ಮೈಸೂರು : ಮುಂದಿನ ದಿನಗಳಲ್ಲಿ ವಿಳಂಬ ಮಾಡದೆ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಆಯಾ ವರ್ಷವೇ ಪ್ರದಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಕರ್ನಾಟಕ ರಾಜ್ಯ ಮುಕ್ತ ವಿವಿಯ ಘಟಿಕೋತ್ಸವ ಭವನದಲ್ಲಿ ಸೋಮವಾರ ನಡೆದ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ 2018-19ನೇ ಸಾಲಿನ ಪ್ರಶಸ್ತಿಗಳನ್ನು ಈಗ ಪ್ರದಾನ ಮಾಡಲಾಗುತ್ತಿದೆ. ಕಳೆದ ಸರ್ಕಾರ ಪ್ರಶಸ್ತಿ ಪ್ರದಾನ ಮಾಡದ ಹಿನ್ನೆಲೆಯಲ್ಲಿ ನಮ್ಮ ಸರ್ಕಾರ ಬಂದ ಮೇಲೆ 2 ವರ್ಷ ವಿಳಂಬವಾದರೂ ಪ್ರಶಸ್ತಿ ನೀಡಲಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ 2020-21ನೇ ಸಾಲಿನ ಪ್ರಶಸ್ತಿಯನ್ನೂ ಪ್ರದಾನ ಮಾಡಲಾಗುವುದು ಎಂದು ಅವರು ಹೇಳಿದರು.
ಇನ್ನು ಮುಂದೆ ಹೀಗೆ ತಡವಾಗಲು ಬಿಡುವುದಿಲ್ಲ. ಆಯಾ ವರ್ಷವೇ ಚಲನಚಿತ್ರ ಪ್ರಶಸ್ತಿ ಪ್ರದಾನ ಮಾಡುತ್ತೇವೆ. ಆಯಾ ವರ್ಷ ಪ್ರಶಸ್ತಿ ಪ್ರದಾನ ಮಾಡಿದರೆ ಅದಕ್ಕೊಂದು ಅರ್ಥ ಬರುತ್ತದೆ. ಐದಾರು ವರ್ಷ ಆದ ಮೇಲೆ ಪ್ರಶಸ್ತಿ ನೀಡಿದರೆ ಅದಕ್ಕೆ ಅರ್ಥ ಇರುವುದಿಲ್ಲ ಎಂದು ಹೇಳಿದರು.
ಫಿಲ್ಮ್ ಸಿಟಿಗೆ ಡಿಪಿಆರ್ ಸಿದ್ಧ:
ಮೈಸೂರಿನಲ್ಲಿ ಚಿತ್ರನಗರ ನಿರ್ಮಾಣಕ್ಕೆ160 ಎಕರೆ ಜಾಗ ಗುರುತಿಸಲಾಗಿದೆ. ಆ ಜಾಗವನ್ನು ವಾರ್ತಾ ಇಲಾಖೆಗೆ ಹಸ್ತಾಂತರಿಸಲಾಗಿದೆ. ಡಿಸೆಂಬರ್ ಅಂತ್ಯದ ವೇಳೆಗೆ ಡಿಪಿಆರ್ ಸಿದ್ಧವಾಗಲಿದೆ. ಹೈದರಾಬಾದ್‌ನ ಫಿಲಂ ಸಿಟಿ ಮಾದರಿಯಲ್ಲಿಯೇ ಮೈಸೂರಿನಲ್ಲಿಯೂ ಫಿಲಂ ಸಿಟಿ ನಿರ್ಮಿಸುತ್ತೇವೆ. ನಮ್ಮ ಸರ್ಕಾರ ಕನ್ನಡ ಭಾಷೆ, ಕನ್ನಡ ಚಿತ್ರೋದ್ಯಮದ ಅಭಿವೃದ್ಧಿಗೆ ಬದ್ಧವಾಗಿದೆ ಎಂದರು.
ನಾನು ಕಾಲೇಜಿನಲ್ಲಿ ಓದುತ್ತಿದ್ದಾಗ ಸಿನಿಮಾಗಳು, ನಟರು, ನಿರ್ಮಾಪಕರು, ನಿರ್ದೇಶಕರು ಕಡಿಮೆ ಇದ್ದರು. ಆದರೂ ನೋಡಿದ ಸಿನಿಮಾವನ್ನೇ ನೋಡುತ್ತಿದ್ದೇವು. ದಿನವೂ ಸಿನಿಮಾ ನೋಡುತ್ತಿದ್ದೆ. ಆದರೆ ಈಗ ಟೈಂ ಇಲ್ಲ. ಸಿನಿಮಾ ನೋಡುವುದನ್ನೇ ಬಿಟ್ಟಿದ್ದೇನೆ. ‘ಕಾಂತಾರ’ ನೋಡಬೇಕು. ಸಮಯ ಆಗುತ್ತಿಲ್ಲ. ಎಲ್ಲರೂ ಚೆನ್ನಾಗಿದೆ, ಸಾಕಷ್ಟು ಹಣ ಮಾಡಿದೆ ಎಂದೆಲ್ಲಾ ಹೇಳುತ್ತಾರೆ. ಸಮಯ ಮಾಡಿಕೊಂಡು ಹೋಗೆ ಹೋಗುತ್ತೇನೆ ಎಂದರು.
ಸಿನಿಮಾ ಒಂದು ಪ್ರಭಾವಶಾಲಿ ಮಾಧ್ಯಮ. ಮೌಲ್ಯಯುತವಾದ, ಸಾಮಾಜಿಕ ಕಳಕಳಿ ಇರುವ, ಸಮಾಜದಲ್ಲಿ ಬದಲಾವಣೆ ತರುವ ಸಿನಿಮಾ ಕಡಿಮೆ ಆಗುತ್ತಿದೆ. ನಾನು ಸಿನಿಮಾ ನೋಡದೆ ಇರುವುದಕ್ಕೆ ಇದೂ ಒಂದು ಕಾರಣ. ಎಂತಹ ಸಿನಿಮಾ ತೆಗೆದರೆ ಸಮಾಜದಲ್ಲಿ ಪರಿವರ್ತನೆ ಆಗುತ್ತದೆ ಅಂತಹ ಸಿನಿಮಾ ಬರಬೇಕು. ಹಿಂದೆ ಸಿನಿಮಾ ನೋಡಿ ಪರಿವರ್ತನೆಯಾದ, ಸಾಧನೆ ಮಾಡಿದ ಅನೇಕರು ಇದ್ದರು ಎಂಬುದಾಗಿ ಸಿದ್ದರಾಮಯ್ಯ ಸ್ಮರಿಸಿದರು.
ನಾಯಕ, ನಾಯಕಿಯರು ಪರದೆ ಮೇಲೆ ಒಂದು ರೀತಿ, ನಿಜ ಜೀವನದಲ್ಲಿ ಒಂದು ರೀತಿ ಇರಬಾರದು. ಅವರು ಆದರ್ಶರಾಗಿರಬೇಕು. ಡಾ.ರಾಜಕುಮಾರ್, ವಿಷ್ಣುವರ್ಧನ್ ಮೊದಲಾದವರು ಅದಕ್ಕೆ ದೊಡ್ಡ ನಿದರ್ಶನ. ಅವರನ್ನು ಈಗಲೂ ಸ್ಮರಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ನಮ್ಮ ಸರ್ಕಾರ ಕನ್ನಡ ಸಿನಿಮಾ ಬೆಳವಣಿಗೆಗೆ ಸಾಕಷ್ಟು ಬೆಂಬಲ ನೀಡುತ್ತಿದೆ. ಸಿನಿಮಾಕ್ಕೆ ಹಲವು ವರ್ಷಗಳಿಂದ ಸಬ್ಸಿಡಿ ನೀಡಿಲ್ಲ ಎಂಬ ಕೂಗು ಇದೆ. ಎಲ್ಲವನ್ನೂ ಒಟ್ಟಿಗೆ ಕೊಡೋಣ. ಯಾವುದೇ ಕಾರಣಕ್ಕೂ ನಮ್ಮ ಸರ್ಕಾರ ಸಬ್ಸಿಡಿ ಕೊಡುವುದರಲ್ಲಿ ಹಿಂದೆ ಬೀಳುವುದಿಲ್ಲ. ಆದರೆ, ಗುಣಮಟ್ಟದ ಸಿನಿಮಾ ಮಾಡಿ ಎಂಬ ಮನವಿ ಮಾಡುತ್ತೇನೆ. ಸಬ್ಸಿಡಿಗಾಗಿ ಸಿನಿಮಾ ಮಾಡಬಾರದು ಎಂದರು.