ಸುಧಾರಿತ ತಳಿಗಳ ಆಯ್ಕೆ ಹಾಗೂ ಮಳೆಗಾಲದಲ್ಲಿ ಪೋಷಕಾಂಶಗಳ ಸಿಂಪಡಣೆಯ ಉಪಯೋಗಗಳು, ತರಕಾರಿ ಸಮೃದ್ಧಿ, ಬಾಳೆ ಸಮೃದ್ಧಿ ಹಾಗೂ ಲಘು ಪೋಷಕಾಂಶಗಳ ಬಳಕೆ
ಕನ್ನಡಪ್ರಭ ವಾರ್ತೆ ಸುತ್ತೂರುಅಮೇರಿಕಾದ ಶೈಕ್ಷಣಿಕ ವ್ಯವಹಾರಗಳ ಉಪಾಧ್ಯಕ್ಷ ಮತ್ತು ನಿರ್ವಹಣಾ ಪ್ರಾಧ್ಯಾಪಕ ಡಾ. ಸ್ಕಾಟ್ ಹೆರಿಯಟ್ ಹಾಗೂ ಮಹರ್ಷಿ ಅಂತಾರಾಷ್ಟ್ರೀಯ ವಿಶ್ವವಿದ್ಯಾನಿಲಯದಲ್ಲಿ ಮನೋವಿಜ್ಞಾನದಲ್ಲಿ ಸಂಶೋಧಕ ಬರ್ನಾಡ್ ಮಾರ್ಕಸ್ ಅವರು ಸುತ್ತೂರಿನ ಐಸಿಎಆರ್- ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರಕ್ಕೆ ಶನಿವಾರ ಭೇಟಿ ನೀಡಿದರು.ಕೇಂದ್ರ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ.ಬಿ.ಎನ್. ಜ್ಞಾನೇಶ್ ಅವರು ವಿದೇಶಿ ಗಣ್ಯರಿಗೆ ಕೆವಿಕೆಯ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.ನಂತರ ಅತಿಥಿಗಳು ಕೆವಿಕೆಯಲ್ಲಿರುವ ಪ್ರಾತ್ಯಕ್ಷಿಕಾ ತಾಕುಗಳಿಗೆ ಭೇಟಿ ನೀಡಿ ವೆಚ್ಚುಗೆ ಸೂಚಿಸಿದರು. ವಿಕಸಿತ ಸಂಕಲ್ಪ ಕೃಷಿ ಅಭಿಯಾನದ ಕಾರ್ಯಕ್ರಮದ ಮಾಹಿತಿ ಪಡೆದು ನಂಜನಗೂಡು ತಾಲೂಕಿನ ದೇವನೂರು ಗ್ರಾಮದಲ್ಲಿ ನಡೆಯುವ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮಕ್ಕೆ ಭೇಟಿ ನೀಡಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ರೈತರೊಂದಿಗೆ ಸಂವಾದವನ್ನು ನಡೆಸಿದರು. ಕೆವಿಕೆಯ ಡಾ. ಜಿ.ಎಂ. ವಿನಯ್ ಅವರು ವಿಕಸಿತ ಕೃಷಿ ಸಂಕಲ್ಪ ಅಭಿಯಾನವು ಕೃಷಿ, ತೋಟಗಾರಿಕೆ ಬೆಳೆಗಳಲ್ಲಿ ಮಣ್ಣಿನ ಪರೀಕ್ಷೆ ಪದ್ಧತಿಗಳು, ಮಣ್ಣಿನ ಪರೀಕ್ಷೆ ಹಾಗೂ ಅದರ ಉಪಯೋಗಗಳ ಬಗ್ಗೆ ತಿಳಿಸಿದರು.
