ಬೆಂಗಳೂರಿಗೆ ಅಪಕೀರ್ತಿ ತರಬೇಡಿ: ಗೃಹ ಸಚಿವ ಪರಂ

KannadaprabhaNewsNetwork | Updated : May 25 2024, 10:22 AM IST

ರಾಜ್ಯದಲ್ಲಿ ಡ್ರಗ್ಸ್ ದಂಧೆಯನ್ನು ಸಂಪೂರ್ಣವಾಗಿ ಮಟ್ಟಹಾಕುವ ನಿಟ್ಟಿನಲ್ಲಿ ಇಲಾಖೆಯು ಕಟ್ಟುನಿಟ್ಟಿನ‌ ಕ್ರಮ ತೆಗೆದುಕೊಂಡಿದೆ. ಹೀಗಿದ್ದರೂ ಉಡ್ತಾ ಬೆಂಗಳೂರು ಎಂದೆಲ್ಲಾ ಹೇಳಿ ಬೆಂಗಳೂರಿಗೆ ಅಪಕೀರ್ತಿ ತರಬೇಡಿ ಎಂದು ಗೃಹ ಸಚಿವ ಡಾ ಜಿ.ಪರಮೇಶ್ವರ್‌ ಹೇಳಿದ್ದಾರೆ.

 ಬೆಂಗಳೂರು :  ‘ರಾಜ್ಯದಲ್ಲಿ ಡ್ರಗ್ಸ್ ದಂಧೆಯನ್ನು ಸಂಪೂರ್ಣವಾಗಿ ಮಟ್ಟಹಾಕುವ ನಿಟ್ಟಿನಲ್ಲಿ ಇಲಾಖೆಯು ಕಟ್ಟುನಿಟ್ಟಿನ‌ ಕ್ರಮ ತೆಗೆದುಕೊಂಡಿದೆ. ಹೀಗಿದ್ದರೂ ಉಡ್ತಾ ಬೆಂಗಳೂರು ಎಂದೆಲ್ಲಾ ಹೇಳಿ ಬೆಂಗಳೂರಿಗೆ ಅಪಕೀರ್ತಿ ತರಬೇಡಿ’ ಎಂದು ಗೃಹ ಸಚಿವ ಡಾ ಜಿ.ಪರಮೇಶ್ವರ್‌ ಹೇಳಿದ್ದಾರೆ.

ಬೆಂಗಳೂರಿನ ಸದಾಶಿವನಗರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಉಡ್ತಾ ಬೆಂಗಳೂರು’ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ತಿರುಗೇಟು ನೀಡಿದರು.

ಬಿಜೆಪಿಯವರು ಈ ರೀತಿ ಮಾತನಾಡಬಾರದು. ನಾವು ಡ್ರಗ್ಸ್ ಮುಕ್ತ ಮಾಡಲು ಪ್ರಯತ್ನ ಮಾಡುತ್ತಿದ್ದೇವೆ. ಎಂಡಿಎಂ, ಸಿಂಥೆಟಿಕ್ ಡ್ರಗ್ಸ್ ಜಪ್ತಿ ಮಾಡಿದ್ದೇವೆ. ವಿದೇಶಿ ವಿದ್ಯಾರ್ಥಿಗಳು ಡ್ರಗ್ಸ್ ದಂಧೆಯಲ್ಲಿದ್ದರು. ಅವರನ್ನು ಗಡಿಪಾರು ಮಾಡುವ ಕೆಲಸ ಮಾಡ್ತಿದ್ದೇವೆ. ಹೀಗಿರುವಾಗ ಉಡ್ತಾ ಬೆಂಗಳೂರು ಎನ್ನುವುದು ಸರಿಯಲ್ಲ. ಪ್ರಪಂಚದಲ್ಲಿ ತನ್ನದೇ ಆದ ಹಿರಿಮೆ ಹೊಂದಿರುವ ಬೆಂಗಳೂರಿಗೆ ಕೆಟ್ಟ ಹೆಸರು ತರಬೇಡಿ ಎಂದು ಸ್ಪಷ್ಟಪಡಿಸಿದರು.

ಕಾನೂನು ಸುವ್ಯವಸ್ಥೆ ಕಾಪಾಡಿದ್ದೇವೆ:

ನೇಹಾ, ಅಂಜಲಿ ಹತ್ಯೆ ಪ್ರಕರಣ ವಿಚಾರವಾಗಿ ಮಾತನಾಡಿದ ಸಚಿವರು, ಕಾನೂನು ಸುವ್ಯವಸ್ಥೆ ಹಾಳಾಗದಂತೆ ನೋಡಿಕೊಂಡಿದ್ದೇವೆ. ಇವರ ಕಾಲದಲ್ಲಿ ಹತ್ಯೆಗಳು ಆಗಿರಲಿಲ್ವೇ? ನಾವು ಆಗಲಿ ಎಂದು ಬಯಸಲ್ಲ. ಕೇಸ್​ನಲ್ಲಿ ಚಾರ್ಜ್ ಮಾಡಿದ್ದೇವೆ. ಅವರ ಮೇಲೆ ಕ್ರಮ ತೆಗೆದುಕೊಳ್ಳುವ ಪ್ರಯತ್ನ ಮಾಡಿದ್ದೇವೆ. ಶಾಂತಿಯುತ ಚುನಾವಣೆ ಮಾಡಿದ್ದೇವೆ. ಗಣೇಶ ಉತ್ಸವದಲ್ಲಿ ಗಲಾಟೆ ತಡೆದಿದ್ದೇವೆ. ರಂಜಾನ್ ವೇಳೆ ಗಲಾಟೆ ಹತ್ತಿಕ್ಕಿದ್ದೇವೆ. ಒಳ್ಳೆಯ ಆಡಳಿತವನ್ನು ನೀಡುತ್ತಿದ್ದೇವೆ ಎಂದು ಸಮರ್ಥಿಸಿಕೊಂಡರು.

ಪಾಸ್‌ಪೋರ್ಟ್‌ ರದ್ದು ಮಾಡಿದರೆ ಪ್ರಜ್ವಲ್‌ರನ್ನು ಹೊರ ಹಾಕುತ್ತಾರೆ’

ಕೇಂದ್ರ ಸರ್ಕಾರ ಮೊದಲು ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದು ಮಾಡಲಿ. ಆಗ ಅವರಿರುವ ದೇಶಗಳು ಪ್ರಜ್ವಲ್‌ ಅವರನ್ನು ಹೊರ ಹಾಕುತ್ತವೆ. ಕೂಡಲೇ ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಗೃಹ ಸಚಿವ ಡಾ। ಜಿ.ಪರಮೇಶ್ವರ್ ಹೇಳಿದರು.

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ‘ಪಾಸ್​ಪೋರ್ಟ್ ರದ್ದತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿಗೆ ಪತ್ರ ಬರೆದಿದ್ದರು. ಎರಡನೇ ಪತ್ರವನ್ನೂ ಬರೆದಿದ್ದಾರೆ. ಈಗಲಾದರೂ ಕೇಂದ್ರ ಎಚ್ಚೆತ್ತುಕೊಳ್ಳಬೇಕು’ ಎಂದು ಹೇಳಿದರು.