ಕಾರ್ಕಳ: ಕರಾವಳಿಯ ಶ್ರೀಮಂತ ಜಾನಪದ ಸಂಸ್ಕೃತಿಗೆ ವೈಚಾರಿಕ ಆಯಾಮ ನೀಡುವ ಮಹತ್ವದ ಸಂಶೋಧನಾ ಕೃತಿಯಾದ ‘ಭೂತಾರಾಧನೆ ಮಾಯದ ನಡೆ, ಜೋಗದ ನುಡಿ’ ಕೃತಿಯ ಬಿಡುಗಡೆ ಸಮಾರಂಭವು ಕ್ರಿಯೇಟಿವ್ ಪುಸ್ತಕ ಮನೆ, ಕಾರ್ಕಳ ಹಾಗೂ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹಯೋಗದಲ್ಲಿ ಶನಿವಾರ ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಎಲ್.ಎಫ್. ರಸ್ಕಿನ್ ಸಭಾಂಗಣದಲ್ಲಿ ನಡೆಯಿತು.
ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆ ಅಧ್ಯಕ್ಷ ಡಾ. ನಾಗಪ್ಪ ಗೌಡ ಆರ್. ಮಾತನಾಡಿ, ಭೂತಾರಾಧನೆ ಕುರಿತ ಸಂಶೋಧನೆಗಳು ಕನ್ನಡ ಸಂಸ್ಕೃತಿಯ ಬೇರುಗಳನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತವೆ ಎಂದರು.ಕೃತಿಕಾರ ಡಾ. ಕೆ. ಚಿನ್ನಪ್ಪ ಗೌಡ ಮಾತನಾಡಿ, ಈ ಕೃತಿ ಕ್ಷೇತ್ರ ಅಧ್ಯಯನ, ಅನುಭವ ಹಾಗೂ ಸಂಶೋಧನೆಯ ಫಲವಾಗಿದ್ದು, ಭೂತಾರಾಧನೆಯ ಒಳಾರ್ಥವನ್ನು ಮುಂದಿನ ತಲೆಮಾರಿಗೆ ತಲುಪಿಸುವ ಉದ್ದೇಶ ಹೊಂದಿದೆ ಎಂದರು.ಕಾರ್ಕಳ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹಸಂಸ್ಥಾಪಕ ಶ್ರೀ ಅಶ್ವತ್ ಎಸ್.ಎಲ್. ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಾನಪದ ಸಂಸ್ಕೃತಿ ಕೇವಲ ಆಚರಣೆಯಲ್ಲ. ಅದು ಸಮುದಾಯದ ಬದುಕಿನ ಜ್ಞಾನ ಭಂಡಾರ. ಇಂತಹ ಸಂಶೋಧನಾ ಕೃತಿಗಳು ಆ ಜ್ಞಾನವನ್ನು ಸಮಾಜದ ಮುಂದೆ ತರುವ ಮಹತ್ವದ ಕೆಲಸ ಮಾಡುತ್ತವೆ. ಕ್ರಿಯೇಟಿವ್ ಪುಸ್ತಕ ಮನೆ ಇಂತಹ ಮೌಲ್ಯಯುತ ಕೃತಿಗಳನ್ನು ಪ್ರಕಟಿಸುವ ಮೂಲಕ ಕನ್ನಡ ಸಂಸ್ಕೃತಿಗೆ ಸೇವೆ ಸಲ್ಲಿಸುತ್ತಿದೆ ಎಂದು ಹೇಳಿದರು.
ಖ್ಯಾತ ದೈವ ಪಾತ್ರಧಾರರಾದ ಶೇಖರ ಪರವ ಕಾಪುಮಜಲು ಅವರಿಗೆ ಗೌರವ ಸನ್ಮಾನ ಮಾಡಲಾಯಿತು. ಜಾನಪದ ವಿದ್ವಾಂಸ ಡಾ. ಅಶೋಕ ಆಳ್ವ ಅವರು ಸನ್ಮಾನಪತ್ರವನ್ನು ವಾಚಿಸಿದರು. ಕ್ರಿಯೇಟಿವ್ ಪುಸ್ತಕ ಮನೆ ವತಿಯಿಂದ ಅತಿಥಿ ಅಭ್ಯಾಗತರನ್ನು ಸನ್ಮಾನಿಸಿ ಗೌರವಿಸಲಾಯಿತು.ಕರಾವಳಿ ಲೇಖಕಿಯರ–ವಾಚಕಿಯರ ಸಂಘ, ಗಿಳಿವಿಂಡು (ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆ, ಮಂಗಳಗಂಗೋತ್ರಿ ಹಾಗೂ ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಮಂಗಳೂರು ಕಾರ್‍ಯಕ್ರಮಕ್ಕೆ ಸಹಕಾರ ನೀಡಿದವು.ಸಾಹಿತ್ಯ, ಸಂಸ್ಕೃತಿ ಹಾಗೂ ಜಾನಪದ ಆಸಕ್ತರಿಂದ ಸಮಾರಂಭಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಉಪನ್ಯಾಸಕ ಡಾ. ದಿನೇಶ್ ನಾಯಕ್ ನಿರೂಪಿಸಿದರು. ಉಪನ್ಯಾಸಕಿ ಪ್ರಿಯಾಂಕ ಸ್ವಾಗತಿಸಿ, ಡಾ. ಮಹಾಲಿಂಗ ಭಟ್ ಕೆ. ವಂದಿಸಿದರು.