ಹೊನ್ನಾವರ: ಅಂಬೇಡ್ಕರ್ ಅವರ ಜೀವನದ ತತ್ವವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಪ್ರವೀಣ್ ಕರಾಂಡೆ ಅಭಿಪ್ರಾಯಪಟ್ಟರು.
ತಾಲೂಕು ಆಡಳಿತ, ತಾಪಂ, ಪಪಂ ಹಾಗೂ ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ತಾಲೂಕಿನ ಪಪಂ ಸಭಾಭವನದಲ್ಲಿ ಸೋಮವಾರ ಜರುಗಿದ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೪ನೇ ಮತ್ತು ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನ ರಾಮ್ ಅವರ ೧೧೮ನೇ ಜನ್ಮದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಾತಿ ಅಸಮಾನತೆ, ಅಸ್ಪೃಶ್ಯತೆ ನಿವಾರಣೆ ಬಗ್ಗೆ ಹೋರಾಟ ಮಾಡಿದ ಇವರು ದೇಶಕ್ಕೆ ಸಂವಿಧಾನ ಎಂಬ ಮಹಾನ್ ಗ್ರಂಥ ನೀಡಿದ್ದಾರೆ ಎಂದರು.ಪಪಂ ಉಪಾಧ್ಯಕ್ಷ ಸುರೇಶ್ ಎಸ್. ಕಾರ್ಯಕ್ರಮ ಉದ್ಘಾಟಿಸಿ, ಸಂವಿಧಾನ ಶಿಲ್ಪಿ ಜನ್ಮ ದಿನಾಚರಣೆಯ ಶುಭ ಕೋರಿದರು. ಭಾರತ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಲು ಅಂಬೇಡ್ಕರ್ ಕೊಡುಗೆ ದೊಡ್ಡದು ಎಂದರು.ಎಸ್‌ಡಿಎಂ ಕಾಲೇಜಿನ ಉಪನ್ಯಾಸಕ ನಾಗರಾಜ್ ಹೆಗಡೆ ಅಪಗಾಲ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನ, ಬದುಕು ಹಾಗೂ ಅವರು ಎದುರಿಸಿದ ಸವಾಲುಗಳು ಮತ್ತು ಡಾ. ಬಾಬು ಜಗನ್ ಜೀವನ್ ಅವರ ಕೊಡುಗೆ ಕುರಿತು ಉಪನ್ಯಾಸ ನೀಡಿದರು.
ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಅಣ್ಣಪ್ಪ ನಾಯ್ಕ ಮಾತನಾಡಿ, ಇಂದಿನ ದಿನವನ್ನು ಸಮಾನತೆಯ ದಿನ ಎಂದು ಕರೆಯಬೇಕು. ಅವರು ಸಮಾನತೆಗಾಗಿ ತುಂಬಾ ಹೋರಾಟ ನಡೆಸಿದವರು. ಸಾಮಾಜಿಕ ನ್ಯಾಯವನ್ನು ಸಂವಿಧಾನದ ಮೂಲಕ ಎಲ್ಲರಿಗೂ ನೀಡಿದ್ದಾರೆ ಎಂದರು.ಎಸ್‌ಎಸ್‌ಎಲ್‌ಸಿ ೨೦೨೪-೨೫ನೇ ಸಾಲಿನ ಹತ್ತನೇ ತರಗತಿಯಲ್ಲಿ ಉತ್ತಮ ಸಾಧನೆ ವಸತಿ ನಿಲಯದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಪಪಂ ಮುಖ್ಯಾಧಿಕಾರಿ ಏಸು ಬೆಂಗಳೂರು, ಮಂಕಿ ಪಪಂ ಮುಖ್ಯಾಧಿಕಾರಿ ಕೇಶವ್ ಚೌಗಲೆ, ತಾಲೂಕು ಶಿಕ್ಷಣಾಧಿಕಾರಿ ಜಿ.ಎಸ್. ನಾಯ್ಕ, ತಾಲೂಕು ಆರೋಗ್ಯ ವೈದ್ಯಾಧಿಕಾರಿ ಉಷಾ ಹಾಸ್ಯಗಾರ ಉಪಸ್ಥಿತರಿದ್ದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಸುಮಂಗಲಾ ಭಟ್ ಸ್ವಾಗತಿಸಿದರು. ಮೆಟ್ರಿಕ್ ಪೂರ್ವ ಬಾಲಕಿಯರು ಪ್ರಾರ್ಥಿಸಿದರು. ಸುದೀಶ್ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.