ಶಿರಸಿ: ಸಮಾಜದ ಹಿಂದುಳಿದ ಹಾಗೂ ನೋಂದವರಿಗೆ ಶಕ್ತಿ ಹಾಗೂ ಧೈರ್ಯ ತುಂಬಲು ಹಾಗೂ ಎಲ್ಲ ವರ್ಗಗಳಿಗೂ ಸಮಾನತೆಯನ್ನು ಪ್ರತಿಪಾದಿಸಿದ ಡಾ. ಬಿ.ಆರ್. ಅಂಬೇಡ್ಕರ್ ಎಂದಿಗೂ ಅಜರಾಮರು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ಸಮಾಜದಲ್ಲಿ ಎಲ್ಲರೂ ಮುಖ್ಯವಾಹಿನಿಗೆ ಬಂದು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದು ಎಲ್ಲರಂತೆ ಜೀವನ ಸಾಗಿಸಬೇಕು. ನಾವು ಅಂಗೀಕರಿಸಿಕೊಂಡು ಅರ್ಪಿಸಿಕೊಂಡ ಸಂವಿಧಾನ ಆಶಯಗಳನ್ನು ಪಾಲನೆ ಮಾಡಬೇಕು ಎಂದು ಹೇಳಿದರು.
ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಸಾಂದರ್ಭಿಕ ಮಾತನಾಡಿದರು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಸಹಾಯಕ ಆಯುಕ್ತೆ ಕೆ.ವಿ. ಕಾವ್ಯಾರಾಣಿ, ಡಿಡಿಪಿಐ ಪಿ. ಬಸವರಾಜ, ಡಿಎಸ್‌ಪಿ ಕೆ.ಎಲ್. ಗಣೇಶ, ತಾಪಂ ಆಡಳಿತಾಧಿಕಾರಿ ಡಾ. ಬಿ.ಪಿ. ಸತೀಶ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ನಾಯ್ಕ, ನಗರಸಭೆ ಸದಸ್ಯರಾದ ಪ್ರದೀಪ ಶೆಟ್ಟಿ, ಖಾದರ್ ಆನವಟ್ಟಿ, ಗೀತಾ ಶೆಟ್ಟಿ, ಶೈಲೇಶ ಜೋಗಳೇಕರ, ಸಮಾಜದ ಮುಖಂಡರಾದ ರಘು ಕಾನಡೆ, ಗಣೇಶ ದಾವಣಗೆರೆ, ಅಶೋಕ ಭಜಂತ್ರಿ, ನಿವೃತ್ತ ಉಪನ್ಯಾಸಕ ಕೆ.ಎನ್. ಹೊಸ್ಮನಿ, ಹುಲೇಕಲ್ ಗ್ರಾಪಂ ಅಧ್ಯಕ್ಷ ಖಾಸಿಂ ಸಾಬ್, ಗ್ರೇಡ್-೨ ತಹಸೀಲ್ದಾರ್ ರಮೇಶ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.ಡಾ. ಬಿ.ಆರ್. ಅಂಬೇಡ್ಕರ್ ಕುರಿತು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಡಾ. ಅನಿತಾ ಬೆಳಗಾಂವಕರ ಮತ್ತು ಡಾ. ಬಾಬು ಜಗಜೀವನ ರಾಂ ಕುರಿತು ಗಣೇಶನಗರದ ಶಾಲೆಯ ಶಿಕ್ಷಕಿ ಉಷಾರಾಣಿ ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ರೈತರಿಗೆ, ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಸಾಧಕರಿಗೆ, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.ಸಭಾ ಕಾರ್ಯಕ್ರಮಕ್ಕೂ ಮುನ್ನ ನಗರದ ಡಾ. ಬಿ.ಆರ್. ಅಂಬೇಡ್ಕರ ವೃತ್ತದಿಂದ ಆರಂಭಗೊಂಡು ಅಂಬೇಡ್ಕರ್ ಭವನದ ವರೆಗೆ ನಡೆದ ಮೆರವಣಿಗೆಯಲ್ಲಿ ನೂರಾರು ಸಾರ್ವಜನಿಕರು ಪಾಲ್ಗೊಂಡಿದ್ದರು.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪ್ರಸನ್ನ ಹೆಗಡೆ ಸಂವಿಧಾನ ಪ್ರಸ್ತಾವನೆ ವಾಚಿಸಿದರು. ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕೇಶವಮೂರ್ತಿ ಇಮ್ಮಡಿ ಸ್ವಾಗತಿಸಿದರು. ರಾಜೇಶ್ವರಿ ಮಡಿವಾಳ ಕಾರ್ಯಕ್ರಮ ನಿರೂಪಿಸಿದರು.