ಶ್ರೀನಿವಾಸ ಬಬಲಾದಿ
ಕನ್ನಡಪ್ರಭ ವಾರ್ತೆ ಲೋಕಾಪುರಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಆರಂಭವಾಗುತ್ತಿದ್ದಂತೆ ಮಹಿಳಾ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಏರುತ್ತಿದೆ. ಪ್ರತಿ ದಿನ ಸಾರಿಗೆ ಬಸ್‌ನಲ್ಲಿ ಸಂಚರಿಸುವ ಪ್ರಯಾಣಿಕರ ಪೈಕಿ ಮಹಿಳೆಯರ ಪಾಲು ಶೇ.೫೦ಕ್ಕೆ ತಲುಪಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಳದಿಂದಾಗಿ ಬಸ್‌ಗಳು ತುಂಬಿ ತುಳುಕುತ್ತಿವೆ. ಈಗ ಬೇಸಿಗೆ ರಜೆ ಬೇರೆ. ಮಕ್ಕಳಿಗೂ ಶಾಲೆ ರಜೆ ಇರುವುದರಿಂದ ಮಹಿಳೆಯರು, ಮಕ್ಕಳ ಓಡಾಟ ಕೂಡ ತುಸು ಹೆಚ್ಚಾಗಿಯೇ ಇರುತ್ತದೆ. ಹೀಗಾಗಿ ಪ್ರಯಾಣದ ವೇಳೆ ಬಸ್ಸಿನಲ್ಲಿ ನಿಲ್ಲಲೂ ಜಾಗವಿಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ.ಬೆಳಗ್ಗೆ ಮತ್ತು ಸಂಜೆ ವೇಳೆಯಂತೂ ನೂಕು ನುಗ್ಗಲು. ಬಸ್ ಹತ್ತುವುದೇ ದೊಡ್ಡ ಸಾಹಸ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಪ್ರಯಾಣಿಕರ ಸುರಕ್ಷತೆಯ ಆತಂಕ ಸೃಷ್ಟಿಯಾಗಿದೆ. ಬಹುತೇಕ ಬಸ್‌ಗಳಲ್ಲಿ ಸಾಮರ್ಥ್ಯ ಮೀರಿ ಪ್ರಯಾಣಿಕರನ್ನು ತುಂಬಿಕೊಂಡು ಹೋಗುವ ದೃಶ್ಯ ಎಲ್ಲ ಕಡೆಗೂ ಕಂಡುಬರುತ್ತಿದೆ. ತಾಲೂಕಿನಲ್ಲಿ ಸಾರಿಗೆ ಸಂಸ್ಥೆಯಿಂದ ಒಟ್ಟು ೧೦೭ ಬಸ್‌ಗಳು ಸಂಚರಿಸುತ್ತಿವೆ. ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಿದ್ದರೂ ಬಸ್ ಸಂಖ್ಯೆ ಮಾತ್ರ ಇದ್ದಷ್ಟೇ ಇರುವುದು ಒತ್ತಡ ಹೆಚ್ಚಾಗಲು ಕಾರಣವಾಗಿದೆ. ಹೀಗಾಗಿ ಪ್ರಯಾಣಿಕರ ಸಂಖ್ಯೆಗೆ ತಕ್ಕಂತೆ ಬಸ್‌ಗಳ ಸಂಖ್ಯೆ ಹೆಚ್ಚಿಸಬೇಕು ಎಂದು ಸ್ವತಃ ಚಾಲಕರು, ನಿರ್ವಾಹಕರೇ ಹೇಳುತ್ತಿದ್ದಾರೆ.
