ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ
ಸರಕಾರದ ಸೌಲಭ್ಯಗಳನ್ನು ಬಡವರ ಮನೆ ಬಾಗಿಲಿಗೆ ತಲುಪಿಸಲು ಮತ್ತು ಜನರ ಸಂಕಷ್ಟಗಳನ್ನು ಪರಿಹರಿಸುವುದಕ್ಕಾಗಿ ಮನೆ ಬಾಗಿಲಿಗೆ-ಮನೆ ಮಗ ಎಂಬ ವಿನೂತನ ಜನಸ್ಪಂದನ ಕಾರ್ಯಕ್ರಮಕ್ಕೆ ಮೇ 2 ರಿಂದ ಚಾಲನೆ ನೀಡಲಾಗುವುದು ಎಂದು ಶಾಸಕ ಸಿ.ಬಿ.ಸುರೇಶಬಾಬು ನುಡಿದರು.ತೀನಂಶ್ರೀ ಭವನದಲ್ಲಿ ನಡೆದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಮನೆ ಬಾಗಿಲಿಗೆ ಮನೆ ಮಗ ಎಂಬ ವಿನೂತನ ಕಾರ್ಯಕ್ರಮದ ಶೀರ್ಷಿಕೆ ಅನಾವರಣಗೊಳಿಸಿ ಮಾತನಾಡಿದ ಅವರು ಜನ ಸೇವೆ ಮಾಡಲು ನಿಮ್ಮ ಮುಂದೆ ಬಂದಿದ್ದೇನೆ. ನಾನು ಜಾತಿ ನೋಡಿ ಕೆಲಸ ಮಾಡಿಲ್ಲ ನೀತಿ ನೋಡಿ ಕೆಲಸ ಮಾಡಿದ್ದೇನೆ ಎಂದು ಹೇಳಿದರು.
ಸರಕಾರದ ಪ್ರಮುಖ ಸೇವೆಗಳನ್ನು ಮನೆ ಬಾಗಿಲಲ್ಲೆ ಲಭ್ಯವಾಗುವಂತೆ ಮಾಡಲು, ಅಧಿಕಾರಿಗಳ ಬಳಿ ನೇರವಾಗಿ ದೂರುಗಳನ್ನು ಸಲ್ಲಿಸಲು ಸಾಧ್ಯವಾಗದ ನಾಗರಿಕರು ಮೇ 2 ರಿಂದ ಆಯೋಜಿಸಿರುವ ಮನೆ ಬಾಗಿಲಿಗೆ-ಮನೆ ಮಗ ವಿಶೇಷ ಕಾರ್ಯಕ್ರಮದಲ್ಲಿ ಸಮಸ್ಯೆಗಳ ಅಹವಾಲು ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು. ಪ್ರತಿ ಶುಕ್ರವಾರ ಒಂದೊಂದು ಹೋಬಳಿ ಕೇಂದ್ರದಲ್ಲಿ ಮನೆ ಬಾಗಿಲಿಗೆ-ಮನೆ ಮಗ ಕುಂದುಕೊರತೆ ನಿವಾರಣೆ ಸಭೆ ನಡೆಯಲಿದೆ. ಪ್ರತಿಯೊಬ್ಬರ ಅಹವಾಲನ್ನು ನಾನು ಆಲಿಸಲಿದ್ದೇನೆ. ಎಲ್ಲಾ ಅರ್ಜಿಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ಕಳುಹಿಸಿ ಬಗೆಹರಿಸುವ ಕೆಲಸ ಮಾಡುತ್ತೇವೆ. ಕೆಲ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸಿಗಲಿದೆ ಎಂದು ಹೇಳಿದರು.ಜನರು ಶಾಸಕರ ಮನೆ ಬಾಗಿಲಿಗೆ ಬರುವುದಕ್ಕಿಂತ ಆಡಳಿತ ಯಂತ್ರವನ್ನೇ ಜನರ ಮನೆ ಬಾಗಿಲಿಗೆ ಕೊಂಡೊಯ್ಯುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸರಕಾರಿ ಸೇವೆಗಳನ್ನು ಸಮಯೋಚಿತವಾಗಿ ಮತ್ತು ಅನುಕೂಲಕರವಾಗಿ ಅವರ ಮನೆ ಬಾಗಿಲಿಗೆ ಪೂರೈಸುವುದನ್ನು ಖಚಿತಪಡಿಸಿಕೊಳ್ಳುವ ಮೂಲಕ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಾದ್ಯಂತ ಜನರ ಜೀವನವನ್ನು ಸರಳಗೊಳಿಸುವ ಗುರಿಯನ್ನು ಹೊಂದಿದ್ದೇನೆ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಇಂತಹ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ತಹಸೀಲ್ದಾರ್ ಪುರಂದರ್ , ಇಓ ದೊಡ್ಡಸಿದ್ದಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಕಾಂತರಾಜ್, ಹಾಗು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.