ಕನ್ನಡಪ್ರಭ ವಾರ್ತೆ ಇಂಡಿ
ಸರ್ಕಾರಗಳು ಮಾಡಲಾಗದ ಸಾಧನೆಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗಳ ಮೂಲಕ ಸಾಕಾರ ಗೊಳಿಸುತ್ತಿರುವ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗಡೆಯವರ ದೂರದೃಷ್ಟಿತ್ವ ದೇಶಕ್ಕೆ ಮಾದರಿ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.ಪಟ್ಟಣದ ಶ್ರೀ ಕಾಳಿಕಾದೇವಿ ದೇವಸ್ಥಾನ ಸಭಾ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವಿಜಯಪುರ ಜಿಲ್ಲೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಹಯೋಗದೊಂದಿಗೆ ಗಾಂಧಿ ಜಯಂತಿ ಸಂಭ್ರಮಾಚರಣೆ ಪ್ರಯುಕ್ತ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಬೃಹತ್ ಜನಜಾಗೃತಿ ಜಾಥಾ ಮತ್ತು ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ಮೂಲಕ ಹಮ್ಮಿಕೊಳ್ಳುತ್ತಿರುವ ಮದ್ಯವರ್ಜನ ಶಿಬಿರಗಳು ಕತ್ತಲೆ ತುಂಬಿದ್ದ ನೂರಾರು ಕುಟುಂಬಗಳಲ್ಲಿ ಬೆಳಕು ಚೆಲ್ಲಿ, ನೆಮ್ಮದಿಯ ಜೀವನ ನಡೆಸುವಲ್ಲಿ ಸಹಕಾರಿಯಾಗಿದೆ. ಗಾಂಧೀಜಿಯವರ ಆಶಯದಂತೆ ಪಾನಮುಕ್ತ ಸಮಾಜಕ್ಕೆ ಶ್ರಮಿಸುತ್ತಿರುವ ಸಂಸ್ಥೆ ಕಾರ್ಯ ಶ್ಲಾಘನೀಯ ಎಂದರು.ಸಾಮಾಜಿಕ, ಆರ್ಥಿಕ ಪ್ರಗತಿಗೆ ಹಾಗೂ ಮಹಿಳಾ ಸಬಲೀಕರಣಕ್ಕೆ ಶ್ರಮಿಸುತ್ತಿರುವ ಸಂಸ್ಥೆಯ ಅನೇಕ ಯೋಜನೆಗಳು ಪ್ರಶಂಸನೀಯ ವಾಗಿವೆ. ಅನೇಕ ಜನಪರ, ಬಡವರ ಮತ್ತು ರೈತಪರ ಯೋಜನೆ ರೂಪಿಸಿದ್ದು ಗೃಹಿಣಿಯರಿಗೆ ಸಾಲ, ಮಹಿಳಾ ಸ್ವಸಹಾಯ ಗುಂಪು ಮಾಡಿ ಅವರಿಗೆ ಸಾಲದ ರೂಪದಲ್ಲಿ ಆರ್ಥಿಕ ಸಹಾಯ ನೀಡುತ್ತಿದೆ. ಎಂದು ಹೇಳಿದರು.
ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಹಾಗೂ ಆರೋಗ್ಯ ಸೇರಿದಂತೆ ಸಮಾಜದ ಹಲವು ವಿಭಾಗಗಳಲ್ಲಿ ತನ್ನದೇ ಆದ ಸೇವೆ ನೀಡುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯ ವಿಶ್ವಕ್ಕೆ ಮಾದರಿಯಾಗಿದೆ. ದುಶ್ಚಟ ಮುಕ್ತ ಸಮಾಜಕ್ಕಾಗಿ ಮದ್ಯವರ್ಜನ ಶಿಬಿರಗಳನ್ನು ಆಯೋಜಿಸಿ ಸಮಾಜದ ಏಳಿಗೆಗೆ ಶ್ರಮಿಸುತ್ತಿರುವುದು ಹೆಮ್ಮೆಯ ವಿಷಯ. ಪೂಜ್ಯ ವೀರೇಂದ್ರ ಹೆಗಡೆ ಅವರು ಗ್ರಾಮೀಣ ಭಾಗದ ಜನಸಾಮಾನ್ಯರ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಅವರು ಸ್ವಾವಲಂಬಿಯಾಗಿ ಬದುಕಲು ಯೋಜನೆ ಮೂಲಕ ಸಮಾಜದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ ಎಂದು ಹೇಳಿದರು.ದೇಶ ಪ್ರಗತಿಯಾಗಬೇಕಾದರೆ ಗ್ರಾಮಗಳು ಪ್ರಗತಿಯಾಗಬೇಕು ಎಂಬುದು ಮಹಾತ್ಮ ಗಾಂಧೀಜಿಯವರ ಕಲ್ಪನೆ. ಅವರ ಆಶಯದಂತೆ ಧರ್ಮಾಧಿಕಾರಿಗಳು ಗ್ರಾಮೀಣ ಭಾಗದ ಜನ ಸ್ವಾವಲಂಬಿ ಬದುಕಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಸರ್ಕಾರ ಮಾಡಲಾರದ ಕೆಲಸ ಧರ್ಮಸ್ಥಳದಂತ ಸಂಸ್ಥೆಗಳು ಮಾಡುತ್ತಿವೆ. ವಿಶ್ವಾಸದ ಮೇಲೆ ಮಹಿಳೆಯರಿಗೆ ಸಾಲ ನೀಡುವ ಏಕೈಕ ಸಂಸ್ಥೆ ಧರ್ಮಸ್ಥಳ ಸಂಸ್ಥೆಯಾಗಿದೆ. ಎಲ್ಲಿಯವರೆಗೆ ವ್ಯಸನ ಮುಕ್ತ ಸಮಾಜ ಮಾಡಲು ಸಾಧ್ಯ ಆಗುವುದಿಲ್ಲವೊ ಅಲ್ಲಿಯವರೆಗೆ ಸಮಾಜ ಪರಿವರ್ತನೆ ಸಾಧ್ಯವಿಲ್ಲ. ವ್ಯಸನ ಮುಕ್ತ ಮಾಡುವುದು ಕೇವಲ ಸರ್ಕಾರದ ಕೆಲಸವಲ್ಲ. ನಾಗರಿಕ ಸಮಾಜದ ಕರ್ತವ್ಯವೂ ಆಗಿದೆ ಎಂದು ಹೇಳಿದರು.
ಉಪ ವಿಭಾಗಾಧಿಕಾರಿ ಅನುರಾಧಾ ವಸ್ತ್ರದ, ಜೆಡಿಎಸ್ ಮುಖಂಡ ಬಿ.ಡಿ.ಪಾಟೀಲ, ಅಧ್ಯಕ್ಷತೆ ವಹಿಸಿದ್ದ ನಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪುರ, ಧರ್ಮಸ್ಥಳ ಸಂಸ್ಥೆ ಕಲಬುರಗಿ ಪ್ರಾದೇಶಿಕ ನಿರ್ದೇಶಕ ದಿನೇಶ್ ಪೂಜಾರಿ ಮಾತನಾಡಿದರು. ಶ್ರೀ ಅಭಿನವ ಮುರಘೇಂದ್ರ ಶ್ರೀಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಪ್ರಕಾಶ ಬಿರಾದಾರ, ರುದ್ರಪ್ಪ ಪುಜಾರಿ, ನಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಭೀಮಣ್ಣ ಕವಲಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಯೋಗೆಪ್ಪ ಚನಗೊಂಡ, ಧರ್ಮಸ್ಥಳ ವಿಜಯಪುರ ಜಿಲ್ಲಾ ನಿರ್ದೇಶಕ ಸಂತೋಷ ಕುಮಾರ, ತಾಲೂಕು ಯೋಜನಾಧಿಕಾರಿ ನಟರಾಜ ಎಲ್.ಎಂ ಸೇರಿದಂತೆ ಸೇವಾ ಪ್ರತಿನಿಧಿಗಳು, ಸಂಘದ ಸದಸ್ಯರು ಇದ್ದರು. ಇದಕ್ಕೂ ಮುಂಚೆ ಜನಜಾಗೃತಿ ಜಾಥಾಕ್ಕೆ ಉಪ ವಿಭಾಗಾಧಿಕಾರಿ ಅನುರಾಧಾ ವಸ್ತ್ರದ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.