ಬಡವರ ಬದುಕಲ್ಲಿ ಅಕ್ಷರ ದೀಪ ಹಚ್ಚಿದ ಡಾ. ದಂಡಿನ: ನಿರಂಜನಾನಂದಪುರಿ ಸ್ವಾಮೀಜಿ

KannadaprabhaNewsNetwork |  
Published : Aug 06, 2026, 02:15 AM IST
ಕಾರ್ಯಕ್ರಮದಲ್ಲಿ ನರಗುಂದ ಶಾಸಕ ಸಿ.ಸಿ. ಪಾಟೀಲ ಮಾತನಾಡಿದರು. | Kannada Prabha

ಸಾರಾಂಶ

ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ ಯಾವತ್ತೂ ಮೋಸ ಮಾಡುವುದಿಲ್ಲ ಎಂಬ ಸತ್ಯ ದಂಡಿನ ಅವರಿಗೆ ತಿಳಿದಿತ್ತು. ಅವರು ಕೇವಲ ಸಂಪತ್ತನ್ನು ಕೊಡದೆ, ಸಂಪತ್ತನ್ನು ಗಳಿಸುವಂತಹ ಸನ್ಮಾರ್ಗದ ಶಿಕ್ಷಣವನ್ನು ನೀಡಿದ್ದಾರೆ.

ಗದಗ: ಮನುಷ್ಯನ ಆಯುಷ್ಯ, ಕರ್ಮ, ವಿತ್ತ, ವಿದ್ಯಾ ಹಾಗೂ ನಿಧನ ಎಂಬ ಐದೂ ಸಂಗತಿಗಳು ಮಾತೃಗರ್ಭದಲ್ಲೇ ನಿರ್ಧಾರವಾಗಿರುತ್ತವೆ. ಇದು ಗೊತ್ತಿದ್ದರೂ ಬಡ ಕುಟುಂಬದಲ್ಲಿ ಜನಿಸಿದರೂ ಇನ್ನೊಬ್ಬರ ಮುಂದೆ ಕೈಚಾಚದೆ, ಸಮಾಜಕ್ಕೆ ಕೊಡುವಂತಹ ಶಕ್ತಿ ಬೆಳೆಸಿಕೊಂಡು ಲಕ್ಷಾಂತರ ಮಕ್ಕಳಿಗೆ ಅಕ್ಷರ ದಾನ ಮಾಡಿದ ಮಹಾನ್ ಚೇತನ ದಿ. ಡಾ. ಬಿ.ಎಫ್. ದಂಡಿನ ಎಂದು ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಬಣ್ಣಿಸಿದರು.

ಬುಧವಾರ ನಗರದ ಗಾಣಿಗ ಭವನದಲ್ಲಿ ಆಯೋಜಿಸಿದ್ದ ದಿ. ಡಾ. ಬಿ. ಎಫ್. ದಂಡಿನ ಹಾಗೂ ಅವರ ಪತ್ನಿ ಶಕುಂತಲಾಬಾಯಿ ದಂಡಿನ ಅವರ ನುಡಿನಮನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ ಯಾವತ್ತೂ ಮೋಸ ಮಾಡುವುದಿಲ್ಲ ಎಂಬ ಸತ್ಯ ದಂಡಿನ ಅವರಿಗೆ ತಿಳಿದಿತ್ತು. ಅವರು ಕೇವಲ ಸಂಪತ್ತನ್ನು ಕೊಡದೆ, ಸಂಪತ್ತನ್ನು ಗಳಿಸುವಂತಹ ಸನ್ಮಾರ್ಗದ ಶಿಕ್ಷಣವನ್ನು ನೀಡಿದ್ದಾರೆ ಎಂದ ಅವರು, ದಂಡಿನ ಕುಟುಂಬದ ರಾಜಕೀಯ ಹಾಗೂ ಸಾಮಾಜಿಕ ಬೆಳವಣಿಗೆಗೆ ಕಾಗಿನೆಲೆ ಕನಕ ಗುರುಪೀಠವು ಸದಾ ಬೆನ್ನೆಲುಬಾಗಿ ನಿಲ್ಲಲಿದೆ ಎಂದರು.

ನರಗುಂದ ಶಾಸಕ ಸಿ.ಸಿ. ಪಾಟೀಲ ಮಾತನಾಡಿ, 65ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಶೈಕ್ಷಣಿಕ ಕ್ರಾಂತಿ ಮಾಡಿದಂತಹ ಧೀಮಂತ ನಾಯಕ ನಮ್ಮೊಂದಿಗಿಲ್ಲದಿರುವುದು ತೀವ್ರ ನೋವಿನ ಸಂಗತಿ. ಇಷ್ಟೊಂದು ಜನಪ್ರಿಯ ಹಾಗೂ ಸೇವಾ ಮನೋಭಾವ ಹೊಂದಿದ್ದ ವ್ಯಕ್ತಿ ಕರ್ನಾಟಕ ವಿಧಾನಸಭೆಯ ಸದಸ್ಯರಾಗಬೇಕೆಂಬ ಹಂಬಲ ಹೊಂದಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ ಎಂಬ ಕೊರತೆ ಎಲ್ಲರಲ್ಲಿದೆ. ಆ ಕೊರತೆಯನ್ನು ಅವರ ಪುತ್ರ ನೀಗಿಸುವಂತಾಗಲಿ. ಅದಕ್ಕೆ ನಾವೆಲ್ಲರೂ ಬೆನ್ನೆಲುಬಾಗಿ ನಿಲ್ಲುತ್ತೇವೆ ಎಂದು ಭರವಸೆ ನೀಡಿದರು.

ಹಿರಿಯ ಪತ್ರಕರ್ತ ಸಿದ್ದಣ್ಣವರ ಮಾತನಾಡಿ, ತೀರಾ ಬಡ ಕುಟುಂಬದಿಂದ ಬಂದ ನನಗೆ ಮತ್ತು ನನ್ನಂತ ಸಾವಿರಾರು ಬಡ ಮಕ್ಕಳ ಎದೆಯಲ್ಲಿ ಅಕ್ಷರ ಬಿತ್ತಿ ಅವರ ಬಾಳಿಗೆ ಬೆಳಕಾದವರು ಡಾ. ಬಿ. ಎಫ್. ದಂಡಿನ ಅವರು. ಸ್ವಂತ ಪರಿಶ್ರಮದಿಂದ 65ಕ್ಕೂ ಹೆಚ್ಚು ಸಂಸ್ಥೆಗಳನ್ನು ಕಟ್ಟಿ ಬೆಳೆಸಿ, ಲಕ್ಷಾಂತರ ಬಡ ಮಕ್ಕಳಿಗೆ ವಿದ್ಯಾದಾನ ನೀಡಿದ್ದಾರೆ. ಅವರಿಂದ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಇಂದು ಐಎಎಸ್, ಐಪಿಎಸ್ ಅಧಿಕಾರಿಗಳು, ಪತ್ರಕರ್ತರು, ಪ್ರೊಫೆಸರ್‌ಗಳಾಗಿ ಹೊರಹೊಮ್ಮಿದ್ದಾರೆ ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಆರ್‌ಎಸ್ಎಸ್ ವ್ಯವಸ್ಥಾ ಪ್ರಮುಖ ಮಂಗೇಶ್ ಭೇಂಡೆ, ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಮಾಜಿ ಶಾಸಕ ಡಿ.ಆರ್. ಪಾಟೀಲ, ವಿಧಾನಪರಿಷತ್ ಮಾಜಿ ಸದಸ್ಯ ಹುಲಿನಾಯ್ಕರ, ವಿಶ್ರಾಂತ ಕುಲಪತಿ ಡಾ. ತೇಜಸ್ವಿ ಕಟ್ಟಿಮನಿ, ದೊಡ್ಡನಗೌಡ ಪಾಟೀಲ ಮುಂತಾದವರು ಮಾತನಾಡಿದರು.

ಗದಗ ಶಿವಾನಂದ ಮಠದ ಸದಾ ಶಿವಾನಂದ ಶ್ರೀಗಳು, ಕುಷ್ಟಗಿಯ ನಾಗಾಸಾಧು ಮಹಾಂತ ಸಹದೇವಾನಂದ ಗಿರಿ ಶ್ರೀಗಳು, ಹಡಗಿನಹಾಳದ ಮುಕ್ತೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಅಧ್ಯಕ್ಷ ಸಿದ್ದಲಿಂಗೇಶ್ವರ ಪಾಟೀಲ, ಹಾಲುಮತ ಮಹಾಸಭಾದ ರುದ್ರಣ್ಣ ಗುಳಗುಳಿ, ಫಕೀರಪ್ಪ ಹೆಬಸೂರ, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರುಡಗಿ, ಎಂ.ಎಸ್. ಕರಿಗೌಡ್ರ ಸೇರಿದಂತೆ ಡಾ ದಂಡಿನ ಅವರ ನೂರಾರು ಅಭಿಮಾನಿಗಳು, ಅವರ ಶಿಷ್ಯರು, ಶಿಕ್ಷಣ ಸಂಸ್ಥೆಗಳ ಉಪನ್ಯಾಸಕರು, ನಿವೃತ್ತ ಉಪನ್ಯಾಸಕರು ಅವರ ಕುಟುಂಬಸ್ಥರು ಸೇರಿದಂತೆ ಅನೇಕರು ಇದ್ದರು.

ಡಾ. ಶರಣು ಗೋಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದ್ದು ಯಾಪಲಪರವಿ ಒಡನಾಟವನ್ನು ಸ್ಮರಿಸಿದರು. ರವಿ ದಂಡಿನ ತಂದೆಯನ್ನು ಸ್ಮರಿಸಿ ಭಾವುಕರಾಗಿ ಕಣ್ಣೀರು ಹಾಕಿದರು. ಅವರ ಕುಟುಂಬಸ್ಥರು, ಆಪ್ತರು ಸೇರಿದಂತೆ ಅನೇಕ ಗಣ್ಯರು ತಮ್ಮ ಅಭಿಪ್ರಾಯ ಹಂಚಿಕೊಂಡರು. ವೆಂಕಟೇಶ ಅಲ್ಕೋಡ್ ಪ್ರಾರ್ಥಿಸಿದರು. ಬಾಹುಬಲಿ ಜೈನರ ನಿರೂಪಿಸಿದರು. ಅನಿಲ ವೈದ್ಯ ಸ್ವಾಗತಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೈವಿಕತೆಯಿಂದಲೇ ಮನಶಾಂತಿ ಸಾಧ್ಯ: ಮುಪ್ಪಿನ ಬಸವಲಿಂಗ ಸ್ವಾಮಿಗಳು
ಖಾದಿ ನಗರಕ್ಕೆ ಮೂಲ ಸೌಕರ್ಯ ಒದಗಿಸಿ: ಶಾಸಕ ಸಿ.ಸಿ. ಪಾಟೀಲ