.
ಪ್ರಧಾನ ಅರ್ಚಕ ಸಂಗಯ್ಯಶಾಸ್ತ್ರಿ ಹಿರೇಮಠ ಮಾತನಾಡಿ, ಸಾಂವಸಗಿ ಗ್ರಾಮದಲ್ಲಿ ಕಳೆದ 25 ವರ್ಷಗಳಿಂದ ಧಾರ್ಮಿಕ ಕಾರ್ಯಗಳ ಮೂಲಕ ಒಂದು ಉತ್ತಮ ಸಂಸ್ಕಾರಕ್ಕೆ ಶ್ರಮಿಸಿದ್ದೇನೆ. ಇಲ್ಲಿನ ಜನರ ಸಹಕಾರದಿಂದ ನಾನು ಸಂತಸ ಜೀವನಕ್ಕೆ ಕಾರಣನಾಗಿದ್ದೇನೆ. ಧರ್ಮ ಸಂಸ್ಕಾರಗಳಿಂದ ಶ್ರೀ ವೀರಭದ್ರೇಶ್ವರನ ಕೃಪೆಗೆ ಪಾತ್ರರಾಗಿರುವ ಈ ಗ್ರಾಮದ ಜನರಿಗೆ ಧರ್ಮಾಚರಣೆಯ ಸಂಕಲ್ಪವಿದೆ. ಅದರಿಂದ ಇಡೀ ಗ್ರಾಮಕ್ಕೆ ಒಳ್ಳೆಯದಾಗಿದೆ ಎಂದರು.ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜ ಅಗಸನಹಳ್ಳಿ, ಗ್ರಾಪಂ ಉಪಾಧ್ಯಕ್ಷೆ ಹುಸೇನಬಿ ಮುರಡಿ, ಸದಸ್ಯೆ ಪಾರ್ವತೆವ್ವ ಕರಭೀಮಣ್ಣನವರ ಅತಿಥಿಗಳಾಗಿದ್ದರು. ಮಂಜುನಾಥ ದೊಡ್ಡಮನಿ ಸ್ವಾಗತಿಸಿದರು. ಈರಣ್ಣ ದೊಡ್ಡಮನಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.