ವಿದೇಶದಲ್ಲಿಯೂ ಜಾನಪದದ ಕಂಪು ಹರಡಿದ ಡಾ. ಜೀವನಸಾಬ ಬಿನ್ನಾಳ

KannadaprabhaNewsNetwork | Published : Jan 31, 2025 12:49 AM

ಸಾರಾಂಶ

ಉತ್ತರ ಕರ್ನಾಟಕ ಜನಪದ ಜಾತ್ರೆ ಕಾರ್ಯಕ್ರಮದಲ್ಲಿ ಜಾನಪದ-ಜ್ಞಾನಪದ ವಿಷಯಕ್ಕೆ ಉಪನ್ಯಾಸ ನೀಡುವ ಮೂಲಕ ವಿದೇಶದಲ್ಲಿಯೂ ಜಾನಪದದ ಕಂಪನ್ನು ಹರಡಿದ್ದಾರೆ.

ಉತ್ತರ ಕರ್ನಾಟಕ ಜನಪದ ಜಾತ್ರೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಕಲಾವಿದಕನ್ನಡಪ್ರಭ ವಾರ್ತೆ ಕುಷ್ಟಗಿ

ಪಟ್ಟಣದ ಅಂತಾರಾಷ್ಟ್ರೀಯ ಜಾನಪದ ಕಲಾವಿದ ಡಾ. ಜೀವನಸಾಬ ಬಿನ್ನಾಳ ಓಮನ್ ರಾಜಧಾನಿ ಮಸ್ಕತ್ ನಗರದ ಎಂ.ಕೆ. ಫಾರಂ ಬರ್ಕಾದಲ್ಲಿ ಅಲ್ಲಿನ ಕನ್ನಡಿಗರ ಚಾಲುಕ್ಯ ಕೂಟದ ವತಿಯಿಂದ ಏರ್ಪಡಿಸಿದ್ದ ಉತ್ತರ ಕರ್ನಾಟಕ ಜನಪದ ಜಾತ್ರೆ ಕಾರ್ಯಕ್ರಮದಲ್ಲಿ ಜಾನಪದ-ಜ್ಞಾನಪದ ವಿಷಯಕ್ಕೆ ಉಪನ್ಯಾಸ ನೀಡುವ ಮೂಲಕ ವಿದೇಶದಲ್ಲಿಯೂ ಜಾನಪದದ ಕಂಪನ್ನು ಹರಡಿದ್ದಾರೆ.

ಜಾನಪದವು ಒಂದು ಪಾರಂಪರಿಕ ಜ್ಞಾನವಾಗಿ ತಲೆಮಾರಿನಿಂದ ತಲೆಮಾರಿಗೆ ಹರಡಿ ಬೆಳೆದು ಬಂದ ಗ್ರಾಮೀಣ ಸೊಗಡಾಗಿದೆ. ಜಾನಪದ ಸಾಹಿತ್ಯವು ಕನ್ನಡದ ಅಸ್ಮಿತೆಯಾಗಿ ಆವರಿಸಿದೆ. ಜಾನಪದವನ್ನು ಹೊರತುಪಡಿಸಿ ಕನ್ನಡ ಸಾಹಿತ್ಯ, ಸಂಸ್ಕೃತಿಯನ್ನು ಕಲ್ಪಿಸಿಕೊಳ್ಳಲು ಅಸಾಧ್ಯ. ಜಾನಪದರು ಕಲೆ, ಸಾಹಿತ್ಯ, ಕರಕುಶಲತೆ, ಕೃಷಿ, ವೈದ್ಯಪದ್ದತಿ, ಪ್ರದರ್ಶನಾತ್ಮಕ ಕಲೆಗಳು ಮುಂತಾದ ಕ್ಷೇತ್ರಗಳಲ್ಲಿ ತನ್ನದೇಯಾದ ಪಾಲನ್ನು ಉಳಿಸಿ ಈ ಕಾಲದ ಜನರಿಗೆ ಒಂದು ಜ್ಞಾನ ಪರಂಪರೆಯನ್ನಾಗಿ ರೂಪಿಸಲು ಶ್ರಮಿಸಿದರು. ಜಾನಪದವನ್ನು ಒಂದು ಜ್ಞಾನದ ಶಾಖೆಯಾಗಿ ಅಧ್ಯಯನ ಮಾಡಿ, ಜಾನಪದದ ಅತ್ಯುತ್ತಮ ಅಂಶಗಳನ್ನು ಅನ್ವಯಿಸಿಕೊಂಡು ಜನಮುಖಿಯಾಗಿಸುವ ಕೆಲಸ ಆಗಬೇಕಾಗಿದೆ ಎಂದು ಬಿನ್ನಾಳ ಹೇಳಿದರು.

