ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಭಾರತದ ಸ್ವಾತಂತ್ರ್ಯ ಸಂಗ್ರಾಮದಿಂದ ಹಿಡಿದು ದೇಶ ಕಟ್ಟುವವರೆಗೆ ಮುಖ್ಯ ಪಾತ್ರ ವಹಿಸಿದ ಅಪರೂಪದ ನಾಯಕ ಡಾ.ಬಾಬು ಜಗಜೀವನರಾಂ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅಭಿಪ್ರಾಯಪಟ್ಟರು.ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಲೋಕಸಬಾ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆ ಜಿಲ್ಲಾಡಳಿತದ ವತಿಯಿಂದ ಶುಕ್ರವಾರ ಸರಳವಾಗಿ ಆಯೋಜಿಸಿದ್ದ ಡಾ.ಬಾಬು ಜಗಜೀವನರಾಂ ರವರ 117ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಚುನಾವಣಾ ನೀತಿ ಸಂಹಿತೆ ಹಿನ್ನೆಲೆ ಜಯಂತಿಯನ್ನು ಸರಳವಾಗಿ ಆಚರಿಸಲಾಗುತ್ತಿದೆ. ಇಂತಹ ಮಹಾನುಭಾವರ ಜಯಂತಿಯಂದು ನಾವು ಅವರನ್ನು ನೆನೆದು, ಕಲಿಯಬೇಕಾದುದು ಸಾಕಷ್ಟಿರುತ್ತದೆ. ಬಾಬು ಜಗಜೀವರಾಂ ರವರು ದಮನಿತ ವರ್ಗದ ನಾಯಕರಾಗಿ, ಹಸಿರು ಕ್ರಾಂತಿ ಹರಿಕಾರರಾಗಿ, ಸಮಾಜ ಸುಧಾರಕರಾಗಿ, ಪ್ರಗತಿಪರ ನಾಯಕರಾಗಿ ನಮ್ಮೆಲ್ಲರಿಗೂ ಪ್ರೇರಣೆಯಾಗಿದ್ದಾರೆ ಎಂದು ಹೇಳಿದರು.ಸ್ವತಂತ್ರ್ಯನಂತರ ಅವರು ಸಾರಿಗೆ, ಕೃಷಿ, ರೈಲ್ವೆ, ಕಾರ್ಮಿಕ ಸಚಿವರು, ಉಪ ಪ್ರಧಾನಿ ಸೇರಿ ಅನೇಕ ಹುದ್ದೆ ಸ್ವೀಕರಿಸಿ ದೇಶ ಕಟ್ಟುವಲ್ಲಿ ತಮ್ಮದೇ ಆದ ವಿಶೇಷ ಕೊಡುಗೆಯನ್ನು ನೀಡಿದ್ದಾರೆ ಎಂದರು.
ಡಾ. ಕೆ.ಚಂದ್ರಪ್ಪ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಶ್ರೇಷ್ಠ ವ್ಯಕ್ತಿಗಳ ಜಯಂತಿ ಮುಖ್ಯ ಉದ್ದೇಶ ಅವರ ಚಿಂತನೆ, ವಿಚಾರಧಾರೆ ಮತ್ತು ಅವರು ಸಮಾಜಕ್ಕಿತ್ತ ಕೊಡುಗೆ ನೆನೆಯುವುದಾಗಿದೆ. ಅವರ ಕಾಲಘಟ್ಟದಲ್ಲಿ ಅವರು ಮಾಡಿದ ಕೆಲಸಗಳು, ಸಮುದಾಯಕ್ಕೆ ನೀಡಿದ ಕೊಡುಗೆಗಳು ಪ್ರಸ್ತುತಕ್ಕೆ ಹೋಲಿಸಿ ನೋಡುವುದಾಗಿದೆ ಎಂದರು.ಡಾ.ಬಾಬು ಜಗಜೀವರಾಂ ರವರು 1908 ರ ಏ.5ರಂದು ಬಿಹಾರದ ಛಂದ್ವ ಎಂಬ ಸ್ಥಳದಲ್ಲಿ ಸೋಬಿ ರಾಂ ಮತ್ತು ವಸಂತಿ ದೇವಿ ದಂಪತಿಗೆ ಜನಿಸಿದರು. ಶಿಕ್ಷಣ ಮುಗಿಸಿದ ನಂತರ ಸಂಘಟನೆಗೆ ಹೆಚ್ಚಿನ ಒತ್ತು ನೀಡಿದರು. ಭಾರತೀಯ ಸಂಸ್ಕೃತಿ ಮತ್ತು ಇತಿಹಾಸವನ್ನು ಆಳವಾಗಿ ಅಧ್ಯಯನ ಮಾಡಿದರು. ದಲಿತರು, ಕಾರ್ಮಿಕರನ್ನು ಸಂಘಟಿಸಿದರು. ಶೋಷಿತರ ಹಕ್ಕು ಮತ್ತು ಸೌಲಭ್ಯ ಒದಗಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದ ಅವರು ಸಮ ಸಮಾಜ ಸ್ಥಾಪಿಸುವ ಬಯಕೆ ಹೊಂದಿದ್ದರು ಎಂದು ತಿಳಿಸಿದರು.
ಅವರ ಸಾಧನಾ ಕ್ಷೇತ್ರದ ವ್ಯಾಪ್ತಿ ತುಂಬಾ ವಿಸ್ತಾರವಾಗಿದ್ದು ಅವರು, ಸಾರಿಗೆ ಮತ್ತು ಸಂಪರ್ಕ ಖಾತೆ, ರೈಲ್ವೆ ಖಾತೆ, ಕೃಷಿ ಮತ್ತು ಆಹಾರ, ರಕ್ಷಣಾ ಖಾತೆ, ಕಾರ್ಮಿಕ ಇಲಾಖೆ, ಉಪ ಪ್ರಧಾನಿ ಹೀಗೆ ಹಲವಾರು ಪ್ರಮುಖ ಹುದ್ದೆಗಳನ್ನು ಅತ್ಯುತ್ತಮವಾಗಿ ನಿರ್ವಹಿಸಿ ಅನೇಕ ಕೊಡುಗೆ ನೀಡಿದ್ದು ಅವರ ಚಿಂತನೆ, ಆದರ್ಶಗಳು ಎಲ್ಲ ಕಾಲಕ್ಕೂ ಮಾದರಿಯಾಗಿವೆ ಎಂದರು.ಕಾರ್ಯಕ್ರಮದಲ್ಲಿ ಜಿಪಂ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್, ಶಿವಮೊಗ್ಗ ಉಪವಿಭಾಗಾಧಿಕಾರಿ ಸತ್ಯನಾರಾಯಣ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಡಿ.ಮಲ್ಲೇಶಪ್ಪ, ಸಹಾಯಕ ನಿರ್ದೇಶಕ ಸುರೇಶ್, ದಲಿತ ಸಂಘಟನೆಗಳ ಮುಖಂಡರು, ವಿವಿಧ ಇಲಾಖೆಗಳ ಮತ್ತಿತರರು ಇದ್ದರು.