ಹರಿದಾಸರ ಕೀರ್ತನೆಗಳಲ್ಲಿ ಉಪಚಾರ ಸಾಹಿತ್ಯ

KannadaprabhaNewsNetwork |  
Published : Sep 07, 2024, 01:32 AM IST
30 | Kannada Prabha

ಸಾರಾಂಶ

ಜನಸಾಮಾನ್ಯರಿಗೂ ಅರ್ಥವಾಗುವಂಥ ಸರಳ ಪದಗಳನ್ನು ಬಳಸಿ

ಕನ್ನಡಪ್ರಭ ವಾರ್ತೆ ಮೈಸೂರು''''ಹರಿದಾಸರ ಕೀರ್ತನೆಗಳಲ್ಲಿ ಉಪಚಾರ ಸಾಹಿತ್ಯ'''' ಕೃತಿಯನ್ನು ಡಾ.ಬಿ.ಎ. ಶಾರದಾ ಹಾಗೂ ಎನ್. ಕುಸುಮಾ ರಚಿಸಿದ್ದಾರೆ.ಕರ್ನಾಟಕ ಸಂಗೀತ ಸಂಪ್ರದಾಯ ಹಾಗೂ ಅದರ ಬೆಳವಣಿಗೆಗೆ ಹರಿದಾಸರ ಕೊಡುಗೆ ಅನನ್ಯವಾದುದು. ಭಕ್ತಿ ಸಾಹಿತ್ಯದ ಮೂಲಕ ಅಸಂಖ್ಯಾತ ಕೀರ್ತನೆಗಳನ್ನು ರಚಿಸಿ, ಶಾಸ್ತ್ರಬದ್ಧವಾದ ತಳಹದಿಯನ್ನು ರೂಪಿಸಿದ್ದಾರೆ. ಜನಸಾಮಾನ್ಯರಿಗೂ ಅರ್ಥವಾಗುವಂಥ ಸರಳ ಪದಗಳನ್ನು ಬಳಸಿ ಆಧ್ಯಾತ್ಮದ ಜೊತೆಗೆ ಶ್ರುತಿ, ಸ್ಮೃತಿ, ಪುರಾಣಗಳಿಗೆ ಕೈಗನ್ನಡಿಯಾಗಿ ನಂಬಿಕೆ, ಸಂಪ್ರದಾಯ, ಶಿಷ್ಟಾಚಾರ, ಉಪಚಾರ ಇತ್ಯಾದಿ ವಿಷಯಗಳನ್ನು ಬೋಧಿಸಿ, ಸಂಗೀತ ಮತ್ತು ಸಾಹಿತ್ಯದ ಸಾಮರಸ್ಯವನ್ನು ತೋರಿಸಿಕೊಟ್ಟಿದ್ದಾರೆ.ಇಂತಹ ಉಪಚಾರ ಸಾಹಿತ್ಯದ ಕಲ್ಪನೆಯನ್ನಿಟ್ಟುಕೊಂಡು ಹರಿದಾಸರ ಪದ, ಕೀರ್ತನೆ, ಸುಳಾದಿ, ಉಗಭೋಗ ಇತ್ಯಾದಿಗಳಲ್ಲಿ ಕಂಡುಬರುವ ''''''''''''''''ಉಪಚಾರ'''''''''''''''' ಎಂಬ ಮಾತು, ಸನ್ನಿವೇಶ, ಪದಗಳನ್ನು ಪರಿಭಾಷೆಯಾಗಿ ಪರಿಗಣಿಸಬಹುದಾದ ಎಲ್ಲವನ್ನು ಸಂಗ್ರಹಿಸಿ, ಇಲ್ಲಿ ದಾಖಲಿಸಿದ್ದಾರೆ. ಹರಿದಾಸರ ಕೀರ್ತನೆಗಳಲ್ಲಿ ಊಟ, ತಿಂಡಿ, ಪೇಯಗಳಲ್ಲಿ ಆಧ್ಯಾತ್ಮವನ್ನು ತುಂಬಿ, ಪರಮಾತ್ಮನಿಗೆ ನೈವೇದ್ಯಕ್ಕಿಟ್ಟಿದ್ದಾರೆ. ಸಾಮಾನ್ಯರು ಪರಮಾತ್ಮನನ್ನು ತೃಪ್ತಿಯಾಗಿ ಉಪಚರಿಸಿ, ಉಂಡು ಅದರಿಂದ ಭಕ್ತಿ ಹಾಗೂ ಆನಂದದ ಪರಕಾಷ್ಠೆಯನ್ನು ಹೊಂದುವ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆವಿಠಲನಾಮ ತುಪ್ಪವ ಬೆರೆಸಿ ಬಾಯಿ ಚಪ್ಪರಿಸಿರೊ...