ಈ ಮಸ್ಕತ್ ನಗರದಲ್ಲಿರುವ ಕನ್ನಡಿಗರು ಕಳೆದ 3 ವರ್ಷಗಳಿಂದ ಉತ್ತರ ಕರ್ನಾಟಕ ಜನಪದ ಜಾತ್ರೆ ಎಂಬ ವೈಶಿಷ್ಟ್ಯಪೂರ್ಣ ಕಾರ್ಯಕ್ರಮದ ಮೂಲಕ ತಾವು ಹುಟ್ಟಿ ಬೆಳೆದ ಕನ್ನಡ ನಾಡಿನ ಕಲೆ ಸಾಹಿತ್ಯ ಸಂಸ್ಕೃತಿಯನ್ನು ಮೆಲುಕು ಹಾಕುವ ಜೊತೆಗೆ ಆ ರಂಗದ ಸಾಧಕರನ್ನು ಆಹ್ವಾನಿಸಿ ವಿಶೇಷ ಉಪನ್ಯಾಸ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವ ಮೂಲಕ ಸಾಂಸ್ಕೃತಿಕ ಜೀವಂತಿಕೆ ಕಾಪಾಡಿಕೊಳ್ಳುವ ಕಾರ್ಯ ಮಾಡುತ್ತಿದ್ದಾರೆ ಎಂದರು.

ಕಲಾವಿದ ಸುರೇಶ ಕುಲಕರ್ಣಿ ಬಾರೋ ಸಾಧನಕೇರಿಗೆ ಎಂಬ ವಿಷಯದಲ್ಲಿ ಬೇಂದ್ರೆವರ ಬದುಕು-ಬರಹ, ಅವರೊಂದಿಗಿನ ಒಡನಾಟವನ್ನು ಮೆಲುಕು ಹಾಕಿದರು.

ಅರ್ಥಪೂರ್ಣ ಕಾರ್ಯಕ್ರಮ:

ಮಸ್ಕತ್ ಕನ್ನಡಿಗರು ಅತ್ಯಂತ ಸಂಭ್ರಮದಿಂದ ಉತ್ತರ ಕರ್ನಾಟಕ ಶೈಲಿಯ ಉಡುಪು ಧರಿಸಿ ಸಂಭ್ರಮಿಸಿದರು. ಹಾಡಿನ ಗೋಷ್ಠಿಯಲ್ಲಿ ಜನಪದ, ಗೀಗೀ ಪದ, ಸೋಬಾನೆ ಪದ, ಹಂತಿ ಪದ, ಬಿಸೋಕಲ್ಲಿನ ಪದಗಳನ್ನು ಹಾಡಿ ಕುಣಿದರು. ಚಹಾ, ಬಜ್ಜಿ, ಚುರುಮರಿ, ಗೋಧಿ ಹುಗ್ಗಿ, ಎಳ್ಳ ಹೊಳಿಗೆ, ಜೋಳದ ರೊಟ್ಟಿ ವೈವಿಧ್ಯಮಯ ಪಲ್ಲೆ, ಚಟ್ನಿಯ ಊಟದ ಮೂಲಕ ಅರ್ಥಪೂರ್ಣ ಕಾರ್ಯಕ್ರಮ ನೆರೆವೇರಿಸಿದರು.ಈ ಸಂದರ್ಭ ಚಾಲುಕ್ಯ ಕೂಟ ಬಳಗದ ಪ್ರಮುಖರಾದ ಮಹೇಶ ಪುರೋಹಿತ, ದಾಮೋದರ ಕಟ್ಟಿ, ಮಂಜುನಾಥ ಸಂಗಟಿ, ಪರಮೇಶ್ವರ ಛಬ್ಬಿ, ರಾಜು ಗುಡದಣ್ಣವರ, ಶಿವಯೋಗಿ ಜವಳಗದ್ದಿ, ಬಸವನಗೌಡ ಬಿರಾದಾರ, ಶ್ರೀಕಾಂತ್ ಧರಣೆಪ್ಪಗೌಡ್ರ, ಶಿವಕುಮಾರ್ ಕೆಂಚನಗೌಡ್ರು, ಅಮರೇಶ ವಟಗಲ್ಲ, ರವಿಕುಮಾರ್ ಪಾಟೀಲ್, ಕನ್ನಡ ಸಂಘದ ಅಧ್ಯಕ್ಷ ಪ್ರಸಾದ್ ಮುಂತಾದವರಿದ್ದರು.

Share this article