ಕಲ್ಯಾಣ ಕ್ರಾಂತಿಯ ಬಳಿಕ ಕಣ್ಮರೆಯಾದ ವಚನ ಸಾಹಿತ್ಯವನ್ನು ಸಂಗ್ರಹಿಸುವಲ್ಲಿ ಡಾ. ಫ.ಗು. ಹಳಕಟ್ಟಿ ಅವರ ಕಾರ್ಯ ಅವಿಸ್ಮರಣೀಯ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಮೂರ್ತಿ ಹೇಳಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಕಲ್ಯಾಣ ಕ್ರಾಂತಿಯ ಬಳಿಕ ಕಣ್ಮರೆಯಾದ ವಚನ ಸಾಹಿತ್ಯವನ್ನು ಸಂಗ್ರಹಿಸುವಲ್ಲಿ ಡಾ. ಫ.ಗು. ಹಳಕಟ್ಟಿ ಅವರ ಕಾರ್ಯ ಅವಿಸ್ಮರಣೀಯ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಮೂರ್ತಿ ಹೇಳಿದರು.
ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಗುರುವಾರ ನಗರದ ಗಾಂಧಿ ಭವನದಲ್ಲಿ ನಡೆದ ಡಾ. ಫ.ಗು. ಹಳಕಟ್ಟಿಯವರ ಜನ್ಮದಿನಾಚರಣೆ (ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ) ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ವಚನ ಸಾಹಿತ್ಯವು 12ನೇ ಶತಮಾನದ ಶರಣರ ಚಿಂತನೆ, ಸಮಾನತೆ, ಕಾಯಕ ಮತ್ತು ದಾಸೋಹ ತತ್ವಗಳ ಭಂಡಾರವಾಗಿದೆ. ವಿದ್ಯಾರ್ಥಿಗಳು ವಚನಗಳನ್ನು ಮೈಗೂಡಿಸಿಕೊಳ್ಳಬೇಕು. ದಿನಕ್ಕೆ ಒಂದು ವಚನಗಳನ್ನಾದರೂ ಕಲಿತು ಅದರ ಮೆರುಗನ್ನು ಬದುಕಿನಲ್ಲಿ ಅನುಸರಿಸಬೇಕು ಎಂದು ಸಲಹೆ ನೀಡಿದರು.
ಡಾ. ಫ.ಗು. ಹಳಕಟ್ಟಿ ಅವರು ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ವಚನ ಸಾಹಿತ್ಯದ ಅಧ್ಯಯನದಿಂದ ಅರಿವು ಜಾಗೃತಗೊಂಡು, ಬೆಳಕು ಮೂಡುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷರಾದ ಶಿವಪ್ಪ ಅವರು, ಬಸವಾದಿ ಶರಣರು ರಚಿಸಿದ ವಚನಗಳು ಜಗತ್ತಿನಲ್ಲಿಯೇ ವಿಶಿಷ್ಟ ಹಾಗೂ ಅನನ್ಯ ಸಾಹಿತ್ಯವಾಗಿದೆ. 12ನೇ ಶತಮಾನದ ಶರಣರ ಪ್ರಮುಖ ವಚನಗಳನ್ನು ತಾಳೆಗರಿಗಳಿಂದ ಕಷ್ಟಪಟ್ಟು ಸಂಗ್ರಹಿಸಿ, ಸಂಪಾದಿಸಿ ಇಂದಿನ ಪೀಳಿಗೆಗೆ ತಲುಪಿಸಿದ ಡಾ. ಫ.ಗು. ಹಳಕಟ್ಟಿ ಅವರ ಅಪಾರ ಸೇವೆಯನ್ನು ಸ್ಮರಿಸಿದರು. ಅವರ ನಿರಂತರ ಪರಿಶ್ರಮವಿಲ್ಲದಿದ್ದರೆ ಇತಿಹಾಸದ ಅಮೂಲ್ಯ ವಚನ ಸಂಪತ್ತು ನಮಗೆ ಸಿಗುತ್ತಿರಲಿಲ್ಲ ಎಂದು ಹಳಕಟ್ಟಿಯವರ ಕಾರ್ಯವೈಖರಿಯನ್ನು ಶ್ಲಾಘಿಸಿದರು.
ವಚನಗಳಲ್ಲಡಗಿರುವ ಜಾತ್ಯತೀತ ಹಾಗೂ ಸಮಾನತೆಯ ಸಂದೇಶವನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಸಾಪ ಕುಶಾಲನಗರ ಹೋಬಳಿ ಅಧ್ಯಕ್ಷ ಎಂ.ಎಸ್. ಮೂರ್ತಿ ಅವರು ಉಪನ್ಯಾಸ ನೀಡಿ, ಬಸವಾದಿ ಶರಣರ ವಚನಗಳನ್ನು ಆಧುನಿಕ ಕಾಲದಲ್ಲಿ ಜನಮನಕ್ಕೆ ತಲುಪಿಸಿದ ಕೀರ್ತಿ ಹಳಕಟ್ಟಿ ಅವರಿಗೆ ಸಲ್ಲುತ್ತದೆ. ಫ.ಗು. ಹಳಕಟ್ಟಿ ಅವರು ಕನ್ನಡದ ಸಾರಸತ್ವ ಲೋಕದ ಅಪ್ರತಿಮ ಸಂಶೋಧಕರು, ವಿದ್ವಾಂಸರು, ವಕೀಲರು ಹಾಗೂ ಸಹಕಾರ ಚಳವಳಿಯ ಪ್ರವರ್ತಕರು ಆಗಿದ್ದರು. 12ನೇ ಶತಮಾನದ ಸಾಮಾಜಿಕ ಕ್ರಾಂತಿಯ ಮಹತ್ವ ಹೆಚ್ಚು ಜನರಿಗೆ ತಿಳಿಯಿತು ಎಂದರು.
ಕಾರ್ಯಕ್ರಮದಲ್ಲಿ ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಂಗೀತ ಶಿಕ್ಷಕ ಪುಟ್ಟರಾಜು ವಚನ ಗಾಯನ ಹಾಡಿದರು. ಮಡಿಕೇರಿ ತಾಲೂಕು ಕದಳಿ ವೇದಿಕೆ ಅಧ್ಯಕ್ಷೆ ವಿಜಯಲಕ್ಷ್ಮಿ, ಮಡಿಕೇರಿ ತಾಲೂಕು ಶಿರಸ್ತೇದಾರ ದೇವರಾಜು, ಕುಶಾಲನಗರ ಸೌಹಾರ್ಧ ಸಹಕಾರ ಸಂಘದ ಅಧ್ಯಕ್ಷ ಶಾಂಭಶಿವಮೂರ್ತಿ, ಬ್ಲಾಸಂ ಶಾಲೆ ಶಿಕ್ಷಕಿ ಸರೀನ, ವಿದ್ಯಾರ್ಥಿಗಳು ಇದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಸ್ವಾಗತಿಸಿದರು. ಮಣಜೂರು ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು. ಬ್ಲಾಸಂ ಶಾಲೆ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.