ಮಂಡ್ಯದಲ್ಲಿ ಸಚಿವರಿಂದ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ

KannadaprabhaNewsNetwork | Published : Apr 15, 2025 12:55 AM

ಸಾರಾಂಶ

ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ 134 ನೇ ಜಯಂತಿ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಉದ್ಯಾನವನದ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಹಸಿರು ಕ್ರಾಂತಿ ಹರಿಕಾರ ಬಾಬು ಜಗಜೀವನ ರಾಂ ಅವರ ಪುತ್ಥಳಿಗೆ ಗಣ್ಯರು ಮಾಲಾರ್ಪಣೆ ಮಾಡಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ 134 ನೇ ಜಯಂತಿ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಉದ್ಯಾನವನದ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಹಸಿರು ಕ್ರಾಂತಿ ಹರಿಕಾರ ಬಾಬು ಜಗಜೀವನ ರಾಂ ಅವರ ಪುತ್ಥಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕ ಪಿ.ರವಿಕುಮಾರ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ ಮಾಲಾರ್ಪಣೆ ಮಾಡಿದರು.

ಇದೇ ವೇಳೆ ಸಚಿವರು, ಶಾಸಕರು, ಡೀಸಿ ಮತ್ತು ಮುಡಾ ಅಧ್ಯಕ್ಷ ನಯೀಂ ನೀಲಿ ಬಣ್ಣದ ಬಾವುಟ ಪ್ರದರ್ಶಿಸುವ ಮೂಲಕ ಬೈಕ್ ರ‍್ಯಾಲಿಗೆ ಚಾಲನೆ ನೀಡಿದರು. ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಸಮಾಜ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಸಿದ್ದಲಿಂಗೇಶ್ ಸೇರಿದಂತೆ ಇನ್ನಿತರ ದಲಿತ ಸಮಾಜದ ಮುಖಂಡರುಗಳು ಉಪಸ್ಥಿತರಿದ್ದರು.

ಅಂಬೇಡ್ಕರ್ ಭಾವಚಿತ್ರ ಮೆರವಣಿಗೆ:

ವರ್ಣರಂಜಿತ ರಥದಲ್ಲಿ ಇಡಲಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಶಾಸಕ ಪಿ.ರವಿಕುಮಾರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಪುಷ್ಪಾರ್ಚನೆ ಮಾಡುವ ಮೂಲಕ ನೀಲಿ ಬಣ್ಣದ ಬಾವುಟ ಪ್ರದರ್ಶಿಸಿ ಮೆರವಣಿಗೆಗೆ ಚಾಲನೆ ನೀಡಿದರು,

ಮೆರವಣಿಗೆಯಲ್ಲಿ ವೀರಗಾಸೆ, ಡೊಳ್ಳು ಕುಣಿತ, ಟಮಟೆ ಸೇರಿದಂತೆ ಮಹಿಳೆಯರು ಸಂವಿಧಾನ ಪುಸ್ತಕ ಪ್ರದರ್ಶಿಸುವ ಮೂಲಕ ವಿಭಿನ್ನ ರೀತಿಯಲ್ಲಿ ಸಾಗಿದರು. ಈ ವೇಳೆ ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ನಗರಸಭೆ ಪೌರಾಯುಕ್ತೆ ಪಂಪಾಶ್ರೀ, ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಸಂದೇಶ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ಕಾಲೇಜಿನಲ್ಲಿ ಅಂಬೇಡ್ಕರ್ ಜನ್ಮದಿನಾಚರಣೆ

ಹಲಗೂರು: ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಬಾಬಾ ಸಾಹೇಬ್ ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಅಲಂಗೂರ್ ಮಂಜುನಾಥ್, ಪ್ರೊ.ಮಹೇಶ್ ಬಾಬು, ಸಮಾಜ ವಿಭಾಗದ ಸುಧಾಬಿದರಿ, ಇತಿಹಾಸ ವಿಭಾಗದ ರವಿ, ಸೂಪರ್ಡೆಂಟ್ ಕುಮಾರಸ್ವಾಮಿ, ಕನ್ನಡ ವಿಭಾಗದ ಮೂರ್ತಿ, ಡಾಟಾ ಆಪರೇಟರ್ ಶ್ರೀಧರ್ ಸೇರಿದಂತೆ ಇತರರು ಇದ್ದರು.

Share this article