ಧಾರವಾಡ: ಇಲ್ಲಿಯ ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ವರಕವಿ ಡಾ. ದ.ರಾ. ಬೇಂದ್ರೆಯವರ 128ನೇ ಜನ್ಮದಿನದಂದು ನೀಡುವ 2024ನೇ ಸಾಲಿನ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿಗೆ ಖ್ಯಾತ ವಿಮರ್ಶಕ, ಬೆಂಗಳೂರಿನ ಡಾ. ಬಸವರಾಜ ಕಲ್ಗುಡಿ ಆಯ್ಕೆಯಾಗಿದ್ದಾರೆ.
ಹಿರಿಯ ವಿಮರ್ಶಕ ಪ್ರೊ. ಬಸವರಾಜ ಕಲ್ಗುಡಿಯವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಸಮಗ್ರ ಕೊಡುಗೆ ಪರಿಗಣಿಸಿ ಕಳೆದ ಜ. 5ರಂದು ಜರುಗಿದ ಟ್ರಸ್ಟ್ ಮಂಡಳಿ ಸಭೆಯಲ್ಲಿ ತೀರ್ಮಾನ ಮಾಡಲಾಯಿತು. ₹1 ಲಕ್ಷ ಮೊತ್ತದ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ ಇದಾಗಿದ್ದು, ಪ್ರಶಸ್ತಿ ಫಲಕ, ಫಲ-ಪುಷ್ಪವನ್ನೊಳಗೊಂಡಿದೆ. ಜ. 31ರಂದು 4.30ಕ್ಕೆ ನಗರದ ಡಾ. ದ.ರಾ.ಬೇಂದ್ರೆ ಭವನದಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಹಂಪಿ ವಿವಿ ಕುಲಪತಿ ಡಾ.ಡಿ.ಬಿ. ಪರಶಿವಮೂರ್ತಿ ಪ್ರಶಸ್ತಿ ಪ್ರದಾನ ಮಾಡುವರು ಎಂದು ಟ್ರಸ್ಟ್ ಅಧ್ಯಕ್ಷ ಡಾ. ಡಿ.ಎಂ.ಹಿರೇಮಠ ತಿಳಿಸಿದ್ದಾರೆ.ಕಲ್ಗುಡಿ ಪರಿಚಯ: 1954ರಲ್ಲಿ ಬೆಳಗಾವಿಯಲ್ಲಿ ಜನಿಸಿದ ಬಸವರಾಜ ಕಲ್ಗುಡಿ, ಪ್ರಾಥಮಿಕ, ಮಾಧ್ಯಮಿಕ, ಪ್ರೌಢ ಮತ್ತು ಕಾಲೇಜು ವ್ಯಾಸಂಗವನ್ನು ಬೆಂಗಳೂರಿನಲ್ಲಿ ಮುಗಿಸಿದ್ದಾರೆ.''''''''ಅನುಭಾವ ಸಾಂಸ್ಕೃತಿಕ ಸಮಸ್ಯೆ ಮತ್ತು ಹುಡುಕಾಟ-ಇವರ ಸಂಶೋಧನಾ ಪ್ರಬಂಧ. ಸಂಸ್ಕೃತಿ ಕುರಿತಂತೆ ವ್ಯಾಖ್ಯಾನಿಸುವಲ್ಲಿ ಹಾಗೂ ಸಂಸ್ಕೃತಿಯಲ್ಲಿನ ಚಲನೆಯ ಪಲ್ಲಟವನ್ನು ಸಮಗ್ರವಾಗಿ ವಿವಿಧ ನೆಲೆಗಳಿಂದ ಶೋಧಿಸುವ ಕ್ರಮ ಇವರದು. ಕನ್ನಡದ ಶ್ರೇಷ್ಠ ಕವಿಗಳಾದ ಬೇಂದ್ರೆ ಹಾಗೂ ಕುವೆಂಪು ಕುರಿತ ಹಾಗೆ ಇವರು ಮಾಡಿದ ಅಧ್ಯಯನವು ಈ ಇಬ್ಬರೂ ಕವಿಗಳ ಕುರಿತ ಅನೇಕ ಸಾಂಪ್ರದಾಯಕ ಆಲೋಚನೆಗಳನ್ನು ಪರೀಶೀಲನೆಗೆ ಹಚ್ಚಿ ಹೊಸದಾಗಿ ನೋಡುವಂತೆ ಮಾಡಿದೆ. ಬೇಂದ್ರೆಯವರ ಪ್ರೇಮ ಆವಿಷ್ಕಾರದ ಸ್ವರೂಪ ಕುರಿತು ಇವರು ಮಾಡಿದ ಚಿಂತನೆಯು ಕನ್ನಡದಲ್ಲಿ ಈ ವರೆಗೆ ಈ ವಸ್ತುವನ್ನು ಕುರ್ತಕೋಟಿಯವರನ್ನೂ ಒಳಗೊಂಡು ಯೋಚಿಸಿದ ರೀತಿಗಿಂತ ಭಿನ್ನವಾಗಿದೆ.
ಪ್ರಕಟಿತ ಕೃತಿಗಳು: ನಕ್ಷೆ ನಕ್ಷತ್ರ, ಬೇಂದ್ರೆಯವರ ಕಾವ್ಯ-ಪ್ರೇಮ ಅವಿಷ್ಕಾರದ ಸ್ವರೂಪಗಳು, ಮೈಯೇ ಸೂರು ಮನವೇ ಮಾತು, ಕರ್ನಾಟಕ ಸಂಗಾತಿ, ಆಧುನಿಕ ಕನ್ನಡ ಕಥಾ ಸಾಹಿತ್ಯ, ವಿಚಾರ ಸಾಹಿತ್ಯ, ಆಡು ಹಾವೇ ಅಂತಹ ಹಲವು ಸಾಹಿತ್ಯ ಕೃತಿ ರಚಿಸಿದ್ದಾರೆ. ಶಂಬಾ ಅಧ್ಯಯನ ಮಂಡಳಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಜಿ.ಎಸ್.ಎಸ್. ವಿಶ್ವಸ್ಥ ಮಂಡಳಿ ಪ್ರಶಸ್ತಿ, ಡಾ. ಎಚ್.ಎನ್ ಪ್ರಶಸ್ತಿ ಸೇರಿದಂತೆ ಇವರ ಪ್ರತಿಭೆಗೆ ಸಂದ ಮನ್ನಣೆಗಳು ಹಲವು.