ಯಶಸ್ಸು ಎಂಬುದು ಸುದೀರ್ಘವಾದ ತಪಸ್ಸು

KannadaprabhaNewsNetwork | Published : Sep 23, 2024 1:30 AM

ಸಾರಾಂಶ

ನಾಯಕತ್ವದ ಗುಣ ಎಂದರೆ, ನಾಯಕನಾಗಿ ತಾನು ಬೆಳೆಯುವುದು ಮಾತ್ರವಲ್ಲ, ತನ್ನ ಜೊತೆ ಇರುವವರನ್ನು ಬೆಳೆಸಬೇಕಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಯಶಸ್ಸು ಎಂಬುದು ಸುದೀರ್ಘವಾದ ತಪಸ್ಸು, ಸೋಲೆ ಗೆಲುವಿನ ಮೆಟ್ಟಿಲು ಎಂದು ನಟ, ನಿರ್ದೇಶಕ ಅವಿನಾಶ್ ಶಠಮರ್ಷಣ ತಿಳಿಸಿದರು.

ನಗರದ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಡಾ. ಅಬ್ದುಲ್ ಕಲಾಂ ರಜತ ಮಹೋತ್ಸವ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ವಿದ್ಯಾರ್ಥಿ ಸಂಸತ್ ಮತ್ತು ಪ್ರತಿಭಾ ವೇದಿಕೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾನು ಈ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ನಾಟಕ, ನಿರ್ದೇಶನ ಮಾಡಿ ಬಹುಮಾನವನ್ನು ಪಡೆದುಕೊಂಡಿದ್ದೆ ಎಂದು ಭಾವುಕರಾದರು.

ನಾಯಕತ್ವದ ಗುಣ ಎಂದರೆ, ನಾಯಕನಾಗಿ ತಾನು ಬೆಳೆಯುವುದು ಮಾತ್ರವಲ್ಲ, ತನ್ನ ಜೊತೆ ಇರುವವರನ್ನು ಬೆಳೆಸಬೇಕಾಗಿದೆ. ವ್ಯಕ್ತಿ ಎಷ್ಟು ಮುಖ್ಯವೋ ಸುತ್ತಲಿನ ಸಮಾಜ ಅಷ್ಟೇ ಮುಖ್ಯ. ಸುತ್ತಮುತ್ತಲಿನ ಸಂಗತಿಗಳನ್ನು ನಾವು ಅರಿಯಲಿಲ್ಲವೆಂದರೆ ನಮ್ಮ ವಿವೇಚನೆ ಬೆಳೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ನಟಿ ಪ್ರಿಯಾ ಶಠಮರ್ಷಣ ಮಾತನಾಡಿ, ಪ್ರತಿಯೊಬ್ಬರಿಗೂ ಉಸಿರು ಇರುವಷ್ಟೇ ಸತ್ಯವಾಗಿ ಅವರದೇ ಆದ ಪ್ರತಿಭೆ ಇರುತ್ತದೆ. ನಾಟಕ, ಹಾಡು, ನೃತ್ಯ, ಅಭಿನಯ ಇವಷ್ಟೇ ಪ್ರತಿಭೆಯಲ್ಲ. ನಮ್ಮ ಜೀವನದಲ್ಲಿ ಏನೇ ಸಮಸ್ಯೆ ಬಂದರೂ ಅದನ್ನು ನಿಭಾಯಿಸುವ ಸಾಮರ್ಥ್ಯ ಬೆಳೆಸಿಕೊಳ್ಳುವುದಾಗಿದೆ. ನಮ್ಮಲ್ಲಿರುವ ಕೀಳರಿಮೆಯನ್ನು ಬಿಟ್ಟು, ನಮ್ಮನ್ನು ನಾವು ಪ್ರಶ್ನಿಸಿಕೊಂಡು ಸುಧಾರಿಸಿಕೊಳ್ಳಬೇಕು ಎಂದರು.

ನಮ್ಮ ಸುತ್ತಮುತ್ತಲಿನಲ್ಲಿ ನಡೆಯುವ ಸಮಸ್ಯೆಗಳಿಗೆ ದನಿ ಎತ್ತುವ ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು. ನಿಮ್ಮ ಆಸಕ್ತಿಗೆ ಅನುಗುಣವಾಗಿ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ನೀವು ನಿಮ್ಮನ್ನು ರೂಪಿಸಿಕೊಂಡು ದೇಶಕ್ಕೆ ಒಳ್ಳೆಯ ಪ್ರಜೆಯಾಗಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲೆ ಡಾ.ಬಿ.ಆರ್.ಜಯಕುಮಾರಿ, ಕನ್ನಡ ವಿಭಾಗ ಮುಖ್ಯಸ್ಥ ಡಾ.ಎಚ್.ಆರ್. ತಿಮ್ಮೇಗೌಡ, ವಿದ್ಯಾರ್ಥಿ ಸಂಸತ್ ಸಂಚಾಲಕಿ ಡಾ.ಪಿ.ಜಿ. ಪುಷ್ಪರಾಣಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಎಸ್.ಆರ್. ರಮೇಶ್ ಇದ್ದರು. ಪತ್ರಿಭಾ ವೇದಿಕೆಯ ಸಂಚಾಲಕ ಎಂ. ನಾಗೇಶ ವಂದಿಸಿದರು. ಸುನೀಲ್ ನಿರೂಪಿಸಿದರು.

Share this article