ಮಹಾತ್ಮರ ಸಂಕಲ್ಪ ಶಾಶ್ವತವಾದುದು

KannadaprabhaNewsNetwork |  
Published : Aug 07, 2024, 01:34 AM IST
46 | Kannada Prabha

ಸಾರಾಂಶ

ವಿಜಯನಗರ ಸಾಮ್ರಾಜ್ಯದ ಇಮ್ಮಡಿ ದೇವರಾಯನ ದಂಡನಾಯಕನಾಗಿದ್ದ ಲಕ್ಕಣ್ಣ ದಂಡೇಶ ಮಹಾನ್ ಶಿವಭಕ್ತನಾಗಿದ್ದನು.

ಕನ್ನಡಪ್ರಭ ವಾರ್ತೆ ಮೈಸೂರು

ಮಹಾತ್ಮರು ಕೈಗೊಳ್ಳುವ ಸಂಕಲ್ಪಗಳು ಸದಾ ಶಾಶ್ವತವಾಗಿ ಉಳಿಯುವಂಥವು ಎಂದು ವಿಶ್ರಾಂತ ಪ್ರಾಧ್ಯಾಪಕ ಡಾ. ಕೆ. ಅನಂತರಾಮು ಹೇಳಿದರು.

ನಗರದ ಶ್ರೀ ಸುತ್ತೂರು ಮಠದಲ್ಲಿ ಮಂಗಳವಾರ ಶ್ರಾವಣ ಮಾಸದ 2ನೇ ದಿನ ಲಕ್ಕಣ್ಣ ದಂಡೇಶ ವಿರಚಿತ ಶಿವತತ್ತ್ವ ಚಿಂತಾಮಣಿ ಕುರಿತು ನೀಡಿದ ಪ್ರವಚನದಲ್ಲಿ ಅವರು ತಿಳಿಸಿದರು.

ವಿಜಯನಗರ ಸಾಮ್ರಾಜ್ಯದ ಇಮ್ಮಡಿ ದೇವರಾಯನ ದಂಡನಾಯಕನಾಗಿದ್ದ ಲಕ್ಕಣ್ಣ ದಂಡೇಶ ಮಹಾನ್ ಶಿವಭಕ್ತನಾಗಿದ್ದನು. ಮಹಾಮಂತ್ರಿಯಾಗಿಯೂ ಅನೇಕ ಲೋಕೋಪಕಾರಿ ಕಾರ್ಯಗಳನ್ನು ಮಾಡಿದ್ದನು. ದಂಡೇಶ ಶ್ರೇಷ್ಠ ಕವಿಯೂ ಆಗಿದ್ದ, ಕಲಿಯೂ ಆಗಿದ್ದ. ಶಿವತತ್ತ್ವ ಚಿಂತಾಮಣಿ ಎಂಬ ಮಹಾನ್ ಕಾವ್ಯವನ್ನು ರಚಿಸಿದನು. ಕಾಯಕಕ್ಕೆ ಹೆಚ್ಚು ಮಹತ್ವ ನೀಡುತ್ತಿದ್ದನು. ಕಾಯಕದಲ್ಲಿ ಯಾವುದೇ ಬೇಧ ಭಾವಗಳಿಲ್ಲ ಎನ್ನುತ್ತಿದ್ದನು. ಯಾವ ಕೆಲಸ ಮಾಡಿದರು ಸತ್ಯ ಶುದ್ಧ ಕಾಯಕದಿಂದ ಮಾಡಬೇಕು. ಮಾಡಿಯೂ ಮಾಡದ ಭಾವವಿರಬೇಕು ಎಂದು ಹೇಳಿದನು.

ಲಕ್ಕಣ್ಣ ದಂಡೇಶ ಬಹುಮುಖ ಪ್ರತಿಭಾವಂತ. ಶಿವತತ್ತ್ವ ಚಿಂತಾಮಣಿಯು ವೇದಾಗಮಗಳು, ವಚನಗಳು ಹಾಗೂ ಪುರಾಣ ಗ್ರಂಥಗಳ ಹೂರಣವನ್ನು ಒಳಗೊಂಡಿದೆ. ವೇದ, ಶಾಸ್ತ್ರ, ಪುರಾಣ ಮತ್ತು ಇತಿಹಾಸಗಳು ಸನಾತನ ಧರ್ಮ ಮಂಟಪದ ನಾಲ್ಕು ಆಧಾರ ಸ್ತಂಭಗಳು. ಉಪನಿಷತ್ತಿನಲ್ಲಿ ಹೇಳುವಂತೆ ಚಿಕ್ಕದರಲ್ಲಿ ಸುಖವಿಲ್ಲ, ದೊಡ್ಡದರಲ್ಲಿ ಸುಖವಿದೆ ಎಂಬಂತೆ 18 ಬಗೆಯ ವರ್ಣನೆಗಳನ್ನು ಈ ಮಹಾಕಾವ್ಯ ಒಳಗೊಂಡಿದೆ. ಶಿವನೇ ಈ ಕಾವ್ಯದ ನಾಯಕನಾಗಿರುತ್ತಾನೆ. ಶಿವ ಮತ್ತು ಗಿರಿಜೆಯ ಅಂಶದಿಂದ ಜನಿಸಿದ ಮಗುವಿನಿಂದ ರಾಕ್ಷಸ ತಾರಕಾಸುರನ ಸಂಹಾರವಾಗಬೇಕಿರುತ್ತದೆ. ಎಲ್ಲ ಕಾಲದಲ್ಲಿಯೂ ಒಳ್ಳೆಯವರಿಗೂ ಮತ್ತು ಕೆಟ್ಟವರಿಗೂ ಸದಾ ಯುದ್ಧಗಳು ನಡೆಯುತ್ತಲೇ ಇರುತ್ತವೆ. ಅದರಲ್ಲಿ ಒಳ್ಳೆಯದೇ ಗೆಲ್ಲುತ್ತದೆ ಎಂದು ಅವರು ತಿಳಿಸಿದರು.

ವಿದುಷಿ ಎಂ.ವಿ. ಶುಭಾ ರಾಘವೇಂದ್ರ ವಾಚನ ಮಾಡಿದರು. ಟಿ. ನರಸೀಪುರದ ಸುಂದರಮ್ಮ ಮತ್ತು ಮಕ್ಕಳು ಸೇವಾರ್ಥ ನೆರವೇರಿಸಿದರು. ಭಕ್ತಾದಿಗಳು ಹಾಗೂ ಆಧ್ಯಾತ್ಮಿಕ ಜಿಜ್ಞಾಸು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!