ಡಾ. ಜಿ.ಎಸ್. ಆಮೂರ ಸಾಹಿತ್ಯ ಕ್ಷೇತ್ರದ ನಂದಾದೀಪ: ಶಿವಯೋಗೀಶ್ವರ ಸ್ವಾಮಿಗಳು

KannadaprabhaNewsNetwork |  
Published : May 08, 2025, 12:32 AM IST
ಬಮ್ಮನಹಳ್ಳಿಯಲ್ಲಿ ಡಾ. ಜಿ.ಎಸ್. ಆಮೂರ ಅವರ ಜನ್ಮಶತಮಾನೋತ್ಸವವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲಿಂಗಯ್ಯ ಹಿರೇಮಠ ಉದ್ಘಾಟಿಸಿದರು. | Kannada Prabha

ಸಾರಾಂಶ

ಬರಹಗಾರರಿಗೆ ಪ್ರೇರಣೆಯಾಗಿ, ಸಾಹಿತ್ಯ ಅಭಿರುಚಿಗೆ ಶಕ್ತಿಯಾಗಿ ಸಾಹಿತ್ಯ ಕ್ಷೇತ್ರದ ನಿರ್ಮಲ ಸಾಹಿತಿ ವಿಮರ್ಶಕ ಡಾ. ಜಿ.ಎಸ್. ಅಮೂರ ಅವರ ಜೀವನ ಸಾರ್ಥಕವಾಗಿದೆ.

ಹಾನಗಲ್ಲ: ವಿಮರ್ಶಾ ಸಾಹಿತ್ಯದ ಅನರ್ಘ್ಯ ರತ್ನ ಡಾ. ಜಿ.ಎಸ್. ಆಮೂರ ಸಾಹಿತ್ಯ ಕ್ಷೇತ್ರದ ನಂದಾದೀಪ ಎಂದು ಬಮ್ಮನಹಳ್ಳಿ ಗುರುಪಾದೇಶ್ವರ ವಿರಕ್ತಮಠದ ಪೀಠಾಧಿಪತಿ ಶಿವಯೋಗೀಶ್ವರ ಸ್ವಾಮಿಗಳು ನುಡಿದರು.

