ಕನ್ನಡಪ್ರಭ ವಾರ್ತೆ ಮಂಡ್ಯ
ಕಬ್ಬು ಕಟಾವಿಗೆ ಬಂದಿರುವ ನೂರಾರು ಶ್ರಮಿಕರು ತಾಲೂಕಿನ ಹನಿಯಂಬಾಡಿ ಸುತ್ತಮುತ್ತ ತಾಂಡಾಗಳಲ್ಲಿ ನೆಲೆಯೂರಿದ್ದಾರೆ. ಬೆಳಗ್ಗೆಯಿಂದ ಸಂಜೆಯವರೆಗೂ ಕಬ್ಬು ಕಟಾವಿನಲ್ಲಿ ತೊಡಗಿ ರಾತ್ರಿ ಗೂಡು ಸೇರಿಕೊಳ್ಳುವ ಈ ಜನರು ಆರೋಗ್ಯದ ಬಗ್ಗೆ ಮುತುವರ್ಜಿ ವಹಿಸುವುದೇ ಇಲ್ಲ. ಅಂತಹ ಜನರ ಆರೋಗ್ಯವನ್ನು ಉತ್ತಮವಾಗಿರುವ ದೃಷ್ಟಿಯಿಂದ ನ್ಯೂರೋ ಸೈಕಿಯಾಟ್ರಿಸ್ಟ್ ಡಾ.ಅನಿಲ್ ಆನಂದ್ ಅವರು ತಾಂಡಾದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಿ ಶ್ರಮಿಕರಿಗೆ ಔಷಧ ಕಿಟ್‌ಗಳನ್ನು ವಿತರಿಸಿದರು.
ಶಿಬಿರದಲ್ಲಿ ಮಾತನಾಡಿದ ಡಾ.ಅನಿಲ್ ಆನಂದ್, ಶ್ರಮ ಜೀವಿಗಳಲ್ಲಿರುವ ನಿಸ್ವಾರ್ಥ ಭಾವ, ಪ್ರಾಮಾಣಿಕತೆ, ತೃಪ್ತಿ ಮತ್ತು ಸಂತಸದ ಮನಸ್ಥಿತಿಯೇ ಅವರ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಿದೆ. ಶ್ರಮ ಜೀವನದ ನಡುವೆ ಉತ್ತಮ ಆರೋಗ್ಯದ ಕಡೆಗೂ ಗಮನಹರಿಸುವಂತೆ ಮನವಿ ಮಾಡಿದರು.ಶ್ರಮದ ದುಡಿಮೆ ಹಲವು ರೋಗಗಳನ್ನು ದೂರ ಮಾಡುತ್ತದೆ. ಆದರೂ ಆರೋಗ್ಯವನ್ನು ಆಗಾಗ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು. ಪುಟ್ಟ ಮಕ್ಕಳೂ ತಾಂಡಾದಲ್ಲಿದ್ದು ಅವರೂ ಆರೋಗ್ಯವಂತರಾಗಿರುವಂತೆ ಎಚ್ಚರ ವಹಿಸುವಂತೆ ಸಲಹೆ ನೀಡಿದರು.
ಮಳೆಯ ನಡುವೆಯೇ ನಡೆದ ಕಾರ್ಯಕ್ರಮದಲ್ಲಿ ನೂರಾರು ಜನರ ಆರೋಗ್ಯ ತಪಾಸಣೆ ಮಾಡಲಾಯಿತು. ವಾಹನದಲ್ಲೇ ತಪಾಸಣೆ ನಡೆಸಿ ಚಿಕಿತ್ಸೆ ನೀಡಲಾಯಿತು. ಗರ್ಭಿಣಿ ಮತ್ತು ಸ್ತ್ರೀರೋಗ ತಜ್ಞೆ ಡಾ.ಯಾಶಿಕಾ ಅನಿಲ್ ಅವರು ಹಲವು ಮಹಿಳೆಯರ ಆರೋಗ್ಯ ತಪಾಸಣೆ ನಡೆಸಿದರು. ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಮಾಡುವಂತೆ ಸಲಹೆ ನೀಡಿದರು.