ಈ ರೀತಿ ಉಪಚಾರ ಸಾಹಿತ್ಯದಲ್ಲಿ ವಿವಿಧ ಭಕ್ಷ್ಯಗಳು ಮತ್ತು ಇದಕ್ಕೆ ಮಹಿಳಾ ಹರಿದಾಸರ ಕೊಡುಗೆ, ಉಪಚಾರ ಸಾಹಿತ್ಯದಲ್ಲಿ ನೀರು, ಹಾಲು, ಮೊಸರು, ಬೆಣ್ಣೆ, ತುಪ್ಪ, ಸಕ್ಕರೆ ಮತ್ತು ಇತರೆ ಪೇಯಗಳು, ಹಣ್ಣು- ತರಕಾರಿಗಳು, ಕಾಯಿಲೆಯ ಪಥ್ಯ, ನೀತಿಬೋಧೆ ಹಾಗೂ ಇತರೆ ವಿಚಾರಗಳು ಈ ಕೃತಿಯಲ್ಲಿ ಅಡಕವಾಗಿವೆ. ವಿಡಂಬನೆ, ಮೌಲ್ಯ, ನಿಷ್ಠೆ, ಶ್ರದ್ಧೆ ವಿಷಯಗಳಿಗೆ ಉತ್ತಮ ಉದಾಹರಣೆಗಳನ್ನು ನೀಡಿದ್ದಾರೆ. ಕಾಲಕಾಲಕ್ಕೆ ಹೊಸ ಹೊಸ ಅನ್ಯದೇಶೀಯ ನಾಣ್ಣುಡಿ ಪದಗಳು ಜನರಾಡುವ ಭಾಷೆಗೆ ಹತ್ತಿರವಾಗಿ ಬಂದು ಹಾಸಹೊಕ್ಕಾಗಿ ಸೇರಿಕೊಂಡಾಗ ಬಳಸಿಕೊಂಡ ಪದಗಳನ್ನು ಹರಿದಾಸರು ಉಪಚಾರ ಸಾಹಿತ್ಯವಾಗಿ ಉಪಯೋಗಿಸುವ ಪರಿ, ಹರಿದಾಸರ ಕಾಲಾನುಕ್ರಮ ಸೂಚಿಯೂ ಇಲ್ಲಿದೆ.ಪಿಜ್ಜಾ, ಬರ್ಗರ್ ಕಾಲದಲ್ಲಿರುವ ನಾವು ಹಿಂದಿನ ತಲೆಮಾರಿನವರು ಮಾಡುತ್ತಿದ್ದ ಎಷ್ಟೋ ಬಗೆಯ ಖಾದ್ಯಗಳನ್ನು ಮರೆತಿದ್ದೇವೆ. ಪತಿ- ಪತ್ನಿ ಇಬ್ಬರೂ ಉದ್ಯೋಗದಲ್ಲಿ ಬಿಜಿ ಎಂಬ ನೆಪದಿಂದ ಎಷ್ಟೋ ಮಂದಿ ಅಡುಗೆ ಮಾಡುವುದನ್ನು ಮರೆತಿದ್ದಾರೆ!. ಈಗ ಏನಿದ್ದರೂ ಆನ್ಲೈನ್ ಮೂಲಕ ತಮಗೆ ಬೇಕಾದ ಆಹಾರ ತರಿಸಿ, ತಿಂದು ''''ಊಟದ ಶಾಸ್ತ್ರ'''' ಮುಗಿಸುವ ಕಾಲ!. ಹೀಗಿರುವಾಗ ಲೇಖಕಿಯರಾದ ಡಾ.ಬಿ.ಎ. ಶಾರದಾ ಹಾಗೂ ಎನ್. ಕುಸುಮಾ ಅವರು ಹರಿದಾಸ ಸಾಹಿತ್ಯದಲ್ಲಿ ಕಂಡು ಬರುವ ವಿವಿಧ ಭಕ್ಷ್ಯಗಳ ಪಟ್ಟಿಯನ್ನು ಆರಂಭದಲ್ಲಿಯೇ ಪೀಠಿಕೆಯ ನಂತರ ನೀಡಿದ್ದಾರೆ. ಸಿಹಿ, ಖಾರ ಭಕ್ಷ್ಯಗಳು, ಮೇಲೋಗರಗಳು, ವಿವಿಧ ಅನ್ನದ ಬಗೆಗಳು, ತಾಂಬೂಲ, ಹಣ್ಣು- ತರಕಾರಿಗಳು, ಪದಾರ್ಥಗಳು ಮತ್ತು ಇತರೆಯ ವಿವರಿಸಿರುವ ಈ ಪಟ್ಟಿಯೇ ಬಾಯಲ್ಲಿ ನೀರೂರಿಸುವಂತಿದೆ!.ಸಂಗೀತ, ನೃತ್ಯ, ನಾಟಕಾಸಕ್ತರಿಗೆ ಈ ಕೃತಿ ಉಪಯುಕ್ತವಾಗಿದೆ. ಸಾಹಿತ್ಯಾಸಕ್ತರು ಓದಿದರೂ ಕನ್ನಡನಾಡಿನ ಮಾತಿನ ಸೊಗಡು ಎಷ್ಟು ಚೆಂದ ಎಂಬುದು ಪರಿಚಯವಾಗುತ್ತದೆ. ಈ ಕೃತಿಗೆ ಸಂಗೀತ ವಿದ್ವಾಂಸ ಡಾ.ರಾ.ಸ. ನಂದಕುಮಾರ್ ಅವರ ಮುನ್ನುಡಿ ಇದ್ದು, ಆಸಕ್ತರು ಚಿಂತನ ಚಿತ್ತಾರ ಪ್ರಕಾಶಕ ನಿಂಗರಾಜು ಚಿತ್ತಣ್ಣನವರ್, ಮೊ. 99456 68082 ಸಂಪರ್ಕಿಸಬಹುದು.

PREV

Recommended Stories

ದಸರಾ ಗಜಪಡೆಯಲ್ಲಿ ‘ಭೀಮ’ನೇ ಬಲಶಾಲಿ : ತೂಕ 5465 ಕೆ.ಜಿ.
ಕಮ್ಮಿ ಫಲಿತಾಂಶ ಬಂದರೆ ಶಿಕ್ಷಕರ ವೇತನ ಕಟ್ ಇಲ್ಲ