ಮಹದೇವಪ್ಪ ನಿಜವಾಗಿಯೂ ಸಂವಿಧಾನಕ್ಕೆ ಅಪಚಾರವೆಸಗಿದ್ದಾರೆ: ಬಾಲರಾಜು

KannadaprabhaNewsNetwork |  
Published : Apr 19, 2024, 01:15 AM ISTUpdated : Apr 19, 2024, 10:03 AM IST
53 | Kannada Prabha

ಸಾರಾಂಶ

 ಅಂಬೇಡ್ಕರ್ ಅವರನ್ನು ಸೋಲಿಸಿ ಅವಮಾನಗೊಳಿಸಿದ್ದ ಕಾಂಗ್ರೆಸ್ ಸಂವಿಧಾನಾತ್ಮಕವಾಗಿ ಎಸ್ಸಿ, ಎಸ್ಟಿಗೆ ಖರ್ಚು ಮಾಡಬೇಕಿದ್ದ 25 ಸಾವಿರ ಕೋಟಿ ವಿಶೇಷ ಘಟಕ ಯೋಜನೆಯ ಅನುದಾನವನ್ನು ಗ್ಯಾರೆಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳುವ ಮೂಲಕ ಎಸ್ಸಿ, ಎಸ್ಟಿಗಳಿಗೆ ಅನ್ಯಾಯವೆಸಗಿದೆ.

  ನಂಜನಗೂಡು :  ಸಂವಿಧಾನದ ಪೀಠಿಕೆ, ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಸಮಾಜ ಕಲ್ಯಾಣ ಸಚಿವರು ಡಾ.ಎಚ್.ಸಿ. ಮಹದೇವಪ್ಪ ಎಸ್ಸಿ, ಎಸ್ಟಿ ಅನುದಾನವನ್ನು ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡರೂ ಕೂಡ ಪ್ರಶ್ನೆ ಮಾಡದೆ ನಿಜವಾಗಿಯೂ ಸಂವಿಧಾನಕ್ಕೆ ಅಪಚಾರವೆಸಗಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಎಸ್. ಬಾಲರಾಜು ವಾಗ್ದಾಳಿ ನಡೆಸಿದರು.

ತಾಲೂಕಿನ ವರುಣ ಕ್ಷೇತ್ರ ವ್ಯಾಪ್ತಿಯ ತಗಡೂರು, ಹದಿನಾರು, ಹೊಸಕೋಟೆ, ತಾಂಡವಪುರದ ಏಚಗಳ್ಳಿ ಮಹಾಶಕ್ತಿ ಕೇಂದ್ರದಲ್ಲಿ ಮತಪ್ರಚಾರ ನಡೆಸಿ ಅವರು ಮಾತನಾಡಿದರು.

ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಗೌರವಿಸಿದ್ದಲ್ಲದೆ, ಸಂವಿಧಾನವನ್ನು ಸಧೃಡಗೊಳಿಸುವ ಕೆಲಸ ಮಾಡಿದೆ. ಅಂಬೇಡ್ಕರ್ ಅವರನ್ನು ಸೋಲಿಸಿ ಅವಮಾನಗೊಳಿಸಿದ್ದ ಕಾಂಗ್ರೆಸ್ ಸಂವಿಧಾನಾತ್ಮಕವಾಗಿ ಎಸ್ಸಿ, ಎಸ್ಟಿಗೆ ಖರ್ಚು ಮಾಡಬೇಕಿದ್ದ 25 ಸಾವಿರ ಕೋಟಿ ವಿಶೇಷ ಘಟಕ ಯೋಜನೆಯ ಅನುದಾನವನ್ನು ಗ್ಯಾರೆಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳುವ ಮೂಲಕ ಎಸ್ಸಿ, ಎಸ್ಟಿಗಳಿಗೆ ಅನ್ಯಾಯವೆಸಗಿದೆ. ಜೊತೆಗೆ ಸಮಾಜ ಕಲ್ಯಾಣ ಸಚಿವರು ಅಂಬೇಡ್ಕರ್ ಮತ್ತು ಸಂವಿಧಾನದ ಆಶಯಗಳಿಗೆ ಧಕ್ಕೆ ತಂದಿದ್ದಾರೆ. ಸಂವಿಧಾನ, ಪ್ರಜಾಪ್ರಭುತ್ವ ಬರೀ ಮಾತಿನಲ್ಲಿದ್ದರೆ ಸಾಲದು ದಲಿತರ ಏಳಿಗೆಗಾಗಿ ದುಡಿಯುವ ತುಡಿತ ಹೃದಯಾಂತರಾಳದಲ್ಲಿರಬೇಕು ಎಂದು ಟೀಕಿಸಿದರು.