ಯಾರಿಗೇ ಬೇಕ್ರೀ ಈ ಫ್ರೀ ಬಸ್?:ಅಧಿಕ ಜನದಟ್ಟಣೆಯಿಂದ ಬಸ್ ಸಂಚಾರದ ಮಾರ್ಗ ಮಧ್ಯದ ಗ್ರಾಮಗಳಲ್ಲಿ ಕೆಲ ಬಸ್‌ಗಳನ್ನು ನಿಲ್ಲಿಸುತ್ತಿಲ್ಲ. ಬಸ್ ಸಿಗದೆ ಸಾಕಷ್ಟು ತೊಂದರೆ ಅನುಭವಿಸಬೇಕಿದೆ. ಚಿಕ್ಕ ಚಿಕ್ಕ ಮಕ್ಕಳನ್ನು ಕಟ್ಟಿಕೊಂಡು ಬಿಸಿಲಿನಲ್ಲಿ ಗಂಟೆಗಟ್ಟಲೆ ಕಾಯುವಂತಾಗಿದೆ. ಉಚಿತ ಬಸ್‌ನಿಂದ ದುಡ್ಡು ಉಳಿಯಿತು ಎನ್ನುವುದಕ್ಕಿಂತ ಯಾವಾಗಲೋ ಒಮ್ಮೊಮ್ಮೆ ಊರಿಗೆ ಬಂದು ಹೋಗುವ ನಮ್ಮಂತವರಿಗೆ ಬಹಳ ತೊಂದರೆಯಾಗಿದೆ ಎಂದು ಮಕ್ಕಳ ಜೊತೆಗೆ ಲೋಕಾಪುರದಿಂದ ಹುಬ್ಬಳ್ಳಿಗೆ ಹೊರಟಿದ್ದ ಸುವರ್ಣಾ ಹಿರೇಮಠ ಎಂಬ ಮಹಿಳೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಶಕ್ತಿ ಯೋಜನೆ ಒಳ್ಳೆಯದೆ. ಆದರೆ, ಎಲ್ಲರಿಗೂ ಉಚಿತ ಎನ್ನುವುದು ಸರಿಯಲ್ಲ. ಸರ್ಕಾರಿ ನೌಕರರು ಉತ್ತಮ ವೇತನ ಪಡೆಯುತ್ತಾರೆ. ಶ್ರೀಮಂತ ಮಹಿಳೆಯರಿಗೂ ಉಚಿತ ಎಂದರೆ ಹೇಗೆ? ಹೋಗಲಿ ಅದಕ್ಕೆ ತಕ್ಕಷ್ಟು ಬಸ್ ಗಳನ್ನಾದರೂ ಬಿಡಬೇಕಲ್ಲವೇ ? ಈಗ ನೋಡಿ ಬಸ್ ಇಲ್ಲದೆ ಎಷ್ಟೊಂದು ಜನರು ಪರದಾಡುತ್ತಿದ್ದಾರೆ? ಇದಕ್ಕೆ ನಿಯಂತ್ರಣ ಹಾಕಬೇಕು. ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಪ್ರಯಾಣಿಕ ಬಸು ಚಿಪ್ಪಲಕಟ್ಟಿ ಹೇಳಿದರು.ವಿದ್ಯಾರ್ಥಿಗಳ ಪಾಡು ಹೇಳತೀರದು:
ಇನ್ನೂ ಬೆಳಗ್ಗೆ ಮತ್ತು ಸಂಜೆ ಶಾಲೆ, ಕಾಲೇಜು ವಿದ್ಯಾರ್ಥಿಗಳ ಪಾಡಂತೂ ದೇವರಿಗೆ ಪ್ರೀತಿ ಎನ್ನುವಂತಾಗಿದೆ. ಪ್ರಯಾಣಿಕರೇ ತುಂಬಿ ತುಳುಕುತ್ತಿರುವುದರಿಂದ ವಿದ್ಯಾರ್ಥಿಗಳು ಎದ್ನೋ ಬಿದ್ನೋ ಎಂದು ಬಸ್ ಏರಬೇಕಾಗಿದೆ. ನಿಗದಿತ ಸಮಯಕ್ಕೆ ಶಾಲೆ, ಕಾಲೇಜುಗಳಿಗೆ ಹೋಗಲು ಆಗುತ್ತಿಲ್ಲ, ಆಸನ ಬಿಡಿ, ನಿಲ್ಲಲೂ ಜಾಗ ಇರುವುದಿಲ್ಲ. ಅಷ್ಟೊಂದು ರಶ್ ಆಗಿರುತ್ತದೆ. ಸರ್ಕಾರ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಪ್ರಯಾಣಿಕರ ಸಂಖ್ಯೆಗೆ ತಕ್ಕಂತೆ ಬಸ್ ಹಾಗೂ ಸಿಬ್ಬಂದಿ ಸಂಖ್ಯೆ ಹೆಚ್ಚಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.ನಿರ್ವಾಹಕರಿಗೆ ಪೀಕಲಾಟ:
