ಸೋಲಿಗೆ ಎದೆಗುಂದದೆ ಮುಂಬರುವ ಚುನಾವಣೆಗಳತ್ತ ಗಮನ ಕೊಡಿ: ದೊಡ್ಡನಗೌಡ ಪಾಟೀಲ

KannadaprabhaNewsNetwork |  
Published : Jun 18, 2024, 12:53 AM IST
ಪೋಟೊ17ಕೆಎಸಟಿ3: ಕುಷ್ಟಗಿ ಪಟ್ಟಣದ ಬಿಜೆಪಿ ಅಂಜನಾದ್ರಿ ಕಾರ್ಯಾಲಯದಲ್ಲಿ ಬಿಜೆಪಿ ವತಿಯಿಂದ ನಡೆದ ಆತ್ಮಾವಲೋಕನ ಹಾಗೂ ಅಭಿನಂದನಾ ಸಮಾರಂಭದಲ್ಲಿ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿದರು. | Kannada Prabha

ಸಾರಾಂಶ

ಪಕ್ಷದ ಕಾರ್ಯಕರ್ತರು ಈಗ ಸೋತಿರುವ ಲೋಕಸಭಾ ಚುನಾವಣೆಯನ್ನು ಮನಸ್ಸಿನಲ್ಲಿಟ್ಟುಕೊಳ್ಳದೆ ಮುಂಬರುವ ಜಿಪಂ, ತಾಪಂ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳು ಗೆಲ್ಲುವಂತೆ ನೋಡಿಕೊಳ್ಳಬೇಕು.

ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭ ಹಾಗೂ ಆತ್ಮಾವಲೋಕನ ಸಭೆ ಶಾಸಕಕನ್ನಡಪ್ರಭ ವಾರ್ತೆ ಕುಷ್ಟಗಿ

ಪಕ್ಷದ ಕಾರ್ಯಕರ್ತರು ಈಗ ಸೋತಿರುವ ಲೋಕಸಭಾ ಚುನಾವಣೆಯನ್ನು ಮನಸ್ಸಿನಲ್ಲಿಟ್ಟುಕೊಳ್ಳದೆ ಮುಂಬರುವ ಜಿಪಂ, ತಾಪಂ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳು ಗೆಲ್ಲುವಂತೆ ನೋಡಿಕೊಳ್ಳಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ, ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

ಪಟ್ಟಣದ ಬಿಜೆಪಿ ಅಂಜನಾದ್ರಿ ಕಾರ್ಯಾಲಯದಲ್ಲಿ ಬಿಜೆಪಿ ಮಂಡಲದ ವತಿಯಿಂದ ನಡೆದ ಲೋಕಸಭಾ ಚುನಾವಣೆಯಲ್ಲಿ ಶ್ರಮಿಸಿದ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭ ಹಾಗೂ ಆತ್ಮಾವಲೋಕನ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪರಾಭವಗೊಂಡ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್ ಮಾತನಾಡಿ, ಎಲ್ಲರ ಆಸೆಯಂತೆ ಇಂದು ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿರುವುದು ನಮ್ಮೆಲ್ಲರ ಗೆಲುವೇ ಆಗಿದೆ. ನಾವು ಕಳೆದ ಚುನಾವಣೆಯಲ್ಲಿ ಪಡೆದುಕೊಂಡ ಮತಗಳಿಗಿಂತ ಈ ಸಲ ಹೆಚ್ಚು ಮತ ಪಡೆದುಕೊಂಡಿದ್ದೇವೆ. ಕೆಲವು ತಪ್ಪುಗಳಿಂದ ನಾವು ಸೋಲು ಕಂಡಿರಬಹುದು. ಕಾರ್ಯಕರ್ತರು ಯಾರು ಎದೆಗುಂದುವ ಅಗತ್ಯವಿಲ್ಲ, ಕಾರ್ಯಕರ್ತರ ಜೊತೆಗೆ ಪಕ್ಷ ಸಂಘಟನೆ ಮಾಡುತ್ತೇನೆ ಎಂದರು.

ನಮ್ಮ ವಿರುದ್ಧವಾಗಿ ಚುನಾವಣೆ ಮಾಡಲು ಇಡೀ ಸರ್ಕಾರ ಬಂದು ನಿಂತಿತ್ತು. ಸ್ವತಃ ಮುಖ್ಯಮಂತ್ರಿಗಳೇ ಐದು ಸಲ ಬಂದು ಹೋಗಿದ್ದಾರೆ, ಮೂರು ದಿವಸ ಇಲ್ಲಿಯೇ ವಸತಿ ಇದ್ದರು. ನಾಲ್ಕು ಜನ ಸಚಿವರು ಇಲ್ಲಿಯೇ ಟಿಕಾಣಿ ಹೂಡಿದ್ದರು. ಚುನಾವಣೆಯ ಎರಡು ದಿನ ಮುಂಚಿತವಾಗಿ ಗ್ಯಾರಂಟಿ ಯೋಜನೆಯ ಗೃಹಲಕ್ಷ್ಮೀಯಡಿ ದುಡ್ಡನ್ನು ಖಾತೆಗೆ ಹಾಕಿದ್ದರು. ಹೀಗಾಗಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ ಎಂದರು.

ಮಂಡಲದ ಅಧ್ಯಕ್ಷ ಮಹಾಂತೇಶ ಬಾದಾಮಿ, ಜಿಪಂ ಮಾಜಿ ಸದಸ್ಯ ಕೆ. ಮಹೇಶ ಮಾತನಾಡಿದರು.

ಇದೇ ವೇಳೆ ಬಿಜೆಪಿ ಮುಖಂಡರಾದ ಪ್ರಭಾಕರ ಚಿಣಿ, ಫಕೀರಪ್ಪ ಚಳಗೇರಿ, ಶರಣಪ್ಪ ಕುಂಬಾರ ಮಾತನಾಡಿದರು, ಈ ಸಂದರ್ಭದಲ್ಲಿ ವಿಜಯಕುಮಾರ ತಾಳಕೇರಿ, ಸಾಗರ ಬೇರಿ, ಶೈಲಜಾ ಬಾಗಲಿ, ಗಂಗಾಧರಯ್ಯ ಹಿರೇಮಠ, ಚಂದ್ರು ವಡಗೇರಿ, ಪರಿಮಳ ಶೆಟ್ಟರ, ಬಸವರಾಜ ಹಳ್ಳೂರು ಇತರರು ಇದ್ದರು. ಕಾರ್ಯಕ್ರಮಕ್ಕೂ ಮೊದಲು ಮಾಜಿ ಎಂಎಲ್ಸಿ ಭಾನುಪ್ರಕಾಶ ನಿಧನಕ್ಕೆ ಒಂದು ನಿಮಿಷಗಳ ಕಾಲ ಮೌನಾಚರಣೆ ಮಾಡಲಾಯಿತು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