ಕನ್ನಡಪ್ರಭ ವಾರ್ತೆ ಹುಣಸೂರು
ಪಟ್ಟಣದ ನಗರಸಭೆಯ ಡಾ.ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ನಗರಸಭೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಗರದ ಕೆಎಸ್ಆರ್ ಟಿಸಿ ಬಸ್ ಡಿಪೋದಿಂದ ಆರಂಭಗೊಂಡು ಹಾಲಗೆರೆ ವೃತ್ತದವರೆಗೆ 5.1 ಕಿ.ಮೀ. ಉದ್ದದ ನಾಲ್ಕು ಪಥದ ರಸ್ತೆ ನಿರ್ಮಾಣನ್ನು 56 ಕೋಟಿ ರು. ಗಳ ವೆಚ್ಚದಡಿ ನಿರ್ಮಿಸಲು ಮುಂದಾಗಿದೆ. ಆದರೆ ಕಾಮಗಾರಿಯನ್ನು ಮೂಕನಹಳ್ಳಿ ಗೇಟ್ ನಿಂದಲೇ ಆರಂಭಗೊಳಿಸಲು (ಹೆಚ್ಚುವರಿಯಾಗಿ ಒಂದು ಕಿ.ಮೀ) ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿಗೆ ಮನವಿ ಸಲ್ಲಿಸಿದ್ದು, ಸಾರಿಗೆ ಮಂತ್ರಿ ನಿತಿನ್ ಗಡ್ಕರಿ ಮನವೊಲಿಸಿ ಕ್ರಮ ವಹಿಸಲು ಕೋರಿದ್ದೇನೆ ಎಂದರು.
22.5 ಮೀಟರ್ ಅಗಲವುಳ್ಳ ನಾಲ್ಕು ಪಥಗಳು ಮತ್ತು ಸರ್ವೀಸ್ ರಸ್ತೆಯನ್ನು ಈ ಹೆದ್ದಾರಿ ಹೊಂದಲಿದೆ. 5 ಜಂಕ್ಷನ್ ಗಳು, ಬೈಪಾಸ್ ರಸ್ತೆಯಲ್ಲಿ ಹಾಲಿ ಇರುವ ಸೇತುವೆಗೆ ಪರ್ಯಾಯವಾಗಿ ಮತ್ತೊಂದು ಸೇತುವೆ ನಿರ್ಮಾಣವಾಗಲಿದೆ. ಹೊಸ ಸೇತುವೆ ನಿರ್ಮಾಣದ ನಂತರ ಹಳೆ ಸೇತುವೆಯನ್ನು ಕೆಡವಿ ನೂತನ ರಸ್ತೆ ನಿರ್ಮಾಣ ಮಾಡಲು ಪ್ರಾಧಿಕಾರ ಯೋಜನೆ ರೂಪಿಸಿದೆ ಎಂದು ತಿಳಿಸಿದರು.ನಗರಸಭೆ ಸದಸ್ಯರಾದ ಶರವಣ, ಕೃಷ್ಣರಾಜ ಗುಪ್ತ, ದೇವರಾಜ್, ಮಾಲಿಕ್ ಪಾಷಾ ಮುಂತಾದವರು ಪ್ರಾಧಿಕಾರವು ರಸ್ತೆಯ ಮೇಲೆ ಬೀಳುವ ಮಳೆ ನೀರಿನ ಹರಿವಿಗೆ ಮಾತ್ರ ಚರಂಡಿಗಳನ್ನು ನಿರ್ಮಿಸುತ್ತಿದೆ. ಆದರೆ, ಜಂಕ್ಷನ್ ಗಳಲ್ಲಿ ಬಂದು ಸೇರುವ ನೀರಿನ ನಿರ್ವಹಣೆಗೆ ಯಾವುದೇ ಯೋಜನೆ ರೂಪಿಸಿಲ್ಲವೆಂದು ಆಕ್ಷೇಪಿಸಿದರು. ಅಲ್ಲದೇ ಕೆಲ ಪ್ರಮುಖ ಜಂಕ್ಷನ್ ಗಳಲ್ಲಿ ಸಂಚಾರ ಸುಗಮ ನಿರ್ವಹಣೆಗೆ ಸ್ಕೈ ವಾಕ್ ವ್ಯವಸ್ಥೆ ಅಥವಾ ಅಂಡರ್ ಬ್ರಿಡ್ಜ್ ವ್ಯವಸ್ಥೆ ಕಲ್ಪಿಸಿಕೊಂಡಿಲ್ಲವೆಂದು ಆರೋಪಿಸಿದರು.
ನಗರ ವ್ಯಾಪ್ತಿಯಲಿರುವ ಎಲ್ಲ ಪ್ರಮುಖ ರಸ್ತೆಗಳೂ ಸಂಚಾರಕ್ಕೆ ಯೋಗ್ಯವಿಲ್ಲದೇ ಜನರು ಹಿಡಿಶಾಪ ಹಾಕುತ್ತಿದ್ದಾರೆ. ರಸ್ತೆಗಳು ಲೋಕೋಪಯೋಗಿ ಇಲಾಖೆಯ ಸುಪರ್ದಿಯೋ ಅಥವಾ ನಗರಸಭೆಯ ಆಸ್ತಿಯೋ ಎಂಬ ಗೊಂದಲವನ್ನು ಮೊದಲು ಪರಿಹರಿಸಿ ನಂತರ ರಸ್ತೆ ದುರಸ್ತಿ ಕಾಮಗಾರಿ ಬಗ್ಗೆ ಕ್ರಮವಹಿಸಿರೆಂದು ಸದಸ್ಯರಾದ ದೊಡ್ಡಹಜ್ಜೂರು ರಮೇಶ್, ವಿವೇಕ್, ಮಂಜು, ಸ್ವಾಮಿಗೌಡ ಮುಂತಾದವರು ಒತ್ತಾಯಿಸಿದರು.
ಸಭೆಯಲ್ಲಿ ನಗರಸಭಾಧ್ಯಕ್ಷ ಗಣೇಶ್ ಕುಮಾರಸ್ವಾಮಿ, ಉಪಾಧ್ಯಕ್ಷೆ ಆಶಾ ಕೃಷ್ಣನಾಯಕ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್, ಪೌರಾಯುಕ್ತೆ ಕೆ. ಮಾನಸ, ಎಇಇ ಶರ್ಮಿಳಾ, ಹೆದ್ದಾರಿ ಪ್ರಾಧಿಕಾರದ ಎಇ ತಬಸುಮ್, ಲೋಕೋಪಯೋಗಿ ಇಲಾಖೆ ಜೆಇ ಪ್ರಭಾಕರ್ ಮತ್ತು ಸದಸ್ಯರು ಇದ್ದರು.