ಬುಧವಾರ ಡಾ. ಜಿ.ಎಸ್. ಆಮೂರ ಅವರ ಹುಟ್ಟೂರು ತಾಲೂಕಿನ ಬಮ್ಮನಹಳ್ಳಿಯಲ್ಲಿ ನಡೆದ ಶತಮಾನೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಬರಹಗಾರರಿಗೆ ಪ್ರೇರಣೆಯಾಗಿ, ಸಾಹಿತ್ಯ ಅಭಿರುಚಿಗೆ ಶಕ್ತಿಯಾಗಿ ಸಾಹಿತ್ಯ ಕ್ಷೇತ್ರದ ನಿರ್ಮಲ ಸಾಹಿತಿ ವಿಮರ್ಶಕ ಡಾ. ಜಿ.ಎಸ್. ಅಮೂರ ಅವರ ಜೀವನ ಸಾರ್ಥಕವಾಗಿದೆ ಎಂದರು.ಸಮಾರಂಭ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲಿಂಗಯ್ಯ ಹಿರೇಮಠ, ಇಳಿವಯದಲ್ಲಿಯೂ ಅಪಾರ ವಿಮರ್ಶಾ ಹಾಗೂ ಸೃಜನಶೀಲ ಸಾಹಿತ್ಯದ ದೊಡ್ಡ ಕೊಡುಗೆ ನೀಡಿದ ಆಮೂರ ಅವರು ನಾಟಕ ಹಾಗೂ ಕಾದಂಬರಿ ಕ್ಷೇತ್ರದ ವಿಮರ್ಶೆಯಲ್ಲಿ ಅಚ್ಚಳಿಯದ ಹೆಸರು ಮಾಡಿದ್ದಾರೆ. ಅವರ ಶತಮಾನೋತ್ಸವ ಸಂದರ್ಭದಲ್ಲಿ ಅವರು ಹುಟ್ಟೂರಿನಲ್ಲಿಯೇ ಕಾರ್ಯಕ್ರಮ ನಡೆಸುತ್ತಿರುವುದು ಅತ್ಯಂತ ಹರ್ಷದಾಯಕ ಸಂಗತಿ. ಅವರ ಸಾಹಿತ್ಯದ ಓದು ಮನೆಮಾತಾಗಬೇಕು ಎಂದರು.ಸಾಹಿತಿ ಚನ್ನಪ್ಪ ಅಂಗಡಿ ಮಾತನಾಡಿ, ಬಡತನವನ್ನು ನುಂಗಿ, ಕಷ್ಟಗಳನ್ನು ನೀಗಿ, ನೂರು ಕೃತಿಗಳ ಸರದಾರರಾಗಿ, ವಿದ್ವತ್‌ಪೂರ್ಣ ವಿಚಾರ ವಾದದ ವ್ಯಕ್ತಿತ್ವ ಹೊಂದಿದ ಆಮೂರ ಅವರ ಸಾಹಿತ್ಯ ಸಾಧನೆ ವಿಶ್ವವಿಖ್ಯಾತವಾದುದು. ಸಮತೋಲಿತ ಸಾಹಿತ್ಯ ವಿಮರ್ಶಕ ಬರೆದಂತೆ ಬದುಕಿದ ಆಮೂರ ಸಾಹಿತ್ಯ ಭುವನದ ಭಾಗ್ಯ. ವಿಮರ್ಶೆಯನ್ನು ಬಿತ್ತಿ ಬೆಳೆದ ಕೀರ್ತಿ ಅವರದು ಎಂದರು.ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿ, ಸೃಜನಶೀಲತೆಗೆ ಸತ್ವ ತಂದುಕೊಟ್ಟ ಜಿ.ಎಸ್. ಆಮೂರ ಅವರು ಅಪಾರ ಅಧ್ಯಯನದ ಮೂಲಕ ಎತ್ತರಕ್ಕೆ ಬೆಳೆದವರು. ಮಾನವೀಯ ಪ್ರೀತಿಯ ಬರಹಗಾರರಾಗಿ ಅತ್ಯಂತ ನಿಷ್ಠುರ, ಸಮಯ ಪ್ರಜ್ಞೆಯಿಂದ ಸಾಹಿತ್ಯ ಲೋಕದಲ್ಲಿ ಬೆಳಗಿದವರು ಎಂದರು.ಹಿರಿಯ ಸಾಹಿತಿ ಪ್ರೊ. ಮಾರುತಿ ಶಿಡ್ಲಾಪೂರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಸರ್ಕಾರದ ನಿವೃತ್ತ ಕಾರ್ಯದರ್ಶಿ ಬಿ.ಎ. ಕುಲಕರ್ಣಿ, ಧಾರವಾಡದ ಹಿರಿಯ ಸಾಹಿತಿ ಶ್ರೀನಿವಾಸ ವಾಡಪ್ಪಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಿರೀಶ ಪದಕಿ, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ಸಾಲಿಮಠ, ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕ ಎಸ್.ಬಿ. ಬಿಂಗೇರಿ, ಪದ್ಮನಾಭ ಕುಂದಾಪೂರ, ಮುಖ್ಯೋಪಾಧ್ಯಾಯ ಹರೀಶ ನಾಯಕ, ಆರ್.ಎಂ. ಜೋಶಿ, ಶಿವಾನಂದ ಕ್ಯಾಲಕೊಂಡ, ಎಸ್.ವಿ. ಹೊಸಮನಿ, ಅಣ್ಣಬಸವ ನೆಲವಿಗಿ, ಜೀವರಾಜ ಛತ್ರದ, ಬಿ.ಎಸ್. ಕರಿಯಣ್ಣನವರ, ನರಸಿಂಹ ಕೋಮಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ]

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