ವಿವಿಗಳಿಗೆ ಬೋಧಕ ಸಿಬ್ಬಂದಿ ನೇಮಕ ಪ್ರಕ್ರಿಯೆ ಶೀಘ್ರ ಆರಂಭ

KannadaprabhaNewsNetwork | Published : Jan 19, 2025 2:16 AM

ಸಾರಾಂಶ

ಸಂಗೀತ ವಿವಿ ಆರಂಭವಾಗಿ 17 ವರ್ಷವಾದರೂ ಸೌಲಭ್ಯದ ಕೊರತೆ ಎದುರಿಸುತ್ತಿದೆ.

ಕನ್ನಡಪ್ರಭ ವಾರ್ತೆ ಮೈಸೂರುಸಂಗೀತ ವಿವಿ ಸೇರಿದಂತೆ ಎಲ್ಲಾ ವಿಶ್ವವಿದ್ಯಾನಿಲಯಗಳ ಬೋಧಕ ಸಿಬ್ಬಂದಿ ನೇಮಕವನ್ನು ಹಂತ ಹಂತವಾಗಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್‌ ಹೇಳಿದರು.ನಗರದ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿಯಲ್ಲಿ ಶನಿವಾರ ಆಯೋಜಿಸಿದ್ದ 7, 8 ಮತ್ತು 9ನೇ ಸಾಲಿನ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಗೀತ ವಿವಿ ಆರಂಭವಾಗಿ 17 ವರ್ಷವಾದರೂ ಸೌಲಭ್ಯದ ಕೊರತೆ ಎದುರಿಸುತ್ತಿದೆ. ಕರ್ನಾಟಕದಲ್ಲಿನ ಸಂಗೀತ ವಿವಿ, ಸಂಸ್ಕೃತ ವಿವಿ, ಜಾನಪದ ವಿವಿ ಮತ್ತು ಕನ್ನಡ ವಿವಿಗಳು ವಿಶೇಷವಾದ ಸ್ಥಾನ ಹೊಂದಿವೆ. ಈ ವಿವಿಗಳು ಬೆಳೆಯಲು ಸರ್ಕಾರದಿಂದ ವಿಶೇಷವಾದ ಪ್ರೋತ್ಸಾಹ ಸಿಗಬೇಕು. ಬೇರೆ ವಿವಿಗಳಲ್ಲಿ ಕೌಶಲ್ಯಾಧಾರಿತ ಶಿಕ್ಷಣ ನೀಡಬೇಕಾಗುತ್ತದೆ. ಆದರೆ ಸಂಗೀತ ಮತ್ತು ಪ್ರದರ್ಶಕ ಕಲೆಗಳಲ್ಲಿ ಪದವಿ ಪಡೆಯಲು ತಾವು ಪಡೆದ ಶಿಕ್ಷಣದ ಪ್ರದರ್ಶನ ನಡೆಯಲೇಬೇಕು ಎಂದರು.ಸಂಗೀತ ವಿವಿಯಲ್ಲಿ ಹಲವು ಸಂಸ್ಥೆಗಳು ಒಡಂಬಡಿಕೆ ಮಾಡಿಕೊಂಡು ಸಂಗೀತ ಮತ್ತು ಪ್ರದರ್ಶಕ ಕಲೆಗಳ ಶಿಕ್ಷಣ ನೀಡುತ್ತಿವೆ. ಈ ವಿವಿ ಮೂಲಕ ಹಲವು ಮಂದಿಯನ್ನು ಗುರುತಿಸುವ ಕೆಲಸ ಆಗುತ್ತಿದೆ. ಅನೇಕಾರು ಮಂದಿ ಯುವಕ, ಯುವತಿಯರಿಗೆ ಪ್ರೋತ್ಸಾಹ ನೀಡುವ ಉತ್ತಮ ವೇದಿಕೆಯಾಗಿದೆ. ಆದರೆ ಇಂತಹ ಪ್ರತಿಷ್ಠಿತ ಮತ್ತು ವಿಶಿಷ್ಟ ವಿವಿಗೆ ತನ್ನದೇ ಆದ ಆರ್ಥಿಕ ಸಂಪನ್ಮೂಲ ಕ್ರೂಢೀಕರಿಸಿಕೊಳ್ಳಲು ಶಕ್ತಿ ಇಲ್ಲದಂತಾಗಿದೆ. ಇದಕ್ಕೆ ಹೆಚ್ಚಿನ ಆರ್ಥಿಕ ಪ್ರೋತ್ಸಾಹ ನೀಡಬೇಕು. ಏಕೆಂದರೆ ಇತ್ತೀಚೆಗೆ ಪಾಶ್ಚಾತ್ಯ ಸಂಸ್ಕೃತಿಗೆ ಹೆಚ್ಚು ಮಂದಿ ಆಕರ್ಷಿತರಾಗುತ್ತಿದ್ದಾರೆ. ಆ ಮೂಲಕ ಮಕ್ಕಳ ಗಮನ ಬೇರೆಕಡೆ ಹೋಗುವ ವಾತಾವರಣ ಇದೆ. ಆದ್ದರಿಂದ ನಾವು ಪ್ರಾಚೀನ ಕಲೆ ಉಳಿಸಲು ಪ್ರಯತ್ನ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.ವಿವಿಯ ಪ್ರಸ್ತುತ ಕುಲಪತಿ ನಾಗೇಶ್ವಿ. ಬೆಟ್ಟಕೋಟೆ ಅವರ ಅವಧಿಯಲ್ಲಿ ಸಾಧ್ಯವಾದಷ್ಟು ಪ್ರಯತ್ನಿಸಿದ್ದಾರೆ. ಮುಂದೆ ಯಾರನ್ನು ಆಯ್ಕೆ ಮಾಡಬೇಕು ಎಂಬ ಗೊಂದಲವಿದೆ. ಅರ್ಹರಿಗೆ ಮಾತ್ರ ಈ ಅವಕಾಶ ದೊರಕಲಿದೆ ಎಂದು ಅವರು ಹೇಳಿದರು.ಸಂಗೀತ ವಿವಿಯಲ್ಲಿ ಪುರುಷರು ಹೆಚ್ಚಾಗಿ ಚಿನ್ನದ ಪದಕ ಪಡೆದು ಪುರುಷರ ಮರ್ಯಾದೆ ಉಳಿಸಿದ್ದಾರೆ. ಮೈಸೂರು ವಿವಿ ಘಟಿಕೋತ್ಸವದಲ್ಲಿ ಹೆಚ್ಚಾಗಿ ಹೆಣ್ಣು ಮಕ್ಕಳೇ ಚಿನ್ನದ ಪದಕಗಳಿಸಿದ್ದಾರೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

Share this article