ಕನ್ನಡಪ್ರಭ ವಾರ್ತೆ ಮೈಸೂರು
ಸರ್ವಜನಾಂಗದ ಶಾಂತಿಯ ತೋಟ ನಿರ್ಮಿಸುವುದು ಕುವೆಂಪು ಅವರ ಆಶಯವಾಗಿತ್ತು. ಮನುಜ ಮತ, ವಿಶ್ವಪಥ ಎಂಬ ಅವರ ಚಿಂತನೆಯನ್ನು ನಮ್ಮ ಯುವಸಮೂಹ ತುರ್ತಾಗಿ ಅಳವಡಿಸಿಕೊಳ್ಳಬೇಕು ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಕರೆ ನೀಡಿದರು.ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಟಿ. ನರಸೀಪುರ ತಾಲೂಕು ಬನ್ನೂರು ಹೋಬಳಿಯ ಯಾಚೇನಹಳ್ಳಿಯಲ್ಲಿ 1.50 ಕೋಟಿ ರೂ. ವೆಚ್ಚದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಚಿತಾಭಸ್ಮ ಸ್ಮಾರಕ ಭವನ ನಿರ್ಮಾಣಕ್ಕೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಬುದ್ಧ, ಬಸವ, ಅಂಬೇಡ್ಕರ್ ಸಾಲಿನಲ್ಲಿ ಮೇರು ವ್ಯಕ್ತಿತ್ವವುಳ್ಳ ಕುವೆಂಪು ಅವರನ್ನು ನೋಡಬೇಕಿದ್ದು ಕುವೆಂಪು ಅವರ ಚಿಂತನೆ ಎಲ್ಲರಿಗೂ ಅಗತ್ಯವಿದೆ ಎಂದು ಹೇಳಿದರು.ವೈಚಾರಿಕತೆ, ವೈಜ್ಞಾನಿಕತೆ ನೆಲೆಗಟ್ಟಿನಲ್ಲಿ ನಿರ್ಮಿಸಲಾಗುತ್ತಿರುವ ರಾಷ್ಟ್ರಕವಿ ಕುವೆಂಪು ಅವರ ಚಿತಾಭಸ್ಮ ಸ್ಮಾರಕ ಭವನದಲ್ಲಿ ಉತ್ಕೃಷ್ಟ ಚಿಂತನೆಗಳು ಹಾಗೂ ಕಾರ್ಯಕ್ರಮಗಳು ಜರುಗಲಿ. ಈ ಭಾಗದಿಂದ ರಾಜ್ಯದ ಉದ್ದಗಲಕ್ಕೂ ಪಸರಿಸಲಿ ಎಂದರು.ಬೌದ್ಧಿಕವಾಗಿ ನಾವು ಎಚ್ಚರವಾಗದಿದ್ದರೆ ಶ್ರೇಣಿಕೃತ ವ್ಯಸಸ್ಥೆಯಲ್ಲಿ ಪಾತಾಳಕ್ಕೆ ತಳ್ಳಲಿದ್ದಾರೆ. ಕುವೆಂಪು ಅವರ ವಿಚಾರಧಾರೆ ಜೀವಂತ ಉಳಿಸಿ ಶೂದ್ರ ಸಮಾಜವನ್ನು ಕತ್ತಲಿನಿಂದ ಬೆಳಕಿಗೆ ಕರೆ ತಂದು, ವಿಶ್ವಮಾನವರನ್ನು ಸೃಷ್ಟಿ ಮಾಡುವ ಮೂಲಕ ಮನುಷ್ಶ ಸಮಾಜ ಉಳಿಸಲು ಈ ಕ್ಷೇತ್ರ ಪ್ರೇರಣೆಯಾಗಲಿ ಎಂದು ಅವರು ಹೇಳಿದರು.ಇದೇ ವೇಳೆ ಕೃಷಿ ಇಲಾಖೆ ವತಿಯಿಂದ ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಭತ್ತವನ್ನು ಸಾಂಕೇತಿಕವಾಗಿ ಸಚಿವರು ವಿತರಿಸಿದರು.ಸಂಸದ ಸುನಿಲ್ ಬೋಸ್, ಚಿಂತಕ ಪ್ರೊ.ಕೆ.ಎಸ್. ಭಗವಾನ್, ಯಾಚೇನಹಳ್ಳಿ ಗ್ರಾಪಂ ಅಧ್ಯಕ್ಷ ಶಿವಕುಮಾರ್, ಸದಸ್ಯರಾದ ಶೇಖರ್, ಸರೋಜಮ್ಮ, ಮಾಜಿ ಶಾಸಕಿ ಸುನಿತಾ ವೀರಪ್ಪಗೌಡ, ಮೈಮುಲ್ ನಿರ್ದೇಶಕ ಚಲುವರಾಜು, ರಾಮಕೃಷ್ಣ ಸೇವಾ ಕೇಂದ್ರದ ವ್ಯವಸ್ಥಾಪಕ ಟ್ರಸ್ಟಿ ನಾಗಾಂದನಾಥ ಸ್ವಾಮೀಜಿ, ನಿವೇಶನ ದಾನ ಮಾಡಿದ ವೈ.ಎನ್. ಶಂಕರೇಗೌಡ, ಮುಖಂಡರಾದ ವಜ್ರೇಗೌಡ, ಮುನಾವರ್ ಪಾಷ, ವೀಣಾ ಶಿವಕುಮಾರ್, ಚನ್ನಕೇಶವ ಮೊದಲಾದವರು ಇದ್ದರು.