ಧಾರವಾಡ: ಬದಲಾವಣೆ ಜಗದ ನಿಯಮ. ಆದರೆ, ಆ ಬದಲಾವಣೆಯು ಯಾವುದೇ ಪ್ರಾದೇಶಿಕ ಭಾಷೆಗಳಿಗೆ ಮಾರಕವಾಗಬಾರದು ಎಂದು ಹಿರಿಯ ಲೇಖಕಿ ಡಾ. ವಿನಯಾ ಒಕ್ಕುಂದ ಹೇಳಿದರು.
ಬದಲಾವಣೆಯ ನಿಯಮಕ್ಕೆ ಸಿಲುಕಿ ಕನ್ನಡ ಸಹ ತನ್ನ ಮರ್ಯಾದೆ ಕಳೆದುಕೊಳ್ಳುವ ಕಾಲಘಟ್ಟಕ್ಕೆ ಬಂದಿರುವುದು ಬೇಸರದ ಸಂಗತಿ. ಈ ವಿಷಯದಲ್ಲಿ ನಾವು ಬ್ರಿಟಿಷರನ್ನು ಎದುರಿಸಬಹುದು. ಆದರೆ, ನಮ್ಮನವರನ್ನೇ ಎದುರಿಸುವುದು ಸಂಕಷ್ಟವಾಗಿದೆ ಎಂದರು.
ಪ್ರಸ್ತುತ ಬರವಣಿಗೆ ಕಷ್ಟದ ಕೆಲಸ ಹಾಗೂ ಬೇಡವಾದ ವಸ್ತುವೂ ಹೌದು. ಅಲ್ಲದೇ ಅಭಿವ್ಯಕ್ತಿ ಮೇಲೆ ಹಲ್ಲೆ ನಡೆಯುತ್ತಿದೆ. ನಿಜ ಹೇಳದೇ ಸುಖಾಸುಮ್ಮನೆ ಹೇಳಿದ್ದನ್ನು ಒಪ್ಪಿಕೊಳ್ಳುವ ಕಾಲ ಬಂದಿದೆ. ಜೊತೆಗೆ ಸಾಹಿತ್ಯ ಕ್ಷೇತ್ರ ಖರೀದಿಗೆ ಒಳಗಾಗಿದ್ದು, ಸಾಹಿತ್ಯದ ಶ್ರಮಕ್ಕಾಗಿ ಪ್ರಶಸ್ತಿ ತೆಗೆದುಕೊಂಡವರು ಭಯ ಪಡುವ ಸ್ಥಿತಿ ಬಂದಿದೆ. ಕವಿ, ಕಲಾವಿದರು ಹಾಗೂ ಪ್ರತಿಭೆಗಳು ಸಹ ಮಾರಾಟಗೊಳ್ಳುತ್ತಿದ್ದು, ನಮ್ಮನ್ನು ಸುತ್ತಿಕೊಂಡಿರುವ ಸೂತಕಗಳಿಂದ ಹೊರ ಬರಬೇಕಾಗಿದೆ ಎಂದು ಎಚ್ಚರಿಸಿದರು.ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ. ಸಂತೋಷ ಹಾನಗಲ್ಲ, ಕನ್ನಡವನ್ನು ನಾವು ಯಾವ ದಿಕ್ಕಿಗೆ ತೆಗೆದುಕೊಂಡು ಹೋಗುತ್ತಿದ್ದೇವೆ ಎಂಬ ಚಿಂತನೆ ಆಗಬೇಕಾಗಿದೆ. ನಾಡಿನ ಸಂಸ್ಕೃತಿ ಬಗ್ಗೆ ಮುಂದಿನ ಪೀಳಿಗೆಗೆ ಏನು ಹೇಳುತ್ತಿದ್ದೇವೆ ಎಂಬ ಆಲೋಚನೆ ಮಾಡಬೇಕಾದ ಅನಿವಾರ್ಯತೆ ಬಂದಿದೆ. ಮಾತೃ ಭಾಷೆಯನ್ನೂ ಸರ್ಕಾರದ ಆದೇಶದಿಂದ ಕಲಿಯಬೇಕಾದ ಸ್ಥಿತಿ ಬಂದಿದ್ದು ನಿಜಕ್ಕೂ ಖೇದಕರ ಎಂದರು.
ರಾಜೇಶ್ವರಿ ಹತ್ತಿಕಾಳ, ಪ್ರೊ. ಕೆ.ಎಸ್. ಕೌಜಲಗಿ, ಡಾ. ಜಿನದತ್ತ ಹಡಗಲಿ, ಡಾ. ಎಸ್.ಎಸ್. ದೊಡಮನಿ, ಎಸ್.ಎಫ್. ಸಿದ್ಧನಗೌಡರ, ಶಾಂತವೀರ ಬೆಟಗೇರಿ, ಎಸ್.ಎಚ್. ಪ್ರತಾಪ ಇದ್ದರು.
ಮೆರವಣಿಗೆ