ಡಾ.ಅಂಬೇಡ್ಕರ್‌ ಜೀವನ ವಿಶ್ವಕ್ಕೇ ಮಾದರಿ

KannadaprabhaNewsNetwork |  
Published : Apr 18, 2026, 02:00 AM IST
ಕೆ ಕೆ ಪಿ ಸುದ್ದಿ 02: ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ  ನಗರದ ಅಂಬೇಡ್ಕರ್ ಭವನದಲ್ಲಿ ಡಾ ಬಾಬಾ ಸಾಹೇಬ್ ರ 135 ನೇ ಜಯಂತಿ ಆಚರಣೆ.  | Kannada Prabha

ಸಾರಾಂಶ

ಕನಕಪುರ: ವಿಶ್ವದ ಮಹಾನಾಯಕ, ಸಂವಿಧಾನ ಶಿಲ್ಪಿ, ಜ್ಞಾನ ಸೂರ್ಯ ಡಾ.ಬಿ.ಆರ್. ಅಂಬೇಡ್ಕರ್ 135ನೇ ಜಯಂತಿಯನ್ನು ನಗರದ ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತದ ವತಿಯಿಂದ ಆಚರಣೆ ಮಾಡಲಾಯಿತು

ಕನಕಪುರ: ವಿಶ್ವದ ಮಹಾನಾಯಕ, ಸಂವಿಧಾನ ಶಿಲ್ಪಿ, ಜ್ಞಾನ ಸೂರ್ಯ ಡಾ.ಬಿ.ಆರ್. ಅಂಬೇಡ್ಕರ್ 135ನೇ ಜಯಂತಿಯನ್ನು ನಗರದ ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತದ ವತಿಯಿಂದ ಆಚರಣೆ ಮಾಡಲಾಯಿತು.

ತಾಲೂಕು ಕಚೇರಿ ಸಭಾಂಗಣದಲ್ಲಿ ಬಾಬಾ ಸಾಹೇಬರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ನಗರದ ಅಯ್ಯಪ್ಪಸ್ವಾಮಿ ದೇವಸ್ಥಾನದಿಂದ ಎಂ.ಜಿ.ರಸ್ತೆ ಮೂಲಕ ಹಲವು ಜಾನಪದ ಕಲಾತಂಡಗಳ ಪ್ರದರ್ಶನದೊಂದಿಗೆ ಅಂಗನವಾಡಿ ಕಾರ್ಯಕರ್ತೆಯರು ಕಲಶ ಹೊತ್ತು ಮೆರವಣಿಗೆ ಹೊರಟು ಅಂಬೇಡ್ಕರ್ ಭವನ ತಲುಪಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಎಸ್. ರವಿ, ಸಮಾಜದಲ್ಲಿ ಸಮಸಮಾಜ ನಿರ್ಮಾಣ ಮಾಡಲು ಶ್ರಮಿಸಿದ ಸಮಾಜ ಸುಧಾರಕ, ಮಹಾನ್ ನಾಯಕ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವಿಶ್ವದಲ್ಲೇ ಶ್ರೇಷ್ಠ ಸಂವಿಧಾನವನ್ನು ಭಾರತಕ್ಕೆ ನೀಡಿದವರು. ಆದರೆ ಮನುವಾದಿಗಳು ವಿಶ್ವದಲ್ಲೇ ಶ್ರೇಷ್ಠ ಧರ್ಮ ಎಂದರೆ ಅದು ಸನಾತನ ಧರ್ಮ ಎಂದು ಹೇಳುತ್ತಾರೆ. ಕೇವಲ ದೇವರು ಮಾತ್ರವಲ್ಲ, ಪ್ರಕೃತಿಯನ್ನು ಸಹ ದೇವರಾಗಿ ಕಂಡು ಪೂಜಿಸುವುದು ವಾಡಿಕೆಯಾಗಿದೆ, ಎಲ್ಲಾ ಧರ್ಮಗಳಿಗೂ ಸಂಸ್ಥಾಪಕರಿದ್ದಾರೆ, ನಮ್ಮ ಹಿಂದೂ ಧರ್ಮಕ್ಕೆ ಸಂಸ್ಥಾಪಕರಿಲ್ಲ. ನಾಯಿ, ನರಿ, ಹಂದಿಗಳನ್ನು ದೇವರ ರೂಪದಲ್ಲಿ ನೋಡುವ ನಾವು, ಅಸ್ಪೃಶ್ಯರನ್ನು ಸಮಾನವಾಗಿ ನೋಡಲು ಸಿದ್ಧರಿಲ್ಲ, ಸಂಕುಚಿತ ಮನೋಭಾವದವರಾದ ನಾವು ನಮ್ಮ ಧರ್ಮವೇ ಶ್ರೇಷ್ಠ ಎಂದು ಹೇಳುತ್ತೇವೆ, ಇದು ಮನುವಾದಿಗಳ ಸಂಸ್ಕೃತಿಯಾಗಿದೆ ಎಂದರು.

