ಗುರಿ ದೊಡ್ಡದಾಗಿರಲಿ, ಪ್ರಯತ್ನ ನಿರಂತರವಾಗಿರಲಿ: ಡಾ.ಕೆ.ವಿ. ರಾಜೇಂದ್ರ

KannadaprabhaNewsNetwork |  
Published : Mar 25, 2024, 12:53 AM IST
15 | Kannada Prabha

ಸಾರಾಂಶ

ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಪರ್ಧೆ ಸಾಮಾನ್ಯವಾಗಿದ್ದು, ಯುಪಿಎಸ್ಸಿ, ಕೆಎಎಸ್ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿಯಾಗಲು ಸಿಕ್ಕ ಅವಕಾಶಗಳನ್ನು ಸದುಯೋಗಪಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಪ್ರತಿದಿನ 5 ರಿಂದ 6 ಗಂಟೆಗಳ ಕಾಲ ನಿಯಮಿತವಾಗಿ ಓದುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಪ್ರತಿಯೊಬ್ಬ ಪರೀಕ್ಷಾರ್ಥಿಗೂ ಕಠಿಣ ಪರಿಶ್ರಮ, ತಾಳ್ಮೆ, ಸಮಯ ಪ್ರಜ್ಞೆ, ಏಕಾಗ್ರತೆ ಎಂಬುದು ಬಹಳ ಮುಖ್ಯವಾಗಿದ್ದು, ಅದನ್ನು ಮೈಗೂಡಿಸಿಕೊಳ್ಳಬೇಕು

ಕನ್ನಡಪ್ರಭ ವಾರ್ತೆ ಮೈಸೂರು

ಪ್ರಸ್ತುತ ನಾವು ಸ್ಪರ್ಧಾತ್ಮಕ ಯುಗದಲ್ಲಿ ಬದುಕುತ್ತಿದ್ದೇವೆ. ಇಲ್ಲಿ ಯಾವುದೇ ಸ್ಪರ್ಧಾತ್ಮಕ ಪರೀಕ್ಷಾರ್ಥಿಯೂ ಏನನ್ನೇ ಸಾಧಿಸಬೇಕಾದರೂ ಮೊದಲು ತನ್ನ ಗುರಿಯನ್ನು ದೊಡ್ಡದಾಗಿರಿಸಿಕೊಂಡು, ಅದರ ಕಡೆಗೆ ನಿರಂತರ ಪ್ರಯತ್ನ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಸಲಹೆ ನೀಡಿದರು.

ನಗರದ ಯುವರಾಜ ಕಾಲೇಜಿನ ಸಭಾಂಗಣದಲ್ಲಿ ಮೈಸೂರು ವಿಶ್ವವಿದ್ಯಾನಿಲಯ ವೃತ್ತಿ ಕೇಂದ್ರ, ಮೈಸೂರು ವಿವಿ ನೇಗಿಲಯೋಗಿ ವಿದ್ಯಾವರ್ಧಕ ಸ್ಪರ್ಧಾ ಕೇಂದ್ರ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಭಾನುವಾರ ಆಯೋಜಿಸಿದ್ದ ಕೆಎಎಸ್ ಹುದ್ದೆಯ ಆಕಾಂಕ್ಷಿಗಳಿಗೆ ಉಚಿತ ಕಾರ್ಯಾಗಾರವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಪರ್ಧೆ ಸಾಮಾನ್ಯವಾಗಿದ್ದು, ಯುಪಿಎಸ್ಸಿ, ಕೆಎಎಸ್ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿಯಾಗಲು ಸಿಕ್ಕ ಅವಕಾಶಗಳನ್ನು ಸದುಯೋಗಪಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಪ್ರತಿದಿನ 5 ರಿಂದ 6 ಗಂಟೆಗಳ ಕಾಲ ನಿಯಮಿತವಾಗಿ ಓದುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಪ್ರತಿಯೊಬ್ಬ ಪರೀಕ್ಷಾರ್ಥಿಗೂ ಕಠಿಣ ಪರಿಶ್ರಮ, ತಾಳ್ಮೆ, ಸಮಯ ಪ್ರಜ್ಞೆ, ಏಕಾಗ್ರತೆ ಎಂಬುದು ಬಹಳ ಮುಖ್ಯವಾಗಿದ್ದು, ಅದನ್ನು ಮೈಗೂಡಿಸಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.

ನಾವು ಪ್ರತಿನಿತ್ಯವೂ ಹೊಸ ಹೊಸದಾಗಿ ನೋಡಿದ, ಕೇಳಿದ ವಿಷಯಗಳನ್ನು ವೈಜ್ಞಾನಿಕವಾಗಿ ಯೋಚಿಸಿ ಅದರ ಬಗ್ಗೆ ತಿಳಿದುಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗೆ ನಿಗದಿತ ದಿನಾಂಕ ಎಂಬುದಿರುತ್ತದೆ. ಆದರೆ, ಜೀವನದಲ್ಲಿ ಅಧ್ಯಯನದಲ್ಲಿ ಪ್ರತಿದಿನವು ಸಹ ಹೊಸ ಪರೀಕ್ಷೆಗಳು ಎದುರಾಗುತ್ತವೆ. ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಮಾಡುವ ಬದಲು ಪರೀಕ್ಷೆಯನ್ನು ಎದುರಿಸುವಲ್ಲಿ ಆರಂಭದಿಂದಲೂ ಸತತ ಪ್ರಯತ್ನ ಮಾಡಬೇಕು. ಕಠಿಣ ಪರಿಶ್ರಮ, ನಿರಂತರ ಪ್ರಯತ್ನಕ್ಕೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಅವರು ತಿಳಿಸಿದರು.

ಪ್ರತಿನಿತ್ಯ ದಿನಪತ್ರಿಕೆಗಳು, ಪುಸ್ತಕಗಳು, ಕಾದಂಬರಿಗಳನ್ನು ಓದುವ ಹವ್ಯಾಸ ಮಾಡಿಕೊಳ್ಳಬೇಕು. ಸ್ಪರ್ಧಾರ್ಥಿಗಳೂ ಯಾವಾಗಲೂ ಐಎಎಸ್, ಐಪಿಎಸ್ ಅಂತಹ ದೊಡ್ಡ ಹುದ್ದೆಗಳಿಗೆ ಸೇರುವ ಆಸೆಯನ್ನು ಹೊಂದಿ, ಪ್ರಯತ್ನ ಮಾಡಿದ್ದಲ್ಲಿ ಕನಿಷ್ಠ ಪಕ್ಷ ಕೆಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಮಾಜಕ್ಕೆ ಕೊಡುಗೆ ನೀಡಬಹುದು ಎಂದರು.

ಎಷ್ಟೋ ಸ್ಪರ್ಧಾರ್ಥಿಗಳಲ್ಲಿ ಭಾಷೆಯ ಬಗ್ಗೆ ಗೊಂದಲಗಳಿವೆ. ಇಂಗ್ಲೀಷ್ ನಲ್ಲೇ ಎಲ್ಲವೂ ಕಡ್ಡಾಯವಲ್ಲ. ಪ್ರಾದೇಶಿಕ ಭಾಷೆಗಳಲ್ಲಿಯೂ ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದು. ವಿವಿಧ ರೀತಿಯ ಹುದ್ದೆಗಳಿದ್ದರೂ ಪ್ರಶ್ನೆ ಪತ್ರಿಕೆಗಳ ಸ್ವರೂಪ ಒಂದೇ ಆಗಿರುತ್ತದೆ. ಆದ್ದರಿಂದ ಪ್ರಚಲಿತ ವಿದ್ಯಮಾನಗಳು ಹಾಗೂ ಹಳೇ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಹೆಚ್ಚು ಮನನ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.

ಮೈಸೂರು ಮಹಾನಗರ ಪಾಲಿಕೆಯ ಆಯುಕ್ತೆ ಡಾ.ಎನ್. ಎನ್. ಮಧು, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಬಿ. ರಂಗೇಗೌಡ, ಮೈಸೂರು ವಿವಿ ಪಿಎಂಇ ಬೋರ್ಡ್ ನಿರ್ದೇಶಕ ಪ್ರೊ.ಎನ್. ನಾಗರಾಜ್, ಮೈಸೂರು ವಿವಿ ಯುಸಿಎಚ್ ಸಂಯೋಜಕಿ ಪ್ರೊ. ಹಂಸವೇಣಿ, ಮೈಸೂರು ವಿವಿ ಸ್ಪರ್ಧಾ ಕೇಂದ್ರದ ಸಂಯೋಜಕ ಡಾ. ಸುರೇಶ್, ಯುವರಾಜ ಕಾಲೇಜಿನ ಪ್ರೊ. ದೇವಿಕಾ ಮೊದಲಾದವರು ಇದ್ದರು.

ಸಮಾಜಕ್ಕೆ ಅಧಿಕಾರಿಗಳ ಕೊಡುಗೆ ಹೆಚ್ಚಾಗಿದ್ದು, ಸ್ಪರ್ಧಾರ್ಥಿಗಳು ಶ್ರಮಪಟ್ಟು ನಿರಂತರವಾಗಿ ಓದುವ ಅಭ್ಯಾಸದಲ್ಲಿ ತೊಡಗಬೇಕು. ಕಠಿಣ ಪರಿಶ್ರಮ, ತಾಳ್ಮೆ ಪ್ರತಿ ಸ್ಪರ್ಧಾರ್ಥಿಗೂ ಅತ್ಯಂತ ಅವಶ್ಯಕವಾದುದು. ಇವುಗಳನ್ನು ಸಾಧಿಸಿದ್ದೇ ಆದಲ್ಲಿ ಆತ ಯಶಸ್ಸು ಸಾಧಿಸಬಹುದು. ನಿರಂತರ ಪ್ರಯತ್ನದಿಂದ ಯಶಸ್ಸು ಸಾಧಿಸಬಹುದು. ಫೇಲ್ ಎಂಬುದು ಪಾಸ್ ಆಗುವ ಮೊದಲ ಹೆಜ್ಜೆ ಎಂದು ನಿರಂತರ ಪ್ರಯತ್ನ ಮಾಡಬೇಕು. ಆದಷ್ಟು ಸೆಲ್ಫ್ ಮೋಟಿವೇಟ್ ಮಾಡಿಕೊಳ್ಳಬೇಕು.

- ಡಾ.ಎನ್.ಎನ್. ಮಧು, ಆಯುಕ್ತೆ, ಮೈಸೂರು ಮಹಾನಗರ ಪಾಲಿಕೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ
‘ಆತ್ಮನಿರ್ಭರ ಭಾರತ’ಕ್ಕೆ ಅಮೆಜಾನ್ ಪುಷ್ಟಿ