ಮುಂಗಾರಿನ ಹಂಗಾಮಿಗೆ ರೈತರು ಕೈಗೊಳ್ಳಬೇಕಾದ ಕೃಷಿ ಕಾರ್ಯಗಳ ಕುರಿತು, ಭೂಮಿ ಸಿದ್ಧತೆ, ಮಾಗಿ ಉಳುಮೆ, ಹಸಿರೆಲೆ ಗೊಬ್ಬರಗಳಾದ ಸೆಣಬು, ಡೈಯಂಚ, ನಸುಗುನ್ನಿ ಕಾಯಿ ಹಾಗೂ ಇತರ ಹಸಿರೆಲೆ ಗೊಬ್ಬರಗಳ ಕುರಿತು ಮಾಹಿತಿ ನೀಡಿದರು, ನಂತರ ತಿಪ್ಪೆ ಗೊಬ್ಬರದ ಬಳಕೆ ಜೊತೆ ಟ್ರಿಕೊಡರ್ಮ್, ಸೂಡೋಮೊನಾಸ್, ಮೆಟರ್ಹೈಜಿಯಂ ಬಳಕೆ, ಎರೆಹುಳು ಗೊಬ್ಬರಗಳ ಬಳಕೆ ಹಾಗೂ ಮಹತ್ವದ ಬಗ್ಗೆ ಮಾಹಿತಿ ನೀಡಿದರು.ಸುಧಾರಿತ ತಳಿಗಳ ಆಯ್ಕೆ ಹಾಗೂ ಮಳೆಗಾಲದಲ್ಲಿ ಪೋಷಕಾಂಶಗಳ ಸಿಂಪಡಣೆಯ ಉಪಯೋಗಗಳು, ತರಕಾರಿ ಸಮೃದ್ಧಿ, ಬಾಳೆ ಸಮೃದ್ಧಿ ಹಾಗೂ ಲಘು ಪೋಷಕಾಂಶಗಳ ಬಳಕೆ, ನಿರ್ವಹಣೆ ಹಾಗೂ ಉಪಯೋಗಗಳ ಕುರಿತು ಮಾಹಿತಿ ನೀಡಿದರು.ಕೃಷಿ ವಿಜ್ಞಾನ ಕೇಂದ್ರದ ಡಾ. ಪ್ರಸಾದ್ ಅವರು ಬಾಳೆಯಲ್ಲಿ ಬರುವ ಪನಾಮಾ ರೋಗ, ಎಲೆ ಚುಕ್ಕೆ ರೋಗಗಳ ಸಮಗ್ರ ಜೈವಿಕ ನಿರ್ವಹಣೆ, ನೇಂದ್ರ ಬಾಳೆಯಲ್ಲಿ ಬರುವ ಕಾಂಡ ಕೊರೆಯುವ ಹುಳದ ಸಮಗ್ರ ನಿರ್ವಹಣೆ ಬಗ್ಗೆ ವಿವರಿಸಿದರು.ಬೆಂಗಳೂರಿನ ಕೇಂದ್ರೀಯ ಸಿಹಿ ನೀರು ಜಲ ಕೃಷಿ ಸಂಶೋಧನಾ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ ಸತೀಶ್ ಏವುಂಜೆ ಮಾತನಾಡಿ, ಮೀನುಗಾರಿಕೆಯು ಕೃಷಿಯ ಕುರಿತು ಮಾಹಿತಿ ನೀಡಿದರು. ಟಿ. ನರಸೀಪುರ ತಾಲೂಕಿನ ಬನ್ನೂರು ಹೋಬಳಿಯ ಅತಹಳ್ಳಿಯಲ್ಲಿ ಬೆಂಗಳೂರಿನ ಐಸಿಎಆರ್ ಐಐಎಚ್‌ಆರ್‌ನ ವಿಜ್ಞಾನಿ ಡಾ. ಸುಜಾತ ನಾಯರ್ ಹಾಗೂ ಅನುರಾಧ ಸಾನೆ ಅವರು ತೋಟಗಾರಿಕಾ ಬೆಳೆಗಳ ನಿರ್ವಹಣೆ, ಬೀಜಗಳ ಆಯ್ಕೆ, ಬೇಸಾಯ ತಂತ್ರಜ್ಞಾನದ ಕುರಿತು ರೈತರಿಗೆ ಮಾಹಿತಿಯನ್ನು ನೀಡಿದರು.ಕೃಷಿ ಇಲಾಖೆಯ ಆತ್ಮ ಯೋಜನೆಯ ತಾಲೂಕು ತಾಂತ್ರಿಕ ವ್ಯವಸ್ಥಾಪಕ ಶಿವಣ್ಣ ಅವರು ಪಾಲ್ಗೊಂಡು ರೈತರಿಗೆ ಕೃಷಿ ಇಲಾಖೆ ಹಾಗೂ ಕೃಷಿ ಸಂಬಂಧಿತ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಕೆವಿಕೆಯ ಬೇಸಾಯಶಾಸ್ತ್ರದ ವಿಷಯ ತಜ್ಞ ಶಾಮರಾಜ್ ಅವರು ಮಾತನಾಡಿದರು.ಗ್ರಾಮದಲ್ಲಿ ಬೆಳೆಯುವ ಮುಖ್ಯ ಬೆಳೆಗಳ ಬಗ್ಗೆ ಮಾಹಿತಿ ಪಡೆದು ಕೃಷಿಯಲ್ಲಿ ರೈತರು ಅನುಭವಿಸುತ್ತಿರುವ ಸವಾಲುಗಳು ಹಾಗೂ ತೊಂದರೆಗಳ ಕುರಿತು ಮಾಹಿತಿ ನೀಡಿದರು. ಮುಂಗಾರು ಕೃಷಿ ಹಂಗಾಮಿನ ಭೂಮಿ ಸಿದ್ಧತೆ, ಸುಧಾರಿತ ತಳಿಗಳ ಆಯ್ಕೆ, ಬೀಜೋಪಚಾರ, ಸಮಗ್ರ ಪೋಷಕಾಂಶಗಳ ನಿರ್ವಹಣೆಯ ಮಾಹಿತಿ ನೀಡಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.