ಸೋಲಿನ ಹತಾಶೆಯಿಂದ ವಿಚಲಿತರಾದ ಕಾಂಗ್ರೆಸ್ ಅಪಪ್ರಚಾರದಲ್ಲಿ ತೊಡಗಿದೆ. ಒಬ್ಬ ಮಂತ್ರಿ ಮಗ ಸೋತರೂ ಕೂಡ ಮಂತ್ರಿಮಗನಾಗಿಯೇ ಮುಂದುವರೆಯುತ್ತಾನೆ. ಅವರೇನು ಭತ್ತ ಕಟಾವು ಮಾಡಿ ದುಡ್ಡು ತಂದು ರಾಜಕಾರಣ ಮಾಡುತ್ತಿಲ್ಲ. ಆದರೆ ಒಬ್ಬ ಬಡವನಿಗೆ ನಿಜವಾಗಿ ರಾಜಕೀಯ ಶಕ್ತಿ ಬೇಕಿದೆ, ಆದ್ದರಿಂದ ಈ ಅಪಪ್ರಚಾರಕ್ಕೆ ತಲೆಕೊಡದೆ ನನ್ನನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಬೇಕು. ನನಗೆ ಅಧಿಕಾರ ಸಿಕ್ಕಿದಲ್ಲಿ ಕ್ಷೇತ್ರದಲ್ಲಿ ಶಾಸಕರಿಲ್ಲ ಎಂಬ ಕೊರೆತೆ ನೀಗಿಸಿ ಕೆಲಸ ಮಾಡುತ್ತೇನೆ ಎಂದರು.

ಮುಖಂಡರಾದ ಹದಿನಾರು ಗುರುಪಾದಸ್ವಾಮಿ ಮಾತನಾಡಿ, ಕಾಂಗ್ರೆಸ್ ನಲ್ಲಿದ್ದ ವೇಳೆ ನನ್ನ ಸ್ವಂತ ಹಣ ಹಾಕಿ ದುಡಿದು ಸಿದ್ದರಾಮಯ್ಯರ ಗೆಲುವಿಗೆ ಶ್ರಮಿಸಿದ್ದೇನೆ. ಅವರಿಂದ 5 ರು. ಪ್ರಯೋಜನವನ್ನೂ ಪಡೆದುಕೊಂಡಿಲ್ಲ, ಈಗ ರಾಜಶೇಖರಮೂರ್ತಿ ನಂತರ ಲಿಂಗಾಯತ ಸಮಾಜಕ್ಕೆ ಬಿ.ವೈ. ವಿಜಯೇಂದ್ರರಂತಹ ಪ್ರಬಲ ನಾಯಕ ಸಿಕ್ಕಿದ್ದಾರೆ. ಅವರ ಕೈ ಬಲಪಡಿಸಲು ಮತ್ತು ಬಾಲರಾಜು ಅವರ ಗೆಲುವಿಗೆ ನನ್ನ ಅಳಿಲು ಸೇವೆ ಮಾಡಬೇಕೆಂಬ ಉದ್ದೇಶದಿಂದ ಯಾವುದೇ ಅಪೇಕ್ಷೆ ಇಲ್ಲದೆ ಬಿಜೆಪಿ ಸೇರ್ಪಡೆಯಾಗಿದ್ದೇನೆ ವರುಣ ಕ್ಷೇತ್ರದಲ್ಲಿ ಶೇ. 25 ರಷ್ಟು ಕುರುಬರು, ಹಿಂದುಳಿದವರು ಮತ್ತು ಮುಸ್ಲಿಂಮರು ಕೂಡ ಬಿಜೆಪಿ ಪರವಾಗಿ ಮತಚಲಾಯಿಸಲು ಉತ್ಸುಕರಾಗಿದ್ದಾರೆ ಎಂದರು.

ನಗರ್ಲೆ ಗ್ರಾಮದ ಮುಸ್ಲಿಂ ಬಾಂಧವರು ಮತ್ತು ಉಪ್ಪಾರ ಸಮುದಾಯದ ನೂರಾರು ಮುಖಂಡರು ಕಾಂಗ್ರೆಸ್ ಸೇರ್ಪಡೆಯಾದರು.

ಕಾಂಪೋಸ್ಟ್ ನಿಗಮ ಮಾಜಿ ಅಧ್ಯಕ್ಷ ಎಸ್. ಮಹದೇವಯ್ಯ, ಜಿಪಂ ಮಾಜಿ ಅಧ್ಯಕ್ಷ ಸಿದ್ದವೀರಪ್ಪ, ಮಾಜಿ ಸದಸ್ಯ ಸದಾನಂದ, ಬಿಜೆಪಿ ಅಧ್ಯಕ್ಷ ಸತೀಶ್, ಮುಖಂಡರಾದ ಮಹೇಶ್, ಸಿ.ಎಂ. ಮಹದೇವಯ್ಯ, ಶರತ್ ಪುಟ್ಟಬುದ್ದಿ, ಶಿವಯ್ಯ, ವಿಜಯಕುಮಾರ್, ನಗರ್ಲೆ ಮಹದೇವಸ್ವಾಮಿ, ಮಂಜುನಾಥ್ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