ನೇಹಾಳ ಸಾವನ್ನು ಸ್ವಾರ್ಥಕ್ಕೆ ಬಳಸಿಕೊಳ್ಳಬೇಡಿ: ಡಾ. ನಾಗಲಕ್ಷ್ಮೀ ಚೌಧರಿ ಮನವಿ

KannadaprabhaNewsNetwork |  
Published : Apr 22, 2024, 02:05 AM IST
ಹುಬ್ಬಳ್ಳಿಯ ಬಿಡನಾಳದಲ್ಲಿರುವ ಮೃತ ನೇಹಾ ನಿವಾಸಕ್ಕೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಭೇಟಿ ನೀಡಿ ಕುಟುಂಬದವರೊಂದಿಗೆ ಚರ್ಚಿಸಿದರು. | Kannada Prabha

ಸಾರಾಂಶ

ಕೇವಲ ಸ್ವಾರ್ಥಕ್ಕಾಗಿ ಯಾರೂ ಹೆಣ್ಣು ಮಕ್ಕಳಿಗೆ ಅನ್ಯಾಯ ಮಾಡಬಾರದು. ಈ ಪ್ರಕರಣದಲ್ಲಿ ಯಾವುದೇ ಜಾತಿ, ಧರ್ಮ, ರಾಜಕಾರಣ ತರಬೇಡಿ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಹೇಳಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ನೇಹಾಳ ಸಾವನ್ನು ಯಾರು ರಾಜಕೀಯ ಸ್ವಾರ್ಥಕ್ಕೆ ಬಳಸಿಕೊಳ್ಳಬಾರದು. ನ್ಯಾಯಸಮ್ಮತವಾದ ತನಿಖೆ ನಡೆದು ಹಂತಕನಿಗೆ ಗಲ್ಲುಶಿಕ್ಷೆಯಾಗಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಆಗ್ರಹಿಸಿದರು.

ಇಲ್ಲಿನ ನೇಹಾಳ ನಿವಾಸಕ್ಕೆ ಭಾನುವಾರ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಸುದ್ದಿಗಾರರೊಂದಿಗೆ ಮಾತನಾಡಿದರು.

ಕೇವಲ ಸ್ವಾರ್ಥಕ್ಕಾಗಿ ಯಾರೂ ಹೆಣ್ಣು ಮಕ್ಕಳಿಗೆ ಅನ್ಯಾಯ ಮಾಡಬಾರದು. ಈ ಪ್ರಕರಣದಲ್ಲಿ ಯಾವುದೇ ಜಾತಿ, ಧರ್ಮ, ರಾಜಕಾರಣ ತರಬೇಡಿ. ಇತ್ತೀಚಿಗೆ ಈ ರೀತಿಯ ಪ್ರಕರಣಗಳು ಪದೇ ಪದೇ ನಡೆಯುತ್ತಿವೆ. ಇದಕ್ಕೆ ಕಡಿವಾಣ ಹಾಕಲೇಬೇಕು. ಕೊಲೆ ಆರೋಪಿ ಒಬ್ಬನೇ ಇರುವುದಿಲ್ಲ. ಅವನ ಜತೆ ಬೇರೆಯವರು ಬೆಂಬಲ ಕೊಟ್ಟಿರುವ ಸಾಧ್ಯತೆಯಿದೆ. ಹೀಗಾಗಿ ಸಮಗ್ರ ತನಿಖೆ ನಡೆಯಬೇಕು. ನೇಹಾಳ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ನಾವು ಅವರೊಂದಿಗೆ ಇದ್ದೇವೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹಸಚಿವ ಡಾ. ಜಿ. ಪರಮೇಶ್ವರ ನೀಡಿರುವ ಹೇಳಿಕೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಅವರು, ಯಾರೇ ಆಗಲಿ ಘಟನೆಯ ಸೂಕ್ಷ್ಮತೆ ಗ್ರಹಿಸಿ, ಕುಟುಂಬದವರಿಗೆ ನೋವುಂಟು ಮಾಡುವ ಹೇಳಿಕೆ ನೀಡಬಾರದು ಎಂದರು.

ಶಾಲಾ, ಕಾಲೇಜುಗಳಲ್ಲಿ ಸರ್ಕಾರ, ಖಾಸಗಿ ಶಿಕ್ಷಣ ಸಂಸ್ಥೆಗಳು ಮಹಿಳೆಯರ ಮೇಲೆ ದೌರ್ಜನ್ಯ ನಡೆಯದಂತೆ ಯಾವ ರೀತಿಯ ಭದ್ರತೆ ನೀಡಿವೆ ಎಂಬುದನ್ನು ಸರ್ಕಾರ ಪ್ರತಿ ಜಿಲ್ಲಾಧಿಕಾರಿ ಮೂಲಕ 15 ದಿನಗಳಲ್ಲಿ ಮಾಹಿತಿ ತರಿಸಿಕೊಳ್ಳಬೇಕು. ಈ ಕುರಿತು ಈಗಾಗಲೇ ನಾನು ಪೊಲೀಸ್‌ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದ್ದು, ಸಮಗ್ರ ಮಾಹಿತಿ ಪಡೆಯುವೆ ಎಂದರು.

ಎಷ್ಟೋ ಮಹಿಳೆಯರಿಗೆ ಮಹಿಳಾ ಆಯೋಗ ಇರುವುದೇ ಗೊತ್ತಿಲ್ಲ. ಇದು ನೋವಿನ ಸಂಗತಿ. ಈ ಕುರಿತು ಪ್ರತಿ ಮನೆ ಮನೆಗೂ ಗೊತ್ತಾಗಬೇಕು. ಪ್ರತಿಯೊಬ್ಬರೂ ಮಹಿಳಾ ಆಯೋಗದ ಕುರಿತು ಅರಿವು ಹೊಂದಬೇಕು. ಮಹಿಳೆಯರ ಸಹಾಯಕ್ಕಾಗಿ ಉಚಿತ ಟೋಲ್‌ ಫ್ರೀ ಸಂಖ್ಯೆ ನೀಡುವಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದು, ಶೀಘ್ರವೇ ಜಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಪೋಕ್ಸೋ ಪ್ರಕರಣಗಳಂತೆ ಮಹಿಳೆಯರ ಮೇಲಿನ ದೌರ್ಜನ್ಯಗಳ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ತ್ವರಿತ ನ್ಯಾಯಾಲಯಕ್ಕೆ ಒಪ್ಪಿಸಬೇಕು. ತನಿಖೆಯಲ್ಲಿ ವಿಳಂಬವಾದಲ್ಲಿ ಜನರು, ಪೊಲೀಸರು ಮರೆತು ಹೋಗುವ ಆತಂಕವಿದೆ. ಹಾಗಾಗಿ ಇಂತಹ ಪ್ರಕರಣಗಳ ವಿಚಾರಣೆ ಬೇಗ ನಡೆದು ಸೂಕ್ತ ನ್ಯಾಯ ದೊರೆಯುವಂತಾಗಬೇಕು ಎಂದರು.

PREV