ಇ-ಆಡಳಿತದ ಮೂಲಕ ಮನೆ ಬಾಗಿಲಿಗೆ ಯೋಜನೆ: ಜಿಲ್ಲಾಧಿಕಾರಿ ದಾನಮ್ಮನವರ

KannadaprabhaNewsNetwork | Published : Dec 25, 2024 12:48 AM

ಸಾರಾಂಶ

ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಉತ್ತಮ ಆಡಳಿತ ವಾರ ಜಿಲ್ಲಾಮಟ್ಟದ ಕಾರ್ಯಾಗಾರ ನಡೆಯಿತು.

ಹಾವೇರಿ: ಇ-ಆಡಳಿತದ ಮೂಲಕ ಸಾಕಷ್ಟು ಯೋಜನೆಗಳನ್ನು ಜನರ ಬಾಗಿಲಿಗೆ ತೆಗೆದುಕೊಂಡು ಹೋಗಿ ಕಡಿಮೆ ಅವಧಿಯಲ್ಲಿ ಸೌಲಭ್ಯಗಳನ್ನು ಪೂರೈಸಲಾಗುತ್ತಿದೆ. ಇದೊಂದು ಉತ್ತಮ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಜಿಲ್ಲಾಧಿಕಾರಿ ಡಾ .ವಿಜಯಮಹಾಂತೇಶ ದಾನಮ್ಮನವರ ಹೇಳಿದರು.

ನಗರದ ಜಿಲ್ಲಾಡಳಿತದ ವತಿಯಿಂದ ಸೋಮವಾರ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಆಯೋಜಿಸಲಾದ ಉತ್ತಮ ಆಡಳಿತ ವಾರ ಜಿಲ್ಲಾಮಟ್ಟದ ಕಾರ್ಯಾಗಾರದಲ್ಲಿ ಮಾತನಾಡಿದರು.

ಪ್ರತಿವರ್ಷ ಡಿ. 25ರಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಪ್ರಯುಕ್ತ ಉತ್ತಮ ಆಡಳಿತ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಆ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಇಲಾಖೆಯು ಡಿ. 19ರಿಂದ 24ರ ವರೆಗೆ ಪ್ರಶಾಸನ್ ಗಾಂವ್ ಕಿ ಓರ್ ಅಭಿಯಾನ ಎಂಬ ಘೋಷ ವಾಕ್ಯದೊಂದಿಗೆ ಉತ್ತಮ ಆಡಳಿತ ವಾರವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ ಎಂದರು.

ಆಡಳಿತವೆಂದರೆ ತೀರ್ಮಾನಗಳನ್ನು ತೆಗೆದುಕೊಳ್ಳುವುದು ಮತ್ತು ತೆಗೆದುಕೊಂಡ ತೀರ್ಮಾನವನ್ನು ಹೇಗೆ ಜಾರಿಗೊಳಿಸುತ್ತೇವೆ ಎಂಬುವುದೇ ಆಡಳಿತವಾಗಿದೆ. ಉತ್ತಮ ಆಡಳಿತ ವ್ಯವಸ್ಥೆಯ ಮುಖ್ಯ ಉದ್ದೇಶ ಸಾರ್ವಜನಿಕ ಕುಂದುಕೊರತೆಗಳನ್ನು ಬಗೆಹರಿಸುವುದು ಹಾಗೂ ಗರಿಷ್ಠ ಪ್ರಮಾಣದಲ್ಲಿ ಸೇವೆ ಒದಗಿಸುವುದಾಗಿದೆ. ಅದರಲ್ಲೂ ಮುಖ್ಯವಾಗಿ ಆಡಳಿತವನ್ನು ಗ್ರಾಮೀಣ ಭಾಗದ ಜನರ ಬಳಿ ತೆಗೆದುಕೊಂಡು ಹೋಗುವುದು ಮತ್ತು ಅಭಿವೃದ್ಧಿಪಡಿಸುವುದಾಗಿದೆ ಎಂದರು.

