ದುಡಿಯುವ ಆತುರದಲ್ಲಿ ಮಕ್ಕಳನ್ನು ನಿರ್ಲಕ್ಷ್ಯಿಸಬೇಡಿ: ಜನಾರ್ದನ ರೆಡ್ಡಿ

KannadaprabhaNewsNetwork |  
Published : Jun 11, 2026, 12:45 AM IST
ಬಳ್ಳಾರಿಯ ಹವಾಂಭಾವಿ ಪ್ರದೇಶದ ಗ್ಲಾಸ್ ಹೌಸ್‌ನಲ್ಲಿ ಹಮ್ಮಿಕೊಂಡಿದ್ದ ನಾರೀಜೀವನ್ ಸೀಸನ್-3ಕ್ಕೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಚಾಲನೆ ನೀಡಿದರು. | Kannada Prabha

ಸಾರಾಂಶ

ಬಳ್ಳಾರಿ ಹವಾಂಭಾವಿ ಪ್ರದೇಶದ ರೆಡ್ಡಿ ಗ್ಲಾಸ್ ಹೌಸ್‌ನಲ್ಲಿ ವಿಶ್ವಭಾರತಿ ಕಲಾನಿಕೇತನ ಮತ್ತು ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಲಕ್ಷ್ಮೀ ಅರುಣಾ ಅವರ ಹುಟ್ಟುಹಬ್ಬ ಅಂಗವಾಗಿ "ನಾರೀಜೀವನ್‌ " ಸೀಸನ್ 3 ಚಾಲನೆ ನೀಡಲಾಯಿತು.

ಬಳ್ಳಾರಿ: ಹಣ ಸಂಪಾದನೆ ಮತ್ತು ಉದ್ಯೋಗದ ಒತ್ತಡದ ನಡುವೆ ಪೋಷಕರು ತಮ್ಮ ಮಕ್ಕಳ ಬಗ್ಗೆ ನಿರ್ಲಕ್ಷ್ಯ ತೋರಬಾರದು ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಮನವಿ ಮಾಡಿದರು.

ಇಲ್ಲಿನ ಹವಾಂಭಾವಿ ಪ್ರದೇಶದ ರೆಡ್ಡಿ ಗ್ಲಾಸ್ ಹೌಸ್‌ನಲ್ಲಿ ವಿಶ್ವಭಾರತಿ ಕಲಾನಿಕೇತನ ಮತ್ತು ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಲಕ್ಷ್ಮೀ ಅರುಣಾ ಅವರ ಹುಟ್ಟುಹಬ್ಬ ಅಂಗವಾಗಿ ಹಮ್ಮಿಕೊಂಡಿದ್ದ "ನಾರೀಜೀವನ್‌ " ಸೀಸನ್ 3 (ಮಹಿಳೆಯರಿಗೆ ವಿವಿಧ ಉಚಿತ ತರಬೇತಿಗಳ ಶಿಬಿರ) ಚಾಲನೆ ನೀಡಿ ಅವರು ಮಾತನಾಡಿದರು. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಕುಟುಂಬದ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಅವರ ಚಟುವಟಿಕೆ, ಸ್ನೇಹಿತರ ವಲಯ ಹಾಗೂ ದಿನನಿತ್ಯದ ವರ್ತನೆಗಳ ಬಗ್ಗೆ ಪೋಷಕರು ನಿರಂತರ ಗಮನಹರಿಸಬೇಕು ಎಂದು ಕಿವಿಮಾತು ಹೇಳಿದರು.

