ಎಲ್ಲಾ ಜಾತಿ, ಧರ್ಮದವರನ್ನು ಸಮನಾಗಿ ಕಾಣುತ್ತಿದ್ದ ಡಾ.ಅಂಬೇಡ್ಕರ್‌: ಎಚ್‌.ಎಂ.ಶಿವಣ್ಣ

KannadaprabhaNewsNetwork | Published : Dec 8, 2023 1:45 AM

ಸಾರಾಂಶ

ಎಲ್ಲಾ ಜಾತಿ, ಧರ್ಮದವರನ್ನು ಸಮನಾಗಿ ಕಾಣುತ್ತಿದ್ದ ಡಾ.ಅಂಬೇಡ್ಕರ್‌: ಎಚ್‌.ಎಂ.ಶಿವಣ್ಣ

ಅಂಬೇಡ್ಕರ್‌ ವೃತ್ತದಲ್ಲಿ ಡಾ.ಅಂಬೇಡ್ಕರ್ ಅವರ 67 ನೇ ಮಹಾ ಪರಿನಿರ್ವಾಣ ದಿನ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ದೇಶದಲ್ಲಿನ ಧಮನೀತರು, ಶೋಷಿತರು, ದಲಿತರ ಪರವಾಗಿ ಹಕ್ಕುಗಳನ್ನು ರೂಪಿಸಿದ ಡಾ.ಬಿ.ಆರ್. ಅಂಬೇಡ್ಕರ್ ಎಲ್ಲಾ ಜಾತಿ, ಧರ್ಮದವರನ್ನು ಸಮನಾಗಿ ಕಂಡಿದ್ದರು ಎಂದು ಕೊಪ್ಪ ಎಪಿಎಂಸಿ ನಿರ್ದೇಶಕ ಎಚ್.ಎಂ.ಶಿವಣ್ಣ ಹೇಳಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ದಲಿತ ಸಂಘರ್ಷ ಸಮಿತಿ ಹಾಗೂ ವಿವಿಧ ಸಂಘ,ಸಂಸ್ಥೆಗಳ ಆಶ್ರಯದಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಅವರ 67ನೇ ಮಹಾ ಪರಿ ನಿರ್ವಾಣ ದಿನ ಕಾರ್ಯಕ್ರಮ ದಲ್ಲಿ ಮಾತನಾಡಿದರು. ವರ್ಣಾಶ್ರಮದಲ್ಲಿ ಮೇಲು, ಕೀಳು, ಅಸಮಾನತೆ, ದಬ್ಬಾಳಿಕೆ, ಮಹಿಳೆಯರ ಶೋಷಣೆ ನಡೆಯುತ್ತಿತ್ತು. ಇದನ್ನು ವಿರೋಧಿಸಿ ಎಲ್ಲರಿಗೂ ಸಮಾನ ಹಕ್ಕನ್ನು ಪ್ರತಿಪಾದಿಸಿದವರು ಡಾ.ಬಿ. ಆರ್. ಅಂಬೇಡ್ಕರ್. ಅಂಬೇಡ್ಕರ್ ದೇಶ ಕಂಡ ಮಹಾನ್ ವ್ಯಕ್ತಿಯಾಗಿದ್ದು ಅವರ ಆದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡು ಪ್ರಜಾಪ್ರಭುತ್ವ ವ್ಯವಸ್ಥೆ ಕಾಪಾಡಬೇಕಾಗಿದೆ ಎಂದರು.

ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಮಾತನಾಡಿ, ಅಂಬೇಡ್ಕರ್ ದೇಶದಲ್ಲಿ ಶೋಷಿತ ವರ್ಗವನ್ನು ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನಿಸಿದರು. ಭಾರತ ಅತ್ಯುತ್ತಮ ಗಣ ರಾಜ್ಯವಾಗಲು ಅಂಬೇಡ್ಕರ್ ರಚಿಸಿದ ಸಂವಿಧಾನ ಕಾರಣ. ಸಮ ಸಮಾಜ ನಿರ್ಮಾಣಕ್ಕಾಗಿಯೂ ಅವರು ಶ್ರಮಿಸಿದ್ದರು. ಇಂತಹ ವ್ಯಕ್ತಿಯ ಆದರ್ಶ, ಬದುಕಿನ ಬಗ್ಗೆ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು ಎಂದರು.

ಪೊಲೀಸ್ ಸಬ್ ಇನ್ ಸ್ಪೆಕ್ಟರ್ ನಿರಂಜನ್ ಗೌಡ ಮಾತನಾಡಿ,ಇತಿಹಾಸ ಬಲ್ಲವನು ಮಾತ್ರ ಇತಿಹಾಸ ನಿರ್ಮಿಸಲು ಸಾಧ್ಯವಾಗುತ್ತದೆ. ಪ್ರಸ್ತುತ ಶೋಷಿತ ವರ್ಗಕ್ಕೆ ಶೇ. 33ರಷ್ಟು ಮೀಸಲಾತಿ ದೊರಕಲು ಡಾ.ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನವೇ ಕಾರಣ ಎಂದರು. ಪಟ್ಟಣ ಪಂಚಾಯಿತಿ ಸದಸ್ಯರಾದ ಜುಬೇದ, ಮುಕುಂದ, ಸೈಯದ್ ವಸೀಂ,ಮುನಾವರ್ ಪಾಷ, ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್, ದಲಿತ ಮುಖಂಡರಾದ ಎಂ.ಮಹೇಶ್, ಚಿತ್ರಪ್ಪ ಯರಬಾಳ, ವಾಲ್ಮೀಕಿ ಸಂಘದ ಶೃಂಗೇರಿ ಕ್ಷೇತ್ರ ಅಧ್ಯಕ್ಷ ಎ.ಸಿ.ಶ್ರೀನಿವಾಸ್, ತಾಲೂ ಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪೂರ್ಣೇಶ್, ಹಿರಿಯ ಸದಸ್ಯ ಪಿ.ಸಿ.ಮ್ಯಾಥ್ಯೂ, ಕಾಂಗ್ರೆಸ್ ಮುಖಂಡ ಉಪೇಂದ್ರ, ನಹೀಂ,ಸಾಧಿಕ್‌ ಬಾಷಾ, ಮಂಜುನಾಥ್ ,ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು. ನಂತರ ಅತಿಥಿಗಳು ಮೇಣದ ಬತ್ತಿ ಬೆಳಗಿಸಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಪುಷ್ಪನಮನ ಸಲ್ಲಿಸಿದರು.

Share this article