ಸಂವಿಧಾನದಲ್ಲಿ ಸಮಾನತೆ ನೀಡಿದ ಡಾ. ಅಂಬೇಡ್ಕರ್‌: ಮಂಜುನಾಥ ಬಾಗೇಪಲ್ಲಿ

KannadaprabhaNewsNetwork | Published : Feb 1, 2025 12:03 AM

ಸಾರಾಂಶ

ನಾಗರಿಕತೆ ಹುಟ್ಟಿದಾಗಿನಿಂದಲೂ ಲಿಂಗ ತಾರತಮ್ಯ ಇದೆ. ಲಿಂಗ ತಾರತಮ್ಯ ಹೋಗಲಾಡಿಸಲು ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಒತ್ತು ಕೊಟ್ಟಿದ್ದಾರೆ ಎಂದು ಪ್ರಕ್ರಿಯೆ ಸಂಸ್ಥೆ ಮುಖ್ಯಸ್ಥ, ಹೈಕೋರ್ಟ್ ವಕೀಲ ಮಂಜುನಾಥ ಬಾಗೇಪಲ್ಲಿ ಹೇಳಿದರು.

ಕೊಪ್ಪಳ: ಲಿಂಗ, ಜಾತಿ, ಧರ್ಮ, ಬಡವ - ಶ್ರೀಮಂತ ಹಾಗೂ ಇತರ ತಾರತಮ್ಯಗಳನ್ನು ಹೋಗಲಾಡಿಸಲು ಸಂವಿಧಾನ ರಚನೆ ಸಂದರ್ಭದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ಪೀಠಿಕೆಯಲ್ಲಿ ಸಮಾನತೆಯ ಅಂಶವನ್ನು ಪ್ರಸ್ತಾವನೆ ಮಾಡಿದ್ದಾರೆ ಎಂದು ಪ್ರಕ್ರಿಯೆ ಸಂಸ್ಥೆ ಮುಖ್ಯಸ್ಥ, ಹೈಕೋರ್ಟ್ ವಕೀಲ ಮಂಜುನಾಥ ಬಾಗೇಪಲ್ಲಿ ಹೇಳಿದರು.

ಇಲ್ಲಿಯ ಬಹದ್ದೂರ್ ಬಂಡಿ ರಸ್ತೆಯಲ್ಲಿಯ ಸರಸ್ವತಿ ವಿದ್ಯಾಮಂದಿರ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಪ್ರಕ್ರಿಯೆ ಸಂಸ್ಥೆ, ದರ್ಪಣ ಹಾಗೂ ಸರಸ್ವತಿ ವಿದ್ಯಾಮಂದಿರ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆ ಸಹಯೋಗದಲ್ಲಿ ಗುರುವಾರ ಸಂವಿಧಾನ ಅರಿವು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಪ್ರಕ್ರಿಯೆ ಸಂಸ್ಥೆಯ ಮುಖ್ಯಸ್ಥ, ಹೈಕೋರ್ಟ್ ವಕೀಲ ಮಂಜುನಾಥ ಬಾಗೇಪಲ್ಲಿ, ವಿದ್ಯಾರ್ಥಿಗಳಿಗೆ ಸಂವಿಧಾನದ ಪೀಠಿಕೆ ಓದಿಸಿ, ಮಾತನಾಡಿದರು. ನಾಗರಿಕತೆ ಹುಟ್ಟಿದಾಗಿನಿಂದಲೂ ಲಿಂಗ ತಾರತಮ್ಯ ಇದೆ. ಲಿಂಗ ತಾರತಮ್ಯ ಹೋಗಲಾಡಿಸಲು ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಒತ್ತು ಕೊಟ್ಟಿದ್ದಾರೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಅವರು ಸಂವಿಧಾನ ರಚನೆ ಮಾಡಿದ್ದಾರೆ. ಬುದ್ಧಿವಂತರಾದವರು ಮಾನಸಿಕವಾಗಿ ದುರ್ಬಲರಾದವರನ್ನು ಶೋಷಣೆ ಮಾಡುವುದು ಅಸಮಾನತೆಗೆ ಮೂಲ ಕಾರಣವಾಗಿದೆ. ಅದಕ್ಕಾಗಿ ಮಕ್ಕಳು ಸಂವಿಧಾನದ ಪರಿಕಲ್ಪನೆಗಳನ್ನು ಈ ವಯಸ್ಸಿನಲ್ಲಿ ಅರ್ಥೈಸಿಕೊಂಡು ಅಳವಡಿಸಿಕೊಂಡರೆ ಮುಂದಿನ ದಿನಗಳಲ್ಲಿ ಜವಾಬ್ದಾರಿಯುತ ನಾಗರಿಕರಾಗಿ ಬೆಳೆಯಲು ಸಾಧ್ಯವಾಗುತ್ತದೆ. ನಿಮ್ಮ ಭವಿಷ್ಯವನ್ನು ನೀವೇ ರೂಪಿಸಿಕೊಳ್ಳಬಹುದು. ಭ್ರಾತೃತ್ವ ಎನ್ನುವುದು ಕೂಡ ಸಂವಿಧಾನದ ಪೀಠಿಕೆಯಲ್ಲಿ ಪ್ರಸ್ತಾಪಿಸಲಾದ ಅಂಶ. ಹಾಗಾಗಿ ಎಲ್ಲರೂ ಸಹೋದರತ್ವದ ತತ್ವದಲ್ಲಿ ಜೀವನ ಮಾಡಿದರೆ ಸಮಾಜದಲ್ಲಿ ಯಾವುದೇ ಅಶಾಂತಿ ಇಲ್ಲದೆ ಸಹಜೀವನ ಮಾಡಬಹುದು ಎಂದು ಹೇಳಿದರು.

ಭ್ರಾತೃತ್ವ ಸಮಿತಿಯ ಜಿಲ್ಲಾ ಸಂಚಾಲಕ ಎಸ್.ಎ. ಗಫಾರ್, ಪ್ರಕ್ರಿಯೆ ಸಂಸ್ಥೆಯ ಕಾರ್ಯಕರ್ತ ವೀರೇಶ್ ತೆಗ್ಗಿನಮನಿ, ಪಾಸ್ಟರ್ಸ್ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಚನ್ನಬಸಪ್ಪ ಅಪ್ಪಣ್ಣವರ್, ಮುಖ್ಯ ಶಿಕ್ಷಕಿ ರೇಣುಕಾ ಆರ್.ಎಚ್‌., ಅತ್ತನೂರ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Share this article