ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಜಲ ಜೀವನ್ ಮಿಷನ್ ಯೋಜನೆಯಡಿಯಲ್ಲಿ ಮನೆ ಮನೆಗೆಗೂ ನಲ್ಲಿ ನೀರು ಸಂಪರ್ಕ ಕಲ್ಪಿಸುವ ಯೋಜನೆ ಗ್ರಾಮೀಣರಿಗೆ ವರವಾಗಿದ್ದರೆ, ಮತ್ತೊಂದೆಡೆ ಪೈಪ್ ಲೈನ್ ಅಳವಡಿಕೆಗಾಗಿ ರಸ್ತೆಗಳನ್ನು ಅಗೆದು ಹಾಗೆಯೇ ಬಿಟ್ಟಿರುವುದು ರಸ್ತೆಗಳಿಗೆ ಕಂಟಕವಾಗಿ ಪರಿಣಮಿಸಿದೆ.ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯಾದ ಮನೆ ಮನೆಗೂ ನಲ್ಲಿ ನೀರು ಕಲ್ಪಿಸುವ ಜಲ ಜೀವನ್ ಮಿಷನ್ ಯೋಜನೆ ಗ್ರಾಮೀಣ ಭಾಗದ ಮಹಿಳೆಯರಿಗೆ ಹೆಚ್ಚಿನ ಅನುಕೂಲವಾಗಿದೆ,
ಅನುಕೂಲ- ಅನನುಕೂಲಈ ಹಿಂದೆ ನೀರಿಗಾಗಿ ಮಹಿಳೆಯರು ಬಿಂದಿಗೆಗಳನ್ನು ಹಿಡಿದುಕೊಂಡು ಅಲೆಯುವಂತಾಗಿತ್ತು. ಈಗ ಈ ಜಲ ಜೀವನ್ ಯೋಜನೆಯಿಂದ ಮನೆ ಮನೆಗೆ ನಲ್ಲಿ ನೀರು ಪೂರೈಸಲಾಗುತ್ತಿದೆ. ಆದರೆ ಯೋಜನೆಯಡಿಯಲ್ಲಿ ಪೈಪ್ ಲೈನ್ ಅಳವಡಿಕೆಗೆ ಗುತ್ತಿಗೆದಾರ ರಸ್ತೆಯನ್ನು ಅಗೆದು ಪೈಪ್ ಲೈನ್ ಜೋಡಿಸಿದ ಬಳಿಕ ಸರಿಯಾಗಿ ಮುಚ್ಚದಿರುವ ಕಾರಣ ರಸ್ತೆಗಳು ದುಸ್ಥಿತಿಯಲ್ಲಿವೆ. ಗುತ್ತಿಗೆದಾರರ ಅಸೆಡ್ಡೆಯಿಂದ ರಸ್ತೆಗಳು ಹಾಳಾಗಿದ್ದರೂ ದುರಸ್ತಿಗೆ ಮುಂದಾಗುತ್ತಿಲ್ಲ.
ತಾಲೂಕಿನ ಚಿನ್ನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವಗಾನಹಳ್ಳಿ ಗ್ರಾಮದಲ್ಲಿ ಕಳೆದ ಹಲವು ತಿಂಗಳ ಹಿಂದೆ ಈ ಜಲ ಜೀವನ್ ಮಿಷನ್ ಜಾರಿಗೊಳಿಸಲು ಗ್ರಾಮದ ಮುಖ್ಯರಸ್ತೆಗಳನ್ನು ಅಗೆದು ತಿಂಗಳುಗಟ್ಟಲೆ ಹಾಗೆ ಬಿಟ್ಟಿದ್ದಾರೆ. ಇದರಿಂದಾಗಿ ವೃದ್ಧರು, ದನಕರಗಳು ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ಅಧಿಕಾರಿಗಳು ಕೂಡಲೆ ಕಾಮಗಾರಿಯನ್ನು ತ್ವರಿತವಾಗಿ ಮುಗಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದರೆ.ಆರು ತಿಂಗಳಾದರೂ ದುರಸ್ತಿ ಇಲ್ಲಕಾಮಗಾರಿಯನ್ನು ಪೂರ್ಣಗೊಳಿಸದ ಕಾರಣ ಅರೆಬರೆ ಕಾಮಗಾರಿ ಮುಗಿಸಿ ನಳ ನೀರು ಸಂಪರ್ಕ ನೀಡಲು ಕೆಲವು ಕಡೆ ಆರು ತಿಂಗಳಾದರೂ ಇಂದಿಗೂ ಗುಂಡಿಗಳನ್ನು ಮುಚ್ಚಿಲ್ಲ ಹಾಗೂ ಐದಾರು ಅಡಿ ಪೈಪ್‌ಗಳನ್ನು ಭೂಮಿಯಿಂದ ಹೊರಗೆ ಬಿಡಲಾಗಿದೆ. ಇನ್ನೂ ಕೆಲವೆಡೆ ಗ್ರಾಮದ ಉದ್ದಗಲಕ್ಕೂ ಇರುವ ರಸ್ತೆಗಳ ಮಧ್ಯ ಭಾಗಕ್ಕೆ ಅಗೆದು ಎರಡು ಭಾಗಗಳನ್ನಾಗಿ ಮಾಡಿ ರಸ್ತೆ ಮಧ್ಯ ಭಾಗದಲ್ಲಿ ಒಂದೆರಡು ಅಡಿ ಗುಂಡಿ ಅಗೆದು ಹಾಗೆ ಬಿಟ್ಟ ಪರಿಣಾಮ ಕಾಂಕ್ರಿಟ್ ರಸ್ತೆಗಳ ತ್ಯಾಜ್ಯ ಎಲ್ಲೆಂದರಲ್ಲಿ ಹಾಗೆ ಬಿಟ್ಟ ಪರಿಣಾಮ ಸಾರ್ವಜನಿಕರು ಓಡಾಡಲು ಕಷ್ಟವಾಗಿದೆ.
ಈ ಯೋಜನೆಯಡಿ ನಿರ್ಮಾಣ ಕಾಮಗಾರಿ ಕಳಪೆಯಾಗಿದೆ ಎಂಬು ಆರೋಪಗಳು ಕೇಳಿ ಬರುತ್ತಿದ್ದರೂ ಅಧಿಕಾರಿಗಳು ಕಂಡು ಕಾಣದಂತೆ ವರ್ತಿಸುತ್ತಿದ್ದಾರೆ. ಇದರಿಂದ ಕೇಂದ್ರ ಸರ್ಕಾರದ ಯೋಜನೆ ಗುತ್ತಿಗೆದಾರರ ನಿರ್ಲಕ್ಷ್ಯಕ್ಕೆ ಬಲಿಯಾಗುತ್ತಿದೆ. ಸಾರ್ವಜನಿಕರ ಹಣ ಪೋಲಾಗುವುದನ್ನು ತಡೆಯಲು ಕೂಡಲೇ ಅಧಿಕಾರಿಗಳು ಕಾಮಗಾರಿಯನ್ನು ಪರಿಶೀಲಿಸಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಗುತ್ತಿಗೆದಾರರಿಗೆ ಸೂಚಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.