ಸಮಾಜದಲ್ಲಿ ಇತ್ತೀಚಿನ ದಿನಗಳಲ್ಲಿ ಡ್ರಗ್ಸ್, ಗಾಂಜಾ ಇತರ ದುಶ್ಚಟಗಳ ಜಾಲ ವ್ಯಾಪಕವಾಗುತ್ತಿದೆ. ಕೆಲವು ದುಷ್ಟಶಕ್ತಿಗಳು ಮಕ್ಕಳನ್ನು ಮತ್ತು ಯುವಕರನ್ನು ಗುರಿಯಾಗಿಸಿಕೊಂಡು ಅವರನ್ನು ವ್ಯಸನದ ಕಡೆಗೆ ತಳ್ಳುವ ಮೂಲಕ ಹಣ ಸಂಪಾದಿಸುವ ದುಷ್ಕೃತ್ಯಗಳಲ್ಲಿ ತೊಡಗಿವೆ. ಸಮಾಜಘಾತುಕ ಶಕ್ತಿಗಳ ಸಂಖ್ಯೆ ಹೆಚ್ಚುತ್ತಿದ್ದು, ಇಂತಹ ವ್ಯಕ್ತಿಗಳಿಂದ ಮಕ್ಕಳನ್ನು ರಕ್ಷಿಸುವ ಜವಾಬ್ದಾರಿ ಪೋಷಕರದ್ದಾಗಿದೆ. ಮಕ್ಕಳಿಗೆ ಉತ್ತಮ ಶಿಕ್ಷಣದ ಜತೆಗೆ ಸಂಸ್ಕಾರ, ನೈತಿಕ ಮೌಲ್ಯಗಳು ಹಾಗೂ ಜೀವನ ಕೌಶಲ್ಯಗಳನ್ನು ಕಲಿಸಿಕೊಡುವುದು ಅಗತ್ಯವಾಗಿದೆ. ಅವರು ಎಲ್ಲಿಗೆ ಹೋಗುತ್ತಾರೆ? ಯಾರೊಂದಿಗೆ ಬೆರೆಯುತ್ತಾರೆ? ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳನ್ನು ಹೇಗೆ ಬಳಸುತ್ತಾರೆ ಎಂಬುದರ ಮೇಲೂ ಸೂಕ್ತ ನಿಗಾ ಇರಬೇಕು. ಮಕ್ಕಳ ಕಡೆ ಕಣ್ಣಾಗಿದ್ದು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ರಾಜಕೀಯ ಷಡ್ಯಂತ್ರ್ಯದಿಂದ ನಾನು ಜೈಲಿಗೆ 4 ವರ್ಷ ಜೈಲು ಸೇರಿದೆ. ಅಂತಹ ಸಂದಿಗ್ದ ಸ್ಥಿತಿಯಲ್ಲಿ ಪತ್ನಿ ಧೈರ್ಯ ತುಂಬಿ ಮಕ್ಕಳನ್ನು ಪೋಷಣೆ ಮಾಡಿದರು. ನನಗೆ ಪ್ರತಿಯೊಂದು ಹಂತದಲ್ಲೂ ತೊಂದರೆ ಕೊಟ್ಟರು. ರಾಜಕೀಯವಾಗಿ ಬೆಳೆಯುವಾಗ ಈ ರೀತಿಯ ತೊಂದರೆ ಕೊಡುವವರು ಇದ್ದೇ ಇರುತ್ತಾರೆ. ಅದನ್ನು ನಾವು ಸಮರ್ಥವಾಗಿ ಎದುರಿಸಿದೆವು. ಕಷ್ಟಕಾಲದಲ್ಲಿ ಕುಟುಂಬದ ಬಲ ಮುಖ್ಯವಾಗುತ್ತದೆ ಎಂದು ಹೇಳಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಲಿಷ್ಠ ಭಾರತ ಕಟ್ಟುವ ಸಂಕಲ್ಪ ಮಾಡಿದ್ದಾರೆ. ಅವರ ಸತತ ಪರಿಶ್ರಮದಿಂದಾಗಿಯೇ ಭಾರತ ಆರ್ಥಿಕವಾಗಿ ಸಮೃದ್ಧವಾಗಿ ಬೆಳೆಯುತ್ತಿದೆ. ಪ್ರತಿಯೊಬ್ಬ ಭಾರತೀಯರು ಸಹ ದೇಶ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಜಾಗತಿಕವಾಗಿ ಭಾರತಕ್ಕೆ ದೊಡ್ಡ ಹೆಸರು ತಂದುಕೊಟ್ಟ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸೇವೆಯನ್ನು ನಾವು ಸದಾ ಸ್ಮರಿಸುವಂತಾಗಬೇಕು ಎಂದು ಹೇಳಿದರು.

ಲಕ್ಷ್ಮೀಅರುಣಾ ಮಾತನಾಡಿ, ಮಹಿಳೆಯರಿಗೆ ಮೆಹಂದಿ ಇತರ ಕೌಶಲ್ಯ ತರಬೇತಿ ನೀಡಿ, ಅವರ ಜೀವನ ಸುಗಮವಾಗಿಸಲು ಆಶಯದಿಂದ ನಾರೀಜೀವನ್ ಆರಂಭಿಸಿದೆವು. ಈ ವರೆಗೆ 2 ಸಾವಿರ ಜನರಿಗೆ ತರಬೇತಿ ನೀಡಲಾಗಿದೆ. ಮಹಿಳೆಯರು ಆರ್ಥಿಕವಾಗಿ ಸದೃಢರಾಗಬೇಕು. ಸ್ವಾವಲಂಬನೆ ಜೀವನ ನಡೆಸುವಂತಾಗಬೇಕು ಎಂಬುದು ನಮ್ಮ ನಾರೀಜೀವನ್ ಯೋಜನೆಯ ಮುಖ್ಯ ಉದ್ದೇಶವಾಗಿದ್ದು, ಇದನ್ನು ನಿರಂತರವಾಗಿ ಮುಂದುವರಿಸಿಕೊಂಡು ಹೋಗಲಾಗುವುದು ಎಂದು ತಿಳಿಸಿದರು. ಬಿಜೆಪಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಹಂಪಿ ರಮಣಾ ಕಾರ್ಯಕ್ರಮ ನಿರ್ವಹಿಸಿದರು. ನಗರದ ವಿವಿಧೆಡೆಯ ಸಾವಿರಕ್ಕೂ ಅಧಿಕ ಮಹಿಳೆಯರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೋದಿ ಆಡಳಿತ ಜಗತ್ತಿಗೆ ಮಾದರಿ: ವೀರಣ್ಣ
ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಶ್ರಮಿಸಿ