ಜಿಪಂ ಮುಖ್ಯಕಾರ್ಯನಿರ್ವಾಣಾಧಿಕಾರಿ ಅಕ್ಷಯ್ ಶ್ರೀಧರ್ ಮಾತನಾಡಿ, ಆಡಳಿತದಲ್ಲಿ ಸರಳತೆ, ಪರಿಣಾಮಕಾರಿ ಹಾಗೂ ದಕ್ಷತೆಯಿಂದ ನಿರ್ವಹಿಸುವುದಾಗಿದೆ. ಆಡಳಿತದಲ್ಲಿ ವಿನಾಕಾರಣ ಗೊಂದಲವನ್ನು ತರಬಾರದು, ಕೆಲಸವನ್ನು ಸಾವಧಾನವಾಗಿ, ಪ್ರಬುದ್ಧವಾಗಿ, ಯೋಜನಬದ್ದವಾಗಿ ತಿಳಿದುಕೊಂಡು ಪರಿಣಾಮಕಾರಿಯಾಗಿ ನಿರ್ವಹಿಸವುದಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಪಂ ನಿವೃತ್ತ ಉಪ ಕಾರ್ಯದರ್ಶಿ ಸೋಮಶೇಖರ್ ಮುಳ್ಳಳ್ಳಿ ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರ ಜಾರಿಗೆ ತಂದಿರುವ ಯೋಜನೆಯ ಸೌಲಭ್ಯಗಳನ್ನು ಪಾರದರ್ಶಕವಾಗಿ ನೀಡಿದಾಗ ಮಾತ್ರ ಉತ್ತಮ ಆಡಳಿತ ನಡೆಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ದೇಶದಲ್ಲಿಯೇ ಕರ್ನಾಟಕ ರಾಜ್ಯವನ್ನು ಉತ್ತಮ ಆಡಳಿತ ರಾಜ್ಯ ಎಂದು ಕರೆಯಲ್ಪಡಲಾಗುತ್ತಿದೆ. ಸರ್ಕಾರಿ ಕಚೇರಿಗಳಲ್ಲಿ ಆಡಳಿತ ವ್ಯವಸ್ಥೆಯು ಪಾರದರ್ಶಕವಾಗಿರಬೇಕು, ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಕೂಡ ಆಡಳಿತದಲ್ಲಿ ಪಾಲುದಾರಿಯನ್ನಾಗಿ ಮಾಡಿದಾಗ ಮಾತ್ರ ಉತ್ತಮ ಆಡಳಿತ ನೀಡಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಾಗಾರದಲ್ಲಿ ಕುಣಿಮೆಳ್ಳಿಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಅರವಿಂದ ಐರಾಣಿ ಕಾರ್ಯಾಗಾರದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಾಗಾರದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಎಲ್. ನಾಗರಾಜ್, ಜಿಲ್ಲಾ ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತ ಪೂಜಾರ ವೀರಮಲ್ಲಪ್ಪ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ರಂಗಸ್ವಾಮಿ, ಜಿಲ್ಲಾ ನಗರಭಿವೃದ್ಧಿ ಕೋಶದ ಯೋಜನಾಧಿಕಾರಿ ಮಮತಾ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.mಸೌಜನ್ಯದಿಂದ ವರ್ತಿಸಿ

ಉತ್ತಮ ಆಡಳಿತ ವ್ಯವಸ್ಥೆಯಲ್ಲಿ ತನ್ನ ಅವಶ್ಯಕತೆಗಳನ್ನು ಹುಡುಕಿಕೊಂಡು ಕಚೇರಿಗೆ ಬಂದಂತಹ ಜನರೊಂದಿಗೆ ಸೌಜನ್ಯದಿಂದ ವರ್ತಿಸಿ, ಉತ್ತಮ ರೀತಿಯಲ್ಲಿ ಸ್ಪಂದಿಸಿ ಅವರಿಗೆ ಅವಶ್ಯವಿರುವ ಸರ್ಕಾರದ ಸೌಲಭ್ಯಗಳನ್ನು ತಿಳಿಪಡಿಸಿ, ಅದರ ಉಪಯುಕ್ತತೆಯನ್ನು ಅವರಿಗೆ ದೊರಕಿಸಿಕೊಟ್ಟಲ್ಲಿ ಮಾತ್ರ ಉತ್ತಮ ಆಡಳಿತ ನಡೆಸಲು ಸಾಧ್ಯವಾಗುತ್ತದೆ.

ಡಾ. ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾಧಿಕಾರಿ

Share this article