ಅತಿಯಾದ ಜನದಟ್ಟಣೆಯಿಂದ ಡ್ಯೂಟಿ ಮಾಡಲು ಭಯ ಆಗುತ್ತದೆ ಎಂದು ಚಾಲಕ ಮತ್ತು ನಿರ್ವಾಹಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಅದಕ್ಕೆ ತಕ್ಕಂತೆ ಬಸ್‌ಗಳು ಇಲ್ಲದೆ ಜನದಟ್ಟಣೆ ಹೆಚ್ಚಾಗಿ ಟಿಕೆಟ್ ನೀಡಲೂ ಸಹ ಕಷ್ಟ ಆಗುತ್ತಿದೆ. ಅನೇಕರು ಬಾಗಿಲಲ್ಲಿ ಜೋತು ಬೀಳುತ್ತಾರೆ. ಏನಾದರೂ ಹೆಚ್ಚು ಕಡಿಮೆ ಆದಲ್ಲಿ ನಮ್ಮ ಮೇಲೆ ಕ್ರಮ ಆಗುತ್ತದೆ ಎಂದು ನಿರ್ವಾಹಕರು, ಚಾಲಕರು ಆತಂಕ ಹೊರಹಾಕುತ್ತಿದ್ದಾರೆ.ಕಳ್ಳರ ಕೈಚಳಕ : ಬಸ್ ತುಂಬಿ ತುಳುಕುತ್ತಿರುವುದರಿಂದ ಮಹಿಳೆಯರ ಬ್ಯಾಗ್, ಮೊಬೈಲ್ ಮತ್ತು ಇನ್ನಿತರ ಸಾಮಾನುಗಳನ್ನು ಕಳ್ಳರು ಕದಿಯುವುದು ಹೆಚ್ಚಾಗಿದೆ. ಇದರ ಬಗ್ಗೆ ಪೋಲಿಸರಿಗೆ ದೂರು ಕೊಡಲು ಆಗಲಾರದ ಪರಿಸ್ಥಿತಿ ಬಸ್ ನಿಲ್ದಾಣದಲ್ಲಿ ಇದೆ. ಮೊಬೈಲ್ ಕಳ್ಳತನ ಸಲೀಸಾಗಿ ಮಾಡುತ್ತಿರುವುದು ಕಂಡು ಬಂದಿದೆ. ನಮ್ಮ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಶಕ್ತಿ ಯೋಜನೆ ಒಂದಾಗಿದ್ದು, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅನುಕೂಲವಾಗವ ಸಲುವಾಗಿ ಘಟಕ ವ್ಯವಸ್ಥಾಪಕರ ಜೊತೆ ಮಾತನಾಡಿ ಪ್ರಯಾಣಿಕರಿಗೆ ಹೆಚ್ಚಿನ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು.
- ಆರ್.ಬಿ.ತಿಮ್ಮಾಪುರ ಜಿಲ್ಲಾ ಉಸ್ತುವಾರಿ ಸಚಿವರು ಬಸ್ ಗದ್ದ¯ ಬಗ್ಗೆ ಮೇಲಧಿಕಾರಿಗಳಿಗೆ ತಿಳಿಸಿ ೮ ಹೆಚ್ಚುವರಿ ಬಸ್‌ಗಳನ್ನು ಈಗಾಗಲೇ ಬಿಟ್ಟಿದ್ದು, ಇನ್ನು ಹೆಚ್ಚಿನ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಪ್ರಯಾಣಿಕರು ಸಹಕರಿಸಬೇಕು.-ಎಸ್.ಆರ್. ಮಠೋಳಿ ಘಟಕ ವ್ಯವಸ್ಥಾಪಕರು