ಅಂಬೇಡ್ಕರರನ್ನು ಪೂಜಿಸುವ ಬದಲು, ಅಂಬೇಡ್ಕರ್ ನಮ್ಮ ದೇಶಕ್ಕೆ ಸಮರ್ಪಿಸಿರುವ ಸಂವಿಧಾನ ಓದಿದರೆ ಸಾಕು, ಅದೇ ನಾವು ಅವರಿಗೆ ಕೊಡುವ ಗೌರವವಾಗಿದೆ. ಇಂತಹ ಮಹನೀಯರ ಸಮಾರಂಭಕ್ಕೆ ಹಾಜರಾಗದ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರ ವಿರುದ್ಧ ಅಸಮಾಧಾನಗೊಂಡ ಅವರು, ಗೈರಾದವರ ವಿರುದ್ಧ ಶಿಸ್ತು ಕ್ರಮಕ್ಕೆ ತಹಸೀಲ್ದಾರ್ ಅವರಿಗೆ ಸೂಚನೆ ನೀಡಿದರು.

ಮುಖ್ಯ ಭಾಷಣಕಾರ ಬೀರಯ್ಯ ಮಾತನಾಡಿ, ಇಂದು ನಮ್ಮ ದೇಶದ ಕಾನೂನು, ಪ್ರಜಾಪ್ರಭುತ್ವ ಇಡೀ ವಿಶ್ವದಲ್ಲಿ ಮಾದರಿಯಾಗಿದ್ದಕ್ಕೆ ಕಾರಣವೇ ಬಾಬಾ ಸಾಹೇಬರು ಕೊಟ್ಟ ಸಂವಿಧಾನವಾಗಿದೆ. ಅಂಬೇಡ್ಕರ್ ಅವರು ಹಿಂದೂ ಸಮಾಜದಲ್ಲಿ ಮಹಿಳೆಯರಿಗೆ, ಪುರುಷರಿಗೆ ಸಮಾನವಾದ ಆಸ್ತಿ ಮತ್ತು ವಿವಾಹ ಹಕ್ಕುಗಳನ್ನು ನೀಡಲು ಹಿಂದೂ ಸಂಹಿತೆ ರೂಪಿಸಿದ್ದರು, ಮಹಿಳೆಯರಿಗೆ ಸಮಾನ ಹಕ್ಕು (ಆಸ್ತಿ, ವಿವಾಹ ವಿಚ್ಛೇದನ) ಕಲ್ಪಿಸುವ ಹಿಂದೂ ಕೋಡ್ ಬಿಲ್ ಅನ್ನು ಸಂಸತ್ತಿನಲ್ಲಿ ಅಂಗೀಕರಿಸಲು ವಿಫಲವಾದ ಕಾರಣ, ಅಂದಿನ ಸರ್ಕಾರದಲ್ಲಿನ ತೀವ್ರ ವಿರೋಧದ ಹಿನ್ನೆಲೆ 1951ರಲ್ಲಿ ಕಾನೂನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಸಂಜಯ್, ಭೂ ಮಾಪನ ಅಧಿಕಾರಿ ನಂದೀಶ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಜಯಪ್ರಕಾಶ್, ಕಸಾಪ ಅಧ್ಯಕ್ಷ ಶಿವಲಿಂಗಯ್ಯ, ಕೆಡಿಪಿ ಸದಸ್ಯೆ ಸುಕನ್ಯಾ ರಂಗಸ್ವಾಮಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ. ದಿಲೀಪ್, ಮುಖಂಡರಾದ ನೀಲಿ ರಮೇಶ್ ಸೇರಿ ಹಲವರು ಈ ವೇಳೆ ಉಪಸ್ಥಿತರಿದ್ದರು.

ಕೆ ಕೆ ಪಿ ಸುದ್ದಿ 02: ಕನಕಪುರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಕನಕಪುರದ ಅಂಬೇಡ್ಕರ್ ಭವನದಲ್ಲಿ ಡಾ ಬಾಬಾ ಸಾಹೇಬರ 135ನೇ ಜಯಂತಿ ಆಚರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜನರ ನೈಜ ನಂಬಿಕೆ, ಸಂಸ್ಕೃತಿ ಪ್ರತಿಬಿಂಬಿಸುವ ಸಾಹಿತ್ಯ: ಡಾ. ವೀರೇಂದ್ರ ಪಾಲ್
ಹಿಮೋಫಿಲಿಯಾ ಬಗ್ಗೆ ಭಯ ಬೇಡ: ಡಾ. ರಾಜೇಂದ್ರ ಗಡಾದ