ಕಾರವಾರ: ಜ್ಞಾನದ ಹಿಮಾಲಯ, ಜ್ಞಾನದ ರತ್ನವಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿಂತನೆ, ಸಿದ್ಧಾಂತ, ಅವರು ಹಾಕಿಕೊಟ್ಟ ಮಾರ್ಗ ಹಾಗೂ ಅವರ ದೂರದೃಷ್ಟಿ ನೋಡಿದಾಗ ಅವರನ್ನು ಆಧುನಿಕ ಭಾರತದ ನಿರ್ಮಾತೃ ಎಂದು ಕರೆಯಲಾಗುತ್ತದೆ ಎಂದು ಇಲ್ಲಿನ ೨ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಾಯಣ್ಣ ಬಿ.ಎಲ್. ತಿಳಿಸಿದರು.
ಸಂವಿಧಾನ ರಚನಾ ಕರಡು ಸಮಿತಿಯ ಅಧ್ಯಕ್ಷರಾಗಿ ವೈವಿಧ್ಯಮಯ ಸಂಸ್ಕೃತಿ, ಆಚಾರ ವಿಚಾರ ಹೊಂದಿದ ಬೃಹತ್ ಭಾರತ ರಾಷ್ಟ್ರಕ್ಕೆ ಸಂವಿಧಾನ ರಚಿಸುವುದು ಸಾಮಾನ್ಯ ಮಾತಲ್ಲ. ಅಂತಹ ಶ್ರೇಷ್ಠ ಸಂವಿಧಾನವನ್ನು ರಚಿಸುವ ಮೂಲಕ ಸುಭದ್ರ ರಾಷ್ಟ್ರಕ್ಕೆ ಅವರ ನೀಡಿದ ಕೊಡುಗೆ ಇಂದಿಗೂ ಪ್ರಸ್ತುತ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ, ದೇಶದ ಪ್ರತಿಯೊಬ್ಬರಿಗೂ ರಕ್ಷಣೆ ನೀಡುವುದು ಸಂವಿಧಾನವಾಗಿದೆ. ಅಂತಹ ಶ್ರೇಷ್ಠ ಸಂವಿಧಾನ ರಚಿಸುವ ಮೂಲಕ ಸಮಾಜದಲ್ಲಿನ ಅಸ್ಪೃಶ್ಯತೆ ನಿವಾರಿಸಿ ಎಲ್ಲರಿಗೂ ಸಮಾನತೆ ಒದಗಿಸಲು ಶ್ರಮಿಸಿದ ಮಹಾನ ನಾಯಕರಾಗಿದ್ದಾರೆ. ಸಂವಿಧಾನದ ಆಶಯಗಳನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಂಡಾಗ ಮಾತ್ರ ಸಂವಿಧಾನದ ಆಶಯಗಳಿಗೆ ಗೌರವ ಸೂಚಿಸಿದಂತಾಗುತ್ತದೆ ಎಂದರು.ನಿವೃತ್ತ ಪ್ರಾಧ್ಯಾಪಕ ಎಂ.ಆರ್. ನಾಯಕ ಉಪನ್ಯಾಸ ನೀಡಿ, ದೀನ- ದಲಿತರ, ದುರ್ಬಲರ, ಶೋಷಿತರ ಹಾಗೂ ಮಹಿಳೆಯರ ಅಭ್ಯುದಯಕ್ಕಾಗಿ ಶ್ರಮಿಸಿದ ಮಹಾನ ನಾಯಕ ಡಾ. ಬಿ.ಆರ್. ಅಂಬೇಡ್ಕರ್ ಆಗಿದ್ದಾರೆ. ವಿಶ್ವಸಂಸ್ಥೆ ಅಂಬೇಡ್ಕರ್ ಜನ್ಮದಿನವನ್ನು ವಿಶ್ವ ಜ್ಞಾನ ದಿನ ಎಂದು ಘೋಷಿಸುವ ಮೂಲಕ ವಿಶ್ವಾದ್ಯಂತ ಅವರ ಜನ್ಮದಿನವನ್ನು ವಿಶ್ವ ಜ್ಞಾನ ದಿನ ಎಂದು ಆಚರಿಸಲಾಗುತ್ತಿದೆ. ಜ್ಞಾನವನ್ನು ಪಡೆಯಬೇಕಾದರೆ ಅಧ್ಯಯನ ಅವಶ್ಯ ಎಂದು ಪ್ರತಿಪಾದಿಸಿದ್ದ ಅಂಬೇಡ್ಕರ್ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ, ಸಮಾಜದಲ್ಲಿ ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕು. ಸಮಾಜದಲ್ಲಿನ ಅಸ್ಪೃಶ್ಯತೆ ತೊಲಗಿಸಿ ಸಮಾನತೆಯನ್ನು ತರಲು ಶ್ರಮಿಸಿದ ಅವರು ಸಮಾಜದಲ್ಲಿನ ಅಸಮಾನತೆ ಹಾಗೂ ಲಿಂಗಭೇದಗಳ ವಿರೋಧಿಸಿದ್ದರು ಎಂದರು.
ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಮಾಜ ಕಲ್ಯಾಣ ಇಲಾಖೆಯ ವಿವಿಧ ಯೋಜನೆಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಸಹಾಯಧನ ವಿತರಿಸಲಾಯಿತು.