ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಇಲ್ಲಿನ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ಕರೆದು ಸಮ್ಮೇಳನಾಧ್ಯಕ್ಷರ ಆಯ್ಕೆ ಘೋಷಿಸಿದ ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ, ಇದೇ ಮೊದಲ ಬಾರಿಗೆ ಮಹಿಳೆಯರಿಗೆ ಸಮ್ಮೇಳನ ಅಧ್ಯಕ್ಷರಾಗುವ ಅವಕಾಶ ಕಲ್ಪಿಸಲಾಗಿದೆ ಎಂದರು.
75ಕ್ಕೂ ಹೆಚ್ಚು ಕೃತಿಗಳ ಪ್ರಕಟಿಸಿರುವ ಸಂಧ್ಯಾರೆಡ್ಡಿ ಚಿತ್ರದುರ್ಗ ನೆಲದವರೆಂಬುವುದು ಹೆಮ್ಮೆಯ ಸಂಗತಿ. ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿರುವ ಅವರು ಸಾಹಿತ್ಯ ಅಕಾಡೆಮಿ ಸೇರಿದಂತೆ ಹಲವು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹಾಗಾಗಿ ಅವರ ಸಾಹಿತ್ಯ ಕೃಷಿ ಪರಿಗಣಿಸಿ ಸಮ್ಮೇಳನಾಧ್ಯಕ್ಷರ ಗೌರವ ನೀಡಲಾಗಿದೆ ಎಂದರು.ಆಯ್ಕೆ ಪ್ರಕ್ರಿಯೆಯ ಎರಡು ದಿನಗಳ ಹಿಂದಯೇ ಮುಗಿಸಲಾಗಿತ್ತು. ಕೆಲ ಗೊಂದಲಗಳು ಇದ್ದ ಕಾರಣಕ್ಕೆ ತುಸು ತಡವಾಯಿತು ಎಂದು ಶಿವಸ್ವಾಮಿ ಹೇಳಿದರು. ಸಮ್ಮೇಳನಕ್ಕೆ ಕೇಂದ್ರ ಸಮಿತಿಯಿಂದ ಯಾವುದೇ ಹಣಕಾಸು ನೆರವು ಲಭ್ಯವಾಗುತ್ತಿಲ್ಲ. ಸ್ಥಳೀಯ ಸಂಪನ್ಮೂಲಗಳ ಕ್ರೋಡೀಕರಣ ಮಾಡಿಕೊಂಡು ಅಚ್ಚುಕಟ್ಟಾಗಿ ಸಮ್ಮೇಳನ ನಿರ್ವಹಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಜಿ.ಜಿ.ಸಮುದಾಯ ಭವನದಲ್ಲಿ ಎರಡು ದಿನಗಳ ಸಮ್ಮೇಳನ ನಡೆಸಲಾಗುತ್ತಿದೆ ಎಂದು ಚಿತ್ರದುರ್ಗ ತಾಲೂಕ ಘಟಕದ ಅಧ್ಯಕ್ಷ ವಿ.ಎಲ್. ಪ್ರಶಾಂತ್ ಹೇಳಿದರು.
*ಮಹಿಳೆಯರಿಗೆ ಆದ್ಯತೆಗೆ ಆಗ್ರಹ: ಇದಕ್ಕೂ ಮೊದಲು ಸುದ್ದಿಗೋಷ್ಠಿ ನಡೆಸಿದ ಅನ್ನದ ಭಾಷೆ ಕನ್ನಡ ವೇದಿಕೆ ಸದಸ್ಯರು 19ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ಮಹಿಳೆಯರಿಗೆ ಕಲ್ಪಿಸಬೇಕೆಂದು ಆಗ್ರಹಿಸಿದ್ದರು. ಇದುವರೆಗೂ ನಡೆದಿರುವ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ. ಹಿಂದೊಮ್ಮೆ ಮೌಖಿಕ ಸಾಹಿತ್ದ ಖನಿ, ನಾಡೋಜೆ, ಜಾನಪದ ಸಿರಿ ಸಿರಿಯಜ್ಜಿ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡುವಂತೆ ಆಗ್ರಹಗಳು ಕೇಳಿ ಬಂದಿದ್ದವಾದರೂ ಪರಿಗಣನೆ ಮಾಡಿರಲಿಲ್ಲ. ಅಷ್ಟರ ಮಟ್ಟಿಗೆ ಕನ್ನಡ ಸಾಹಿತ್ಯ ಪರಿಷತ್ತು ಮಹಿಳೆಯರ ನಿರಾಕರಣೆ ಮಾಡಿಕೊಂಡು ಬಂದಿದೆ ಎಂದು ದೂರಿದರು. ವೈಜ್ಞಾನಿಕ ಲೇಖನ ಹಾಗೂ ಕೃತಿ, ಪ್ರವಾಸ ಕಥನಗಳ ಮೂಲಕ ವೈಚಾರಿಕತೆ ಸ್ಪಷ್ಟ ಜಾಡು ಮಾಡಿಕೊಟ್ಟಿರುವ ನೇಮಿಚಂದ್ರ ಮತ್ತು ಜಾನಪದ ಕ್ಷೇತ್ರದಲ್ಲಿ ಕೆಲಸ ಮಾಡಿದ ಹಾಗೂ ಲೇಖಕಿಯರ ಸಂಘದ ಅಧ್ಯಕ್ಷರಾಗಿದ್ದ ಸಂಧ್ಯಾರೆಡ್ಡಿ ಚಿತ್ರದುರ್ಗ ಜಿಲ್ಲೆಯವರೇ ಆಗಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಕೃಷಿ ಮಾಡುತ್ತಾ ಸಾಗಿದ್ದಾರೆ. ಇಬ್ಬರಲ್ಲಿ ಯಾರಾದರೊಬ್ಬರನ್ನು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡಬೇಕೆಂದು ಆಗ್ರಹಿಸಿದರು. ವೇದಿಕೆಯ ಜೆ.ಯಾದವರೆಡ್ಡಿ, ಸಂಗೇನಹಳ್ಳಿ ಅಶೋಕ್ ಕುಮಾರ್, ಶ.ಮಂಜುನಾಥ್ ಚಿಕ್ಕಪ್ಪನಹಳ್ಳಿ ಷಣ್ಮುಖ,ಸುಜಾತ, ವಿನಯ್ ತೊಡರನಾಳ್ ಇದ್ದರು.