ಹಾವೇರಿ: ಮರಳು ಮತ್ತು ಮಣ್ಣು ಕದಿಯುವುದು ಗೊತ್ತಾಗುವುದಿಲ್ಲಾ ಅಂದ್ರೆ ಹೇಗೆ? ಸುಳಿವು ಸಿಗದಂತೆ ಕದಿಯಲು ಅದೇನು ಬಂಗಾರವಾ? ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಅಕ್ರಮವಾಗಿ ಮರಳುಗಾರಿಕೆ ಮತ್ತು ಸರ್ಕಾರದ ಜಾಗದಲ್ಲಿನ ಮಣ್ಣು ಸಾಗಾಟ ಆಗುತ್ತಿದ್ದರೂ ಏಕೆ ಮೌನ ವಹಿಸಿದ್ದೀರಿ? ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.
ಖಚಿತ ಮಾಹಿತಿ ಪಡೆದುಕೊಂಡ ನಂತರವೇ ಸ್ಥಳಕ್ಕೆ ಭೇಟಿ ನೀಡುತ್ತಿದ್ದೇನೆ. ಸಾಲುಗಟ್ಟಿ ವಾಹನಗಳಲ್ಲಿ ಮಣ್ಣು ಮತ್ತು ಮರಳು ಸಾಗಾಟ ಮಾಡಲಾಗುತ್ತಿರುವ ಫೋಟೋ, ವಿಡಿಯೋಗಳು ಇವೆ. ತೋರಿಸಬೇಕಾ? ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ಅವರು, ನಿಮಗೆ ಇದೆಲ್ಲವೂ ಗೊತ್ತಿದ್ದೂ ಸುಮ್ಮನಿದ್ದೀರಿ ಎಂದರೆ ಏನರ್ಥ ಎಂದರು.
ಕೆಐಎಡಿಬಿ ಅಧಿಕಾರಿಗಳಿಗೂ ಜವಾಬ್ದಾರಿ ಇರಬೇಕು. ಈ ಭೂಮಿಯ ಮಾಲೀಕತ್ವ ಪಡೆದ ನಂತರ ಇಲ್ಲಿ ಏನು ನಡೆಯುತ್ತಿದೆ ಎಂಬುದನ್ನು ನೋಡಿಕೊಂಡು ಸುಮ್ಮನೆ ಇದ್ದೀರಾ? ಎಷ್ಟು ಬಾರಿ ಮೀಟಿಂಗ್ ಮಾಡಿದ್ದೇವೆ. ಆದರೂ ಗಮನಕ್ಕೆ ತಂದಿಲ್ಲ ಎಂದು ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ್ ಹೇಳಿದರು.ಮಣ್ಣು, ಮರಳು ಕಳ್ಳರು ಸರ್ಕಾರಕ್ಕೆ ಬೆದರಿಕೆ ಹಾಕುವ ಮಟ್ದಕ್ಕೆ ಬೆಳೆದಿದ್ದಾರಾ? ಎಂದು ಪ್ರಶ್ನಿಸಿದ ಸಚಿವರು, ಕೈಗಾರಿಕಾ ಪ್ರದೇಶದಲ್ಲಿ ಸಶಸ್ತ್ರ ಸಿಬ್ಬಂದಿ ನಿಯೋಜನೆ ಮಾಡಿ ಎಂದು ಸೂಚಿಸಿದರು.
ಅಕ್ರಮ ಮರಳು ಮತ್ತು ಮಣ್ಣು ಸಾಗಾಟವನ್ನು ಗಂಭೀರವಾಗಿ ಪರಿಗಣಿಸಿದ್ದೇನೆ. ಸಂಬಂಧಪಟ್ಟ ಸಂಪೂರ್ಣ ಮಾಹಿತಿ ನನ್ನ ಬಳಿ ಇದೆ. ಇಂತಹ ಅಕ್ರಮಗಳಿಗೆ ಆಸ್ಪದ ನೀಡುವುದಿಲ್ಲ ಎಂದು ಸಚಿವರು ಹೇಳಿದರು.
ಸಭೆ ಕರೆಯಲು ಸೂಚನೆ: ಅರಣ್ಯ ಇಲಾಖೆ ಸಮಸ್ಯೆ ಕಾರಣದಿಂದ ಕೋಳೂರು ಗಣಜೂರು ಕೈಗಾರಿಕಾ ಪ್ರದೇಶ ಅಭಿವೃದ್ಧಿ ಕಾಮಗಾರಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಫೆ. 12ರಂದು ಹಾವೇರಿಯಲ್ಲೇ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರೊಂದಿಗೆ ಸಭೆಗೆ ವ್ಯವಸ್ಥೆ ಮಾಡಿ ಎಂದು ಸಚಿವ ಶಿವಾನಂದ ಪಾಟೀಲ ಅವರು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.