ವಿವಿಧ ಕಾಮಗಾರಿಗೆ ₹1500 ಕೋಟಿ ಡಿಪಿಆರ್‌ ಸಿದ್ಧ

KannadaprabhaNewsNetwork | Published : Mar 14, 2025 12:36 AM

ಸಾರಾಂಶ

ಪಟ್ಟಣದ ಪುರಸಭೆ ಅಧ್ಯಕ್ಷ ಎ. ಆರ್‌ ಅಶೋಕ್ ನೇತೃತ್ವದಲ್ಲಿ ಪುರಸಭೆ ಮುಂಭಾಗ ಬಜೆಟ್ ಪೂರ್ವಭಾವಿ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಬೇಲೂರು

ಪಟ್ಟಣದ ಪುರಸಭೆ ಅಧ್ಯಕ್ಷ ಎ. ಆರ್‌ ಅಶೋಕ್ ನೇತೃತ್ವದಲ್ಲಿ ಪುರಸಭೆ ಮುಂಭಾಗ ಬಜೆಟ್ ಪೂರ್ವಭಾವಿ ಸಭೆ ನಡೆಯಿತು.

ಡಾ. ರಾಜ್‌ಕುಮಾರ್ ಸಂಘದ ಅಧ್ಯಕ್ಷ ತೀರ್ಥಂಕರ್ ಮಾತನಾಡಿ, ಚನ್ನಕೇಶವ ದೇವಾಲಯ ವೀಕ್ಷಿಸಲು ಸಾವಿರಾರು ಜನರು ಬರುತ್ತಾರೆ. ಆದರೆ ಸ್ವಾಗತ ಕಮಾನು ಇಲ್ಲ. ಸಕಲೇಶಪುರ, ಹಳೇಬೀಡು, ಮೂಡಿಗೆರೆ, ಚಿಕ್ಕಮಗಳೂರು ಹಾಗೂ ಹಾಸನ ರಸ್ತೆಯಲ್ಲಿ ಒಂದೊಂದು ಸ್ವಾಗತ ಕಮಾನು, ಯಗಚಿ ಸೇತುವೆ ಬಳಿ ಇರುವ ಹೊಯ್ಸಳ ಲಾಂಛನಕ್ಕೆ ಮೇಲ್ಛಾವಣಿ ಹಾಕಬೇಕು. ಡಾ. ರಾಜಕುಮಾರ್ ಪುತ್ಥಳಿ ಸ್ಥಳ ಹತ್ತಿರ ಕನ್ನಡ ಧ್ವಜಸ್ತಂಭ ಮಾಡಿಸಿಕೊಡಿ ಎಂದರು.

ಕರವೇ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಪೂರ್ವಭಾವಿ ಸಭೆಯಲ್ಲಿ ಸಮಸ್ಯೆ ಕೇಳುವ ಸದಸ್ಯರೇ ಇಲ್ಲ ಎಂದರೆ ನಾಚಿಕೆಯಾಗಬೇಕು. 23 ಜನ ಸದಸ್ಯರಲ್ಲಿ 4 ಜನ ಬಂದಿದ್ದಾರೆ. ಓಟು ಹಾಕಿ ಗೆಲ್ಲಿಸಿದ್ದಾದರೂ ಏಕೆ?. ರಾಜೀನಾಮೆ ಕೊಟ್ಟು ಹೋಗಿ ಎಂದರು.

ಈಜುಕೊಳ ಅವಶ್ಯಕತೆ ಇದೆ, ಉದ್ಯಾನವನ ಒತ್ತುವರಿಯಾಗಿದೆ. ಅದನ್ನು ಸರ್ವೇ ಮಾಡಿ ತೆರವು ಮಾಡುವ ಕೆಲಸ ಮಾಡಿ, 4 ದಿಕ್ಕುಗಳಲ್ಲಿರುವ ಕೋಳಿ ಅಂಗಡಿ ತರವುಗೊಳಿಸಬೇಕು. ಒಳಾಂಗಣ ಕ್ರೀಡಾಂಗಣವಿಲ್ಲ, ಪಟ್ಟಣದಲ್ಲಿ 34 ಉದ್ಯಾನವನವಿದ್ದು ಅದರಲ್ಲಿ ಬೆರಳೆಣಿಕೆ ಮಾತ್ರ ಕಂಡುಬರುತ್ತದೆ, ಲೇಔಟ್ ಆಗುತ್ತಿದ್ದು, ಕೆಲವೊಂದು ಒತ್ತುವರಿಯಾಗಿದೆ ಎಂದರು.

ಜಯ ಕರ್ನಾಟಕ ಸಂಘದ ಅಧ್ಯಕ್ಷ ರಾಜು ಮಾತನಾಡಿ, ಐಡಿಎಸ್‌ಎಂಟಿ ಮಳಿಗೆಗಳು ಮಳೆ ಬಂದಾಗ ಸೋರುತ್ತಿದ್ದು, ಅದನ್ನು ಸರಿ ಮಾಡಿ. ಆಪೇ ಗಾಡಿಗಳಿಗೆ ಮೇಲೊದಿಕೆ ಹಾಕಿ ಕಸ ಹೊರಗಡೆ ಚೆಲ್ಲದಂತೆ ಮಾಡಿ ಎಂದರು.

ಖಾದರ್ ಮಾತನಾಡಿ, ನೆಹರೂ ನಗರದಿಂದ ತಾಲೂಕು ಆಫೀಸ್‌ ಎಪಿಎಂಸಿಯವರೆಗೂ ಸಾರ್ವಜನಿಕ ಶೌಚಾಲಯವಿಲ್ಲ. ಎಲ್ಲರಿಗೂ ತೊಂದರೆಯಾಗುತ್ತಿದೆ ಎಂದರು.

ಹರೀಶ್ ಮಾತನಾಡಿ, ಜೂನಿಯರ್‌ ಕಾಲೇಜು ಆಟದ ಮೈದಾನದಲ್ಲಿ ಕಲ್ಲು, ಮುಳ್ಳು, ಗುಂಡಿಗಳಾಗಿದ್ದು, ವ್ಯಾಯಾಮ ಮಾಡಲು ವಾಕಿಂಗ್ ಮಾಡಲು ಕಷ್ಟವಾಗಿದೆ. ಅಲ್ಲಿರುವ ಗುಂಡಿಗಳನ್ನು ಮುಚ್ಚಬೇಕು ಎಂದರು.

ಆಟೋ ಚಾಲಕ ಸಂಘದ ಅಧ್ಯಕ್ಷ ದೀಪು ಮಾತನಾಡಿ, ಆಟೋ ಚಾಲಕರಿಗೆ ಗುಂಪು ವಿಮೆಯನ್ನು ಪುರಸಭೆಯಿಂದ ಮಾಡಿ ಅವರು ತಮ್ಮ ಕೈಲಾದಷ್ಟು ಹಣ ನೀಡುತ್ತಾರೆ. ಆಗ ಅಪಘಾತವಾದ ಸಂದರ್ಭದಲ್ಲಿ ಆರ್ಥಿಕ ನೆರವು ನೀಡಬಹುದು. ಆಟೋ ನಿಲ್ದಾಣದಲ್ಲಿ ಮೇಲ್ಚಾವಣಿ ಹಾಕಿಸಿ ಕೊಡಿ ಎಂದರು.

ಪುರಸಭೆ ಉಪಾಧ್ಯಕ್ಷೆ ಉಷಾ, ಸತೀಶ್, ಸೌಮ್ಯ, ಸುಬ್ರಮಣ್ಯ, ಅಕ್ರಮ್, ಪುರಸಭೆ ಮುಖ್ಯ ಅಧಿಕಾರಿ ಸುಜಯ್ ಕುಮಾರ್, ಕಸಾಪ ಅಧ್ಯಕ್ಷ ಮಾನ ಮಂಜೇಗೌಡ, ಸಾಮಾಜಿಕ ಹೋರಾಟಗಾರ ವೆಂಕಟೇಶ್, ಸದಸ್ಯ ಪುಟ್ಟಸ್ವಾಮಿ ಇದ್ದರು.

ಕೋಳಿ ಅಂಗಡಿ ತೆರವಿಗೆ ಪ್ರಾಧಿಕಾರದ ಅಧ್ಯಕ್ಷ ಸೈಯದ್ ತೌಫಿಕ್ ಅಡ್ಡಗಾಲು: ಈಗಾಗಲೇ ಡಿಪಿಆರ್ ರೆಡಿಯಾಗಿದ್ದು, ₹1500 ಕೋಟಿ ನಿಗದಿಯಾಗಿದ್ದು ರಸ್ತೆ ಅಗಲೀಕರಣ ಆಗುತ್ತಿದೆ. ಈಗ ಎರಡು ಕಡೆ ಮಧ್ಯದಿಂದ 50 ಅಡಿ ಮಾಡಿ ಸರ್ವೇ ಕೆಲಸ ಕೂಡ ಮಾಡಿದ್ದಾರೆ. ಕಮಾನು ಫಲಕ ಮಾಡಲು ಕಷ್ಟವಾಗುತ್ತದೆ. ಉದ್ಯಾನವನ ಅಭಿವೃದ್ಧಿಪಡಿಸಲಾಗುವುದು. ಕೋಳಿ ಅಂಗಡಿಗಳ ತೆರವಿಗೆ ಪ್ರಾಧಿಕಾರದ ಅಧ್ಯಕ್ಷ ಸೈಯದ್ ತೌಫಿಕ್ ಅಡ್ಡಗಾಲು ಹಾಕಿದ್ದಾರೆ. ಫುಡ್ ಕೋರ್ಟ್ ಮಾಡಲು ಹೊರಟಾಗ ನಮ್ಮದೇ ಪಕ್ಷದ ಸದಸ್ಯರು ಫುಡ್ ಕೋರ್ಟ್ ಮಾಡಬಾರದೆಂದು ಅರ್ಜಿ ಕೊಡುತ್ತಿದ್ದಾರೆ ಎಂದು ಪುರಸಭೆ ಅಧ್ಯಕ್ಷ ಅಶೋಕ್‌ ಹೇಳಿದರು.

ಚೆನ್ನಕೇಶವ ಸ್ವಾಮಿ ಜಾತ್ರೆ: ನೀರಿನ ಸಮಸ್ಯೆ ನೀಗಿಸಿ: ಪಟ್ಟಣ ಯಗಚಿ ನೀರು ಸಾಕಷ್ಟಿದ್ದರೂ ಕೂಡ ಅದು ಅರಸಿಕೆರೆ, ಬಾಣವರ, ಚಿಕ್ಕಮಗಳೂರು, ಜಿಲ್ಲೆಗೆ ಹೋಗುತ್ತಿದೆ ಹೊರತು ನಮಗೆ ಇಲ್ಲಿ ಕುಡಿಯಲು ನೀರಿಲ್ಲದಾಗಿದೆ. ಈಗ ಚೆನ್ನಕೇಶವ ಸ್ವಾಮಿ ಜಾತ್ರೆ ಇರುವುದರಿಂದ ಭಕ್ತರು ಪ್ರವಾಸಿಗರು ಬರುತ್ತಾರೆ ಆದ್ದರಿಂದ ಕುಡಿಯಲು ನೀರಿನ ಸಮಸ್ಯೆ ನೀಗಿಸಬೇಕು ಎಂದು ಪುರಸಭೆ ಸದಸ್ಯ ಬಿಸಿ ಜಗದೀಶ್‌ ಹೇಳಿದರು.

Share this article