ಶಿರಸಿ: ಎಂ.ಎ. ಹೆಗಡೆ ದಂಟ್ಕಲ್ ಪ್ರಶಸ್ತಿಯನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಡಾ. ಜಿ.ಎಲ್. ಹೆಗಡೆ ಅವರಿಗೆ ಸ್ವರ್ಣವಲ್ಲೀಯ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಪ್ರದಾನ ಮಾಡಿದರು.
ಪ್ರಶಸ್ತಿ ಸ್ವೀಕರಿಸಿ ಡಾ. ಜಿ.ಎಲ್. ಹೆಗಡೆ ಕುಮಟಾ ಮಾತನಾಡಿ, ಆರಾಧನೆ ಕಲೆಯಾಗಿರುವ ಯಕ್ಷಗಾನ ಎಂದರೆ ಕುಣಿಯುವುದು ಎಂಬಂತಾಗಿದೆ. ಆದರೆ ಅದು ತಪ್ಪು. ಜನರಿಗೆ ಉತ್ತಮ ಸಂದೇಶ ನೀಡುವುದು ಯಕ್ಷಗಾನ ಮುಖ್ಯ ಉದ್ದೇಶವಾಗಿದೆ. ಯಕ್ಷಗಾನ ಅಕಾಡೆಮಿಯನ್ನು ಇನ್ನಷ್ಟು ಭದ್ರಗೊಳಿಸಿರುವುದರಿಂದ ಯಕ್ಷಗಾನ ಕಲೆ ಉಳಿಯಲು ಸಾಧ್ಯ ಎಂದರು.
ಯಕ್ಷಗಾನ ಹವ್ಯಕರ ಪರಂಪರೆಯಾಗಿದ್ದು, ಅದನ್ನು ನಾನು ಸಂಶೋಧನಾ ಪ್ರಬಂಧದಲ್ಲಿ ಮಂಡಿಸಿದ್ದೇನೆ. ತಾಳಮದ್ದಳೆಯನ್ನು ಉಳಿಸಿಕೊಳ್ಳುವ ಬಹುಜವಾಬ್ದಾರಿ ಇದೆ ಎಂದರು.ನಮ್ಮ ನಡುವೆ ಸ್ನೇಹ, ಪ್ರೀತಿ, ವಿಶ್ವಾಸವಿರಬೇಕು. ಪ್ರಶಸ್ತಿಯನ್ನು ನಾನು ಅಪೇಕ್ಷ ಪಟ್ಟಿಲ್ಲ. ಎಂ.ಎ. ಹೆಗಡೆ ಅವರದ್ದು ನನ್ನದು ದೀರ್ಘ ಕಾಲದ ಸಂಬಂಧ ಎಂದರು.
ಸಮಾಜ ಸಂಘಟಿಸಿ, ಜಾಗೃತಿಗೊಳಿಸುವ ಶಕ್ತಿ ಯಕ್ಷಗಾನ ಕಲೆಗಿದೆ. ಮನಸ್ಸು, ಬುದ್ಧಿ, ಶರೀರಕ್ಕೆ ಚೈತನ್ಯ ನೀಡುವ ಶಕ್ತಿ ಯಕ್ಷಗಾನ ಕಲೆಗಿದೆ. ಸಂಸ್ಕೃತಿ ದೃಷ್ಟಿಯಿಂದ ಯಕ್ಷಗಾನವನ್ನು ಉಳಿಸಿ ಬೆಳೆಸುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದರು.
ಜಿ.ಜಿ. ಹೆಗಡೆ ಕನೇನಳ್ಳಿ ಹಾಗೂ ಸುಬ್ರಾಯ ಹೆಗಡೆ ಕೆರೆಕೊಪ್ಪ ಉಭಯ ಶ್ರೀಗಳಿಗೆ ಫಲ ಸಮರ್ಪಿಸಿದರು. ರಾಜರಾಜೇಶ್ವರಿ ಸಂಸ್ಕೃತ ಪಾಠ ಶಾಲಾ ವಿದ್ಯಾರ್ಥಿಗಳು ವೇದಘೋಷ ಹಾಡಿದರು. ಪ್ರವೀಣ ಹೆಗಡೆ ಮಣ್ಮನೆ ಕಾರ್ಯಕ್ರಮ ನಿರೂಪಿಸಿದರು.