ಕನ್ನಡಪ್ರಭ ವಾರ್ತೆ ವಿಜಯಪುರ
ಕೊಲೆ ಆರೋಪಿಗಳ ಬಂಧನಕ್ಕೆ ಹೋಗಿದ್ದ ವೇಳೆ ತಮ್ಮ ಮೇಲೆ ಬೈಕ್ ಹತ್ತಿಸಲು ಯತ್ನಿಸಿದ ಆರೋಪಿಯ ಕಾಲಿಗೆ ಪೊಲೀಸರು ಗುಂಡೇಟು ಹೊಡೆದು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಘಟನೆ ಮಂಗಳವಾರ ಬೆಳಗ್ಗೆ ಕನ್ನೂರ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಗುಂಡೇಟು ತಿಂದ ಆರೋಪಿ ಅಕ್ಷಯನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ತಾಲೂಕಿನ ಕನ್ನೂರ ಗ್ರಾಮದಲ್ಲಿ ಭಾನುವಾರ ತಡರಾತ್ರಿ ಸಾಗರ ಬೆಳ್ಳುಂಡಗಿ ಹಾಗೂ ಇಸಾಕ್ ಖುರೇಷಿ ಎಂಬುವವರನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿತ್ತು. ಖಚಿತ ಮಾಹಿತಿ ಮೇರೆಗೆ ಈ ಎರಡೂ ಕೊಲೆಗಳ ಆರೋಪಿಗಳನ್ನು ಬಂಧಿಸಲು ಪೊಲೀಸರು ತೆರಳಿದ್ದರು. ಈ ವೇಳೆ ಪೊಲೀಸರ ಮೇಲೆ ಆರೋಪಿಗಳು ಹಲ್ಲೆಗೆ ಯತ್ನಿಸಿದ್ದಾರೆ. ಪ್ರಕರಣದ ಮುಖ್ಯ ಆರೋಪಿ ಅಕ್ಷಯ ಜುಲಜುಲೆ ಕಾಲಿಗೆ ವಿಜಯಪುರ ಗ್ರಾಮೀಣ ಠಾಣೆ ಸಿಪಿಐ ರಾಯಗೊಂಡ ಜಾನಾರ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಇಬ್ಬರು ಪೊಲೀಸರಿಗೂ ಅಲ್ಪಸ್ವಲ್ಪ ಗಾಯಗಳಾಗಿವೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ. ಎರಡು ಕೊಲೆಗಳನ್ನು ಮಾಡಿದ್ದ ಐವರು ಆರೋಪಿಗಳಾದ ಅಕ್ಷಯ, ಭರತ, ಸಂಜಯ, ಸಂತೋಷ, ಮಲ್ಲನಗೌಡರನ್ನು ಬಂಧಿಸಲಾಗಿದೆ.
ಎರಡು ಹತ್ಯೆಗಳ ಹಿನ್ನೆಲೆ:2023ರಲ್ಲಿ ಗ್ರಾಮದ ಈರನಗೌಡ ಪಾಟೀಲ ಎಂಬಾತನ ಮೇಲೆ ಈಗ ಕೊಲೆಯಾಗಿರುವ ಸಾಗರ ಬೆಳ್ಳುಂಡಗಿ ಹಾಗೂ ಇಸಾಕ್ ಖುರೇಷಿ ಹಲ್ಲೆ ಮಾಡಿದ್ದರು. ಈ ವೇಳೆ ಈರನಗೌಡ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಎಂಟು ತಿಂಗಳ ಬಳಿಕ ಈರನಗೌಡ ಮೃತಪಟ್ಟಿದ್ದರು. ಇದಕ್ಕೆ ಪ್ರತೀಕಾರವಾಗಿ ಈರನಗೌಡನ ಸಹೋದರ ಮಲ್ಲನಗೌಡ ಹಾಗೂ ಆತನ ಮಕ್ಕಳು ಸೇರಿ ಸಾಗರ ಹಾಗೂ ಇಸಾಕ್‌ರನ್ನು ಭಾನುವಾರ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳನ್ನು ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಬೈಕ್ ಹಾಯಿಸಿ ಹಲ್ಲೆ ಮಾಡಿ ಪರಾರಿಯಾಗಲು ಆರೋಪಿ ಅಕ್ಷಯ ಜುಲಜುಲೆ ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಗುಂಡು ಹಾರಿಸಿದ್ದರಿಂದ ಆರೋಪಿ ಅಕ್ಷಯ ಜುಲಜುಲೆ ಬಲಗಾಲಿನ ಮೊಳಕಾಲಿಗೆ ಗುಂಡು ತಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಆರೋಪಿ ದಾಖಲಿಸಲಾಗಿದೆ. ಇತರೆ ನಾಲ್ವರು ಆರೋಪಿಗಳಾದ ಭರತ, ಸಂಜಯ, ಸಂತೋಷ, ಮಲ್ಲನಗೌಡ ಬಂಧನವಾಗಿದೆ. ಪ್ರಕರಣದ ಕುರಿತು ತನಿಖೆ ಮುಂದುವರೆದಿದೆ ಎಂದು ಎಸ್‌ಪಿ ಲಕ್ಷ್ಮಣ ನಿಂಬರಗಿ ತಿಳಿಸಿದರು.