ಕನ್ನಡಪ್ರಭವಾರ್ತೆ ಹಾಸನ
ನಗರದ ಸರ್ಕಾರಿ ಕಲಾ ಕಾಲೇಜು ಆವರಣದಲ್ಲಿ ಮಾಜಿ ಸೈನಿಕರ ಸಂಘದ ಆಶ್ರಯದಲ್ಲಿ ಭಾನುವಾರ ಜಿಲ್ಲಾ ಮಟ್ಟದ ಕ್ರಿಕೆಟ್ ಟೂರ್ನಿಗೆ ಚಾಲನೆ ನೀಡಲಾಯಿತು. ಸಂಘದ ಗೌರವಾಧ್ಯಕ್ಷ ಅಸಿಸ್ಟೆಂಟ್ ಕರ್ನಲ್ ಬಿ. ದೊರೆರಾಜು ಅವರು ಕ್ರಿಕೆಟ್ ಬ್ಯಾಟಿಂಗ್ ಮಾಡಿ ಪಂದ್ಯಾವಳಿಗೆ ಚಾಲನೆ ನೀಡಿದರು.ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಲ್ಲಾ ಮಾಜಿ ಸೈನಿಕರ ಸಂಘದಿಂದ ಇದೇ ಮೊದಲ ಬಾರಿಗೆ ಕ್ರಿಕೆಟ್ ಪಂದ್ಯಾವಳಿ ಆಯೋಜನೆಯಾಗುತ್ತಿದೆ. ಹಾಸನ ಜಿಲ್ಲೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಾಜಿ ಸೈನಿಕರು ಕ್ರೀಡಾ ಮೂಲಕ ಯುವಕರಿಗೆ ಹಾಗೂ ಸಾರ್ವಜನಿಕರಿಗೆ ಪ್ರೇರಣೆ ನೀಡಲು ಮುಂದಾಗಿದ್ದಾರೆ. ಕ್ರಿಕೆಟ್ ಭಾರತದಲ್ಲಿ ಕೇವಲ ಕ್ರೀಡೆ ಅಲ್ಲ, ಸಂಭ್ರಮ, ಏಕತೆ ಮತ್ತು ಸಹೋದರತ್ವದ ಸಂಕೇತವಾಗಿದೆ. ದೇಶದ ಮಟ್ಟದಿಂದ ಅಂತಾರಾಷ್ಟ್ರೀಯ ಮಟ್ಟದವರೆಗೂ ಭಾರತ ಕ್ರಿಕೆಟ್ ಮೂಲಕ ಅನನ್ಯ ಸಾಧನೆ ಮಾಡಿದೆ. ನಿವೃತ್ತ ಯೋಧರೂ ಇದೇ ಉತ್ಸಾಹದಲ್ಲಿ, ಆದರೆ ಶಾಂತಿಯುತ ಹಾಗೂ ಸಹೋದರ ಭಾವದಿಂದ ಆಟವಾಡಬೇಕು ಎಂದು ಹೇಳಿದರು. ಈ ಕ್ರೀಡೆಯಿಂದ ಪ್ರಾರಂಭವಾಗಿ ಮುಂದಿನ ದಿನಗಳಲ್ಲಿ ವಿವಿಧ ಕ್ರೀಡೆಗಳನ್ನು ಆಯೋಜಿಸಲು ಇದು ಒಂದು ಫೌಂಡೇಶನ್ ಆಗಲಿದೆ. ಒಟ್ಟು ೮ ತಂಡಗಳು ಪ್ರತಿ ತಾಲೂಕಿನಿಂದ ಭಾಗವಹಿಸಿದ್ದರೆಂಬುದು ಹರ್ಷಕರ. ಅತ್ಯಧಿಕ ಸಿಕ್ಸರ್ ಹೊಡೆದ ಕ್ರೀಡಾಪಟುಗಳಿಗೆ ಹಾಗೂ ಉತ್ತಮ ಪ್ರದರ್ಶನ ನೀಡಿದವರಿಗೆ ನನ್ನ ಸ್ವಂತ ವೆಚ್ಚದಲ್ಲಿ ವಿಶೇಷ ಬಹುಮಾನ ನೀಡಲು ನಿರ್ಧರಿಸಿದ್ದೇನೆ ಎಂದು ಘೋಷಿಸಿದರು.ಮಾಜಿ ಸೈನಿಕರು ತಮ್ಮ ಸೇವಾ ದಿನಗಳಲ್ಲಿ ದೇಶದ ಗಡಿಗಳಲ್ಲಿ ತೋರಿದ್ದ ಶಿಸ್ತಿನಂತೆ, ಮೈದಾನದಲ್ಲಿಯೂ ಸಹ ಶಿಸ್ತು ಮತ್ತು ಸೌಹಾರ್ದತೆ ಕಾಪಾಡುವಂತೆ ಸಲಹೆ ನೀಡಿದರು. ಯೋಧರ ಜೀವನವೇ ಶಿಸ್ತಿನ ಶಾಲೆಯಾಗಿದ್ದು, ಇದೇ ಗುಣಗಳು ಇಂದು ಕ್ರೀಡಾ ಮೈದಾನದಲ್ಲಿಯೂ ಸಾರ್ವಜನಿಕರಿಗೆ ಮಾದರಿಯಾಗಬೇಕಾಗಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಎ.ಎಸ್. ಪ್ರದೀಪ್ ಸಾಗರ್, ಪ್ರಧಾನ ಕಾರ್ಯದರ್ಶಿ ಡಿ.ಇ. ಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಬಿ.ಕೆ. ವೆಂಕಟೇಶ್, ಖಜಾಂಚಿ ಎಚ್.ಎ. ಲೋಕೇಶ್, ಕೃಷ್ಣೇಗೌಡ, ನಾರಾಯಣಸ್ವಾಮಿ, ಮಾಜಿ ಅಧ್ಯಕ್ಷ ನಾಗರಾಜು, ಮಾಜಿ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಇತರರು ಉಪಸ್ಥಿತರಿದ